ಪಾಕಿಸ್ತಾನ: ಸಿಂಧ್‌ನಲ್ಲಿ ಹಿಂದೂ ಅಲ್ಪಸಂಖ್ಯಾತರ ಮೇಲೆ ಉದ್ದೇಶಪೂರ್ವಕ ದಾಳಿ !

ಕರಾಚಿ (ಪಾಕಿಸ್ತಾನ) – ಪಾಕಿಸ್ತಾನದ ಸಿಂಧ್ ಪ್ರಾಂತ್ಯದಲ್ಲಿ ಅತಿ ಹೆಚ್ಚು ಹಿಂದೂ ಅಲ್ಪಸಂಖ್ಯಾತರು ವಾಸಿಸುತ್ತಿದ್ದಾರೆ. ಈ ಪ್ರಾಂತ್ಯದಲ್ಲಿ ಧರ್ಮನಿಂದನೆಯ ಆರೋಪಗಳ ಮೇಲೆ ಪದೇ ಪದೇ ಧಾರ್ಮಿಕ ಹಿಂಸಾಚಾರಗಳು ನಡೆಯುತ್ತಿವೆ. ಇತ್ತೀಚೆಗೆ ಬಿಡುಗಡೆಯಾದ ವರದಿಯೊಂದರ ಪ್ರಕಾರ, ಈ ದಾಳಿಗಳನ್ನು ಒಂದು ನಿರ್ದಿಷ್ಟ ಯೋಜಿತ ರೀತಿಯಲ್ಲಿ ಮಾಡಲಾಗುತ್ತಿದೆ. ಈ ಹಿಂಸಾತ್ಮಕ ಘಟನೆಗಳು ಒಂದು ಆರೋಪದೊಂದಿಗೆ ಪ್ರಾರಂಭವಾಗುತ್ತವೆ, ನಂತರ ಧಾರ್ಮಿಕ ಮುಖಂಡರಿಂದ ಜನಸಂದಣಿಯನ್ನು ಸೇರಿಸಲಾಗುತ್ತದೆ, ಅಶಾಂತಿಯನ್ನು ಸೃಷ್ಟಿಸಲಾಗುತ್ತದೆ ಮತ್ತು ಅಂತಿಮವಾಗಿ ಪೀಡಿತ ಹಿಂದೂ ಸಮುದಾಯವನ್ನು ಅಲ್ಲಿಂದ ಬಲವಂತವಾಗಿ ಹೊರಹಾಕುವ ಪ್ರಕ್ರಿಯೆ ನಡೆಯುತ್ತದೆ.

ಹಿಂದೂ ರೈತನ ಕೊಲೆ ಮತ್ತು ಹೊರಬಂದ ಸತ್ಯ

ನೇಪಾಳಿ ಸುದ್ದಿ ಸಂಸ್ಥೆ ‘ಖಬರ್‌ಹಬ್’ ವರದಿಯ ಪ್ರಕಾರ, ಸಿಂಧ್‌ನಲ್ಲಿ ಇತ್ತೀಚೆಗೆ ನಡೆದ ಹಿಂದೂ ರೈತನೊಬ್ಬನ ಕೊಲೆಯು ಪಾಕಿಸ್ತಾನದಲ್ಲಿನ ಧಾರ್ಮಿಕ ಅಲ್ಪಸಂಖ್ಯಾತರ ಪರಿಸ್ಥಿತಿಯನ್ನು ಮತ್ತೊಮ್ಮೆ ಜಗತ್ತಿಗೆ ತೋರಿಸಿದೆ. ಬಲಿಪಶುವು ಕೋಲ್ಹಿ ಸಮುದಾಯದ ರೈತನಾಗಿದ್ದು, ಭೂಮಿಯ ಬಳಕೆಯ ವಿಷಯವಾಗಿ ಸ್ಥಳೀಯ ಪ್ರಭಾವಿ ಭೂಮಾಲೀಕನೊಂದಿಗೆ ವಿವಾದ ಹೊಂದಿದ್ದನು. ಈ ವಿವಾದದ ನಂತರ, ಆ ಹಿಂದೂ ರೈತನನ್ನು ಹಗಲು ಹೊತ್ತಿನಲ್ಲೇ ಗುಂಡಿಕ್ಕಿ ಕೊಲ್ಲಲಾಯಿತು. ಈ ಘಟನೆಯ ನಂತರ ಇಡೀ ಸಿಂಧ್ ಪ್ರಾಂತ್ಯದಲ್ಲಿ ಪ್ರತಿಭಟನೆಗಳು ಭುಗಿಲೆದ್ದವು. ಹಿಂದೂ ಸಮುದಾಯದವರು ಹೆದ್ದಾರಿಗಳನ್ನು ತಡೆದು ನ್ಯಾಯಕ್ಕಾಗಿ ಒತ್ತಾಯಿಸಿದರು.

ಅಪರಾಧಿಗಳಿಗೆ ರಕ್ಷಣೆ, ತಾರತಮ್ಯ

ವರದಿಯ ಪ್ರಕಾರ, ಇದು ಕೇವಲ ಒಂದು ಕೊಲೆಯ ಪ್ರಕರಣವಲ್ಲ. ಈ ಘಟನೆಯು ಅಪರಾಧಿಗಳಿಗೆ ಸಿಗುತ್ತಿರುವ ರಕ್ಷಣೆ, ಊಳಿಗಮಾನ್ಯ ಪದ್ಧತಿಯ ಶಕ್ತಿ ಮತ್ತು ಧಾರ್ಮಿಕ ತಾರತಮ್ಯವು ಎಷ್ಟು ಆಳವಾಗಿ ಬೇರೂರಿದೆ ಎಂಬುದನ್ನು ಬಯಲು ಮಾಡುತ್ತದೆ. ಕಳೆದ ಹಲವಾರು ದಶಕಗಳಿಂದ ಪಾಕಿಸ್ತಾನದ ಹಿಂದೂಗಳ ವಾಸ್ತವ ಸ್ಥಿತಿಯನ್ನು ಇದು ಎತ್ತಿ ತೋರಿಸಿದೆ. ಅನೇಕ ಅಲ್ಪಸಂಖ್ಯಾತರಿಗೆ, ವಿಶೇಷವಾಗಿ ಹಿಂದೂಗಳಿಗೆ, ಪಾಕಿಸ್ತಾನವು ನೆಲೆಸಲು ಅತ್ಯಂತ ಕಠಿಣ ಸ್ಥಳವಾಗಿ ಬದಲಾಗುತ್ತಿದೆ. ಸುಳ್ಳು ಆರೋಪಗಳು, ಬಲವಂತದ ಮತಾಂತರ, ಅಪಹರಣ, ಹಣದ ಒತ್ತಡ ಮತ್ತು ಹಿಂಸಾಚಾರದಂತಹ ಘಟನೆಗಳು ನಿರಂತರವಾಗಿ ನಡೆಯುತ್ತಿವೆ.

ಹಿಂದೂ ಮಹಿಳೆಯರು, ಹುಡುಗಿಯರ ಮೇಲಿನ ದೌರ್ಜನ್ಯ

ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲೂ ಇಂತಹ ಹಿಂಸಾಚಾರಗಳು ವರದಿಯಾಗಿವೆ, ಅಲ್ಲಿ ಹಿಂದೂಗಳ ಸಂಖ್ಯೆ ಬಹಳ ಕಡಿಮೆಯಾಗಿದೆ. ಲಾಹೋರ್‌ನ ‘ಸೆಂಟರ್ ಫಾರ್ ಸೋಶಿಯಲ್ ಜಸ್ಟಿಸ್’ ಅಧ್ಯಯನದ ಪ್ರಕಾರ, 2021 ರಿಂದ 2024 ರ ಅವಧಿಯಲ್ಲಿ ಕನಿಷ್ಠ 421 ಅಲ್ಪಸಂಖ್ಯಾತ ಮಹಿಳೆಯರು ಮತ್ತು ಹುಡುಗಿಯರನ್ನು ಬಲವಂತವಾಗಿ ಮತಾಂತರಗೊಳಿಸಲಾಗಿದೆ. ಮತಾಂತರಗೊಂಡವರಲ್ಲಿ ಶೇ. 71% ರಷ್ಟು ಮಂದಿ ಅಪ್ರಾಪ್ತ ಬಾಲಕಿಯರಾಗಿದ್ದು, ಹೆಚ್ಚಿನವರು ಹಿಂದೂ ಮತ್ತು ಕ್ರಿಶ್ಚಿಯನ್ ಸಮುದಾಯದವರಾಗಿದ್ದಾರೆ.

ದೈಹಿಕ ಹಿಂಸೆಯ ಹೊರತಾಗಿ, ವ್ಯವಸ್ಥಿತ ಕಿರುಕುಳವು ಹಿಂದೂಗಳ ಅಸ್ತಿತ್ವಕ್ಕೆ ದೊಡ್ಡ ಅಪಾಯವನ್ನು ತಂದೊಡ್ಡಿದೆ. ಪ್ರತಿ ವರ್ಷ ಅಪ್ರಾಪ್ತ ಹಿಂದೂ ಬಾಲಕಿಯರನ್ನು ಅಪಹರಿಸಿ, ಇಸ್ಲಾಂಗೆ ಮತಾಂತರಗೊಳಿಸಿ, ಮುಸ್ಲಿಂ ಪುರುಷರೊಂದಿಗೆ ಮದುವೆ ಮಾಡುವ ಪ್ರಕರಣಗಳು ದಾಖಲಾಗುತ್ತಿವೆ. ಇಂತಹ ಪ್ರಕರಣಗಳಲ್ಲಿ ಕುಟುಂಬಗಳು ಕಾನೂನು ಮೊರೆ ಹೋದರೆ, ಅವರಿಗೆ ಜೀವ ಬೆದರಿಕೆ, ವಿಚಾರಣೆಯಲ್ಲಿ ವಿಳಂಬ ಮತ್ತು ನ್ಯಾಯಾಲಯಗಳಲ್ಲಿ ಪ್ರತಿಕೂಲ ತೀರ್ಪುಗಳನ್ನು ಎದುರಿಸಬೇಕಾಗುತ್ತದೆ. ಹೆಚ್ಚಿನ ನ್ಯಾಯಾಲಯದ ತೀರ್ಪುಗಳು ಮತಾಂತರಗೊಂಡವರ ಪರವಾಗಿಯೇ ಬರುತ್ತವೆ.

ಕಾನೂನಿನ ಕೊರತೆ ಮತ್ತು ಸರಕಾರದ ಉದಾಸೀನತೆ

ಸಾರ್ವಜನಿಕ ಚರ್ಚೆಗಳು ಮತ್ತು ಕಾನೂನು ಪ್ರಯತ್ನಗಳ ಹೊರತಾಗಿಯೂ, ಬಲವಂತದ ಮತಾಂತರವನ್ನು ಅಪರಾಧವೆಂದು ಪರಿಗಣಿಸುವ ಯಾವುದೇ ಪರಿಣಾಮಕಾರಿ ರಾಷ್ಟ್ರೀಯ ಕಾನೂನನ್ನು ರೂಪಿಸಲಾಗಿಲ್ಲ. ಹಿಂದೂ ಕುಟುಂಬಗಳ ಪರವಾಗಿ ಯಾವುದೇ ಬಲವಾದ ಕಾನೂನು ಬೆಂಬಲ ಲಭ್ಯವಿಲ್ಲ. ಕಾನೂನಿನ ಕೊರತೆಯಿಂದಾಗಿ ಅಪರಾಧಿಗಳ ಧೈರ್ಯ ಹೆಚ್ಚಾಗಿದ್ದು, ಹಿಂದೂ ಪೋಷಕರಲ್ಲಿ ಭೀತಿಯ ವಾತಾವರಣ ನಿರ್ಮಾಣವಾಗಿದೆ. ವರದಿಯ ಕೊನೆಯಲ್ಲಿ ಹೇಳಿರುವಂತೆ, ಸರಕಾರದ ಬೆಂಬಲದ ಕೊರತೆ ಮತ್ತು ಕಟ್ಟರ್ ಇಸ್ಲಾಮಿಕ್ ಸಂಘಟನೆಗಳ ಬಗ್ಗೆ ಹೆಚ್ಚುತ್ತಿರುವ ಸಹಿಷ್ಣುತೆಯಿಂದಾಗಿ, ಪಾಕಿಸ್ತಾನದ ಹಿಂದೂಗಳಿಗೆ ಈಗ ಸಮಾನತೆಯ ಪ್ರಶ್ನೆಯೇ ಇಲ್ಲದಂತಾಗಿದೆ; ಅಲ್ಲಿನ ಹಿಂದೂಗಳ ಹೋರಾಟವು ಕೇವಲ ಬದುಕಿ ಉಳಿಯುವುದಕ್ಕಾಗಿ ಮಾತ್ರ ಎಂಬಂತಾಗಿದೆ.