ಭಗವಾನ ಶಿವ ಮತ್ತು ಶ್ರೀ ಗಣೇಶನನ್ನು ಅವಮಾನಿಸುವ ಜಾಹೀರಾತನ್ನು ಹಿಂಪಡೆದ ಕಂಪನಿ

  • ಛತ್ತೀಸಗಢ: ಹಿಂದೂ ಜನಜಾಗೃತಿ ಸಮಿತಿಯ ಹೋರಾಟಕ್ಕೆ ಜಯ!

  • ಲಿಖಿತ ರೂಪದಲ್ಲಿ ಕ್ಷಮೆಯಾಚನೆ

(ಈ ಚಿತ್ರವನ್ನು ಯಾರದೇ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವ ಉದ್ದೇಶದಿಂದ ಪ್ರಕಟಿಸಿಲ್ಲ, ಬದಲಾಗಿ ನಡೆದಿರುವ ಅಪಚಾರದ ಬಗ್ಗೆ ತಿಳಿಸಲು ಪ್ರಕಟಿಸಲಾಗಿದೆ. – ಸಂಪಾದಕರು)

ರಾಯಪುರ (ಛತ್ತೀಸಗಢ) – ಮಹಾಶಿವರಾತ್ರಿಯ ಪವಿತ್ರ ಹಬ್ಬದ ನಿಮಿತ್ತ ಛತ್ತೀಸಗಢದ ಪ್ರಮುಖ ದಿನಪತ್ರಿಕೆಗಳಾದ ‘ದೈನಿಕ ಭಾಸ್ಕರ’ ಮತ್ತು ‘ಹರಿಭೂಮಿ’ಗಳಲ್ಲಿ ಭಗವಾನ ಶಿವ ಮತ್ತು ಶ್ರೀ ಗಣೇಶನನ್ನು ವಾಣಿಜ್ಯ ಜಾಹೀರಾತುಗಳಲ್ಲಿ ಅಯೋಗ್ಯವಾಗಿ ಬಳಸಲಾಗಿತ್ತು. ಈ ಜಾಹೀರಾತು ಪ್ರಕಟಿಸಿದ ‘ಶ್ರೀ ಗಣೇಶ ಗ್ಲೋಬಲ್ ಗುಲಾಲ್ ಪ್ರೈವೇಟ್ ಲಿಮಿಟೆಡ್’ ಕಂಪನಿಯ ವಿರುದ್ಧ ಹಿಂದೂ ಜನಜಾಗೃತಿ ಸಮಿತಿಯು ನಡೆಸಿದ ತೀವ್ರ ಪ್ರತಿರೋಧಕ್ಕೆ ದೊಡ್ಡ ಯಶಸ್ಸು ಸಿಕ್ಕಿದೆ. ಸಮಿತಿಯ ಮಹಾರಾಷ್ಟ್ರ ಮತ್ತು ಛತ್ತೀಸಗಢ ರಾಜ್ಯ ಸಂಘಟಕರಾದ ಶ್ರೀ. ಸುನೀಲ ಘನವಟ್ ಅವರು ಈ ಅವಮಾನಕಾರಿ ಜಾಹೀರಾತಿನ ವಿರುದ್ಧ ಪೊಲೀಸ್ ಕ್ರಮಕ್ಕೆ ಆಗ್ರಹಿಸಿದ ನಂತರ, ಕಂಪನಿಯು ಲಿಖಿತ ರೂಪದಲ್ಲಿ ಬೇಷರತ್ ಕ್ಷಮೆಯಾಚಿಸಿದೆ.

ಜಾಹೀರಾತಿನಲ್ಲಿ ಅಯೋಗ್ಯವಾಗಿದ್ದ ಅಂಶಗಳೇನು?

ಈ ಜಾಹೀರಾತಿನಲ್ಲಿ ಶ್ರೀ ಗಣೇಶನ ಕೈಯಲ್ಲಿ ‘ಗುಲಾಲ್’ (ಬಣ್ಣ) ಮತ್ತು ‘ಠಂಡಾಯಿ’ ಪಾನೀಯದ ಪ್ಯಾಕೆಟ್‌ಗಳನ್ನು ತೋರಿಸಲಾಗಿತ್ತು. ದೇವತೆಗಳನ್ನು ‘ಮಾಡೆಲ್’ಗಳಂತೆ (ಕಂಪನಿಯ ಉತ್ಪನ್ನಗಳ ಪ್ರಚಾರಕ್ಕಾಗಿ ನೇಮಕಗೊಂಡ ವ್ಯಕ್ತಿಗಳಂತೆ) ಪ್ರದರ್ಶಿಸಲಾಗಿತ್ತು. ಇದರೊಂದಿಗೆ ಜಾಹೀರಾತಿನಲ್ಲಿ ಭಗವಾನ ಶಿವ ಮತ್ತು ಶಿವಲಿಂಗದ ಸುತ್ತಲೂ ‘ಕ್ಯಾಪ್ಟನ್ ಅಮೆರಿಕಾ’ದಂತಹ ವಿದೇಶಿ ಕಾಲ್ಪನಿಕ ಪಾತ್ರಗಳ, ಹಾಗೂ ಇತರ ಉತ್ಪನ್ನಗಳ ಚಿತ್ರಣವನ್ನು ಮಾಡಲಾಗಿತ್ತು.

ತಪ್ಪು ಒಪ್ಪಿಕೊಂಡ ಕಂಪನಿ

ಸಮಿತಿಯ ವಿರೋಧದ ನಂತರ ಕಂಪನಿಯ ಸಂಚಾಲಕ ಉಮಂಗ ಗೋಯಲ್ ಅವರು, ಶ್ರೀ ಗಣೇಶನ ಕೈಯಲ್ಲಿ ತಮ್ಮ ಉತ್ಪನ್ನವನ್ನು ತೋರಿಸಿರುವುದು ತಮ್ಮ ದೊಡ್ಡ ತಪ್ಪು ಮತ್ತು ಅಜಾಗರೂಕತೆಯಿಂದಾದ ದೋಷವೆಂದು ಒಪ್ಪಿಕೊಂಡಿದ್ದಾರೆ. ಕಂಪನಿಯು ತನ್ನ ಪತ್ರದಲ್ಲಿ ಈ ದುರದೃಷ್ಟಕರ ಘಟನೆಯು ಅಜಾಗರೂಕತೆಯಿಂದ ನಡೆದಿದೆ ಮತ್ತು ಇದಕ್ಕಾಗಿ ನಾವು ಸಮಸ್ತ ಹಿಂದೂ ಸನಾತನಿ ಸಮಾಜದ ಕ್ಷಮೆ ಯಾಚಿಸುತ್ತೇವೆ ಎಂದು ತಿಳಿಸಿದೆ. ಅಲ್ಲದೆ ಭವಿಷ್ಯದಲ್ಲಿ ಇಂತಹ ತಪ್ಪು ಮರುಕಳಿಸುವುದಿಲ್ಲವೆಂದು ಭರವಸೆ ನೀಡಿದೆ.