ಹಿಂದುಸ್ತಾನ ‘ಹಿಂದೂ ರಾಷ್ಟ್ರ’ವಾಗಿದೆ ಎನ್ನುವುದಕ್ಕೆ ಸಾಂವಿಧಾನಿಕ ಸಮ್ಮತಿಯ ಅಗತ್ಯವಿಲ್ಲ! – ಪ.ಪೂ. ಸರಸಂಘಚಾಲಕ ಡಾ. ಮೋಹನಜಿ ಭಾಗವತ

ಕೋಲಕಾತಾ (ಪ.ಬಂಗಾಳ) – ಸೂರ್ಯನು ಪೂರ್ವದಲ್ಲಿ ಉದಯಿಸುತ್ತಾನೆ ಎನ್ನುವುದು ಸನಾತನ ಸತ್ಯ. ಇದು ಯಾವಾಗ ಪ್ರಾರಂಭವಾಯಿತು ಎಂಬುದು ನಮಗೆ ತಿಳಿಯದಿದ್ದರೂ, ಅದನ್ನು ಒಪ್ಪಿಕೊಳ್ಳಲು ನಮಗೆ ಯಾವುದೇ ಸಾಂವಿಧಾನಿಕ ಸಮ್ಮತಿಯ ಅಥವಾ ದಾಖಲೆಗಳ ಅಗತ್ಯ ಭಾಸವಾಗುವುದಿಲ್ಲ. ಅದೇ ರೀತಿ ಹಿಂದುಸ್ತಾನವು ‘ಹಿಂದೂ ರಾಷ್ಟ್ರ’ವಾಗಿದೆ ಎನ್ನುವುದು ಒಂದು ನೈಸರ್ಗಿಕ ಸತ್ಯವಾಗಿದೆ. ಎಲ್ಲಿಯವರೆಗೆ ಈ ಮಣ್ಣಿನಲ್ಲಿ ಭಾರತೀಯ ಸಂಸ್ಕೃತಿಯನ್ನು ಗೌರವಿಸುವ ಒಬ್ಬ ವ್ಯಕ್ತಿ ಜೀವಂತವಾಗಿರುತ್ತಾನೋ, ಅಲ್ಲಿಯವರೆಗೆ ಈ ರಾಷ್ಟ್ರವು ‘ಹಿಂದೂ ರಾಷ್ಟ್ರ’ವೇ ಆಗಿರುತ್ತದೆ. ಭಾರತವು ಒಂದು ಹಿಂದೂ ರಾಷ್ಟ್ರವಾಗಿದೆ ಮತ್ತು ಈ ವಾಸ್ತವವನ್ನು ಸ್ವೀಕರಿಸಲು ಯಾವುದೇ ಸಾಂವಿಧಾನಿಕ ಸಮ್ಮತಿ ಅಥವಾ ಕಾಗದದ ಅಗತ್ಯವಿಲ್ಲ. ಭವಿಷ್ಯದಲ್ಲಿ ಸಂಸತ್ತು ಸಂವಿಧಾನಕ್ಕೆ ತಿದ್ದುಪಡಿ ತಂದು ‘ಹಿಂದೂ ರಾಷ್ಟ್ರ’ ಎಂಬ ಪದವನ್ನು ಸೇರಿಸಲಿ ಅಥವಾ ಸೇರಿಸದೇ ಇರಲಿ, ಅದರಿಂದ ವಾಸ್ತವದಲ್ಲಿ ಯಾವುದೇ ವ್ಯತ್ಯಾಸವಾಗುವುದಿಲ್ಲ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ.ಪೂ. ಸರಸಂಘಚಾಲಕ ಡಾ. ಮೋಹನಜಿ ಭಾಗವತ ಅವರು ಸಂಘದ ನಿಲುವನ್ನು ಸ್ಪಷ್ಟಪಡಿಸಿದರು. ಅವರು ಕೋಲಕಾತಾದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ 100ನೇ ವರ್ಷದ ಅಂಗವಾಗಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡುತ್ತಿದ್ದರು. ಈ ಕಾರ್ಯಕ್ರಮದಲ್ಲಿ ಕೇಂದ್ರ ಗೃಹ ಸಚಿವ ಅಮಿತ ಶಾ ಮತ್ತು ಅಂಡಮಾನ್ ಮತ್ತು ನಿಕೋಬಾರ್‌ನ ಉಪರಾಜ್ಯಪಾಲ ಅಡ್ಮಿರಲ್ (ನಿವೃತ್ತ) ಡಿ.ಕೆ. ಜೋಶಿ ಕೂಡ ಉಪಸ್ಥಿತರಿದ್ದರು.

ಬಾಂಗ್ಲಾದೇಶದ ಹಿಂದೂಗಳಿಗಾಗಿ ಭಾರತ ಸರಕಾರವು ಏನಾದರೂ ಮಾಡಲೇಬೇಕು ! – ಪ.ಪೂ. ಸರಸಂಘಚಾಲಕರು

ಬಾಂಗ್ಲಾದೇಶದಲ್ಲಿ ಹಿಂದೂಗಳು ಅಲ್ಪಸಂಖ್ಯಾತರಾಗಿದ್ದಾರೆ. ಅಲ್ಲಿನ ಪರಿಸ್ಥಿತಿ ಕಠಿಣವಾಗಿದೆ; ಆದರೆ ಅಂತಹ ಕಠಿಣ ಪರಿಸ್ಥಿತಿಯಲ್ಲಿ ರಕ್ಷಣೆಗಾಗಿ ಅಲ್ಲಿನ ಹಿಂದೂಗಳು ಒಗ್ಗಟ್ಟಾಗಿರಬೇಕು. ಜಗತ್ತಿನಾದ್ಯಂತ ಇರುವ ಹಿಂದೂಗಳು ಅವರಿಗೆ ಸಹಾಯ ಮಾಡಲೇಬೇಕು. ನಮಗೆ ಸಾಧ್ಯವಿರುವ ಪ್ರತಿಯೊಂದನ್ನೂ ನಾವು ಮಾಡಬೇಕು ಮತ್ತು ನಾವು ಅದನ್ನು ಮಾಡುತ್ತಿದ್ದೇವೆ. ಭಾರತ ಸರಕಾರವು ಬಾಂಗ್ಲಾದೇಶದ ಹಿಂದೂಗಳಿಗಾಗಿ ಏನಾದರೂ ಮಾಡಲೇಬೇಕಾಗುತ್ತದೆ. ಬಹುಶಃ ಅವರು ಮಾಡುತ್ತಿರಬಹುದು. ಕೆಲವು ವಿಷಯಗಳು ಜನರ ಮುಂದೆ ಬರುತ್ತವೆ, ಇನ್ನು ಕೆಲವು ಬರುವುದಿಲ್ಲ. ಕೆಲವೊಮ್ಮೆ ಫಲಿತಾಂಶಗಳು ಕೂಡಲೇ ಕಾಣಿಸುತ್ತವೆ, ಕೆಲವೊಮ್ಮೆ ಕಾಣಿಸುವುದಿಲ್ಲ; ಆದರೆ ಅಲ್ಲಿನ ಹಿಂದೂಗಳಿಗಾಗಿ ಏನಾದರೂ ಮಾಡುವುದು ಅನಿವಾರ್ಯವಾಗಿದೆ.

ಪ.ಪೂ. ಸರಸಂಘಚಾಲಕರು ಮಂಡಿಸಿದ ಅಂಶಗಳು

ಭಾರತವನ್ನು ‘ಮಾತೃಭೂಮಿ’ ಎಂದು ಭಾವಿಸುವ ಪ್ರತಿಯೊಬ್ಬರೂ ಕೂಡ ‘ಹಿಂದೂ’!

ಜನನ ಆಧಾರಿತ ಜಾತಿ ವ್ಯವಸ್ಥೆಯು ಹಿಂದುತ್ವದ ನಿಜವಾದ ಗುರುತಲ್ಲ. ಯಾರು ಭಾರತವನ್ನು ತನ್ನ ಮಾತೃಭೂಮಿ ಎಂದು ಭಾವಿಸುತ್ತಾರೋ ಮತ್ತು ಇಲ್ಲಿನ ಭಾರತೀಯ ಸಂಸ್ಕೃತಿಯ ಬಗ್ಗೆ ಹೆಮ್ಮೆ ಪಡುತ್ತಾರೋ, ಯಾರು ತಮ್ಮ ಪೂರ್ವಜರ ಶ್ರೇಷ್ಠತೆಯ ಮೇಲೆ ನಂಬಿಕೆ ಇಟ್ಟಿದ್ದಾರೋ, ಅಂತಹ ಪ್ರತಿಯೊಬ್ಬರೂ ‘ಹಿಂದೂ’ ಆಗಿದ್ದಾರೆ. ಇದೇ ಸಂಘದ ಮೂಲ ವಿಚಾರಧಾರೆಯಾಗಿದೆ.

ರಾಷ್ಟ್ರೀಯ ಸ್ವಯಂ ಸೇವಕ ಸಂಘವು ಮುಸಲ್ಮಾನ ವಿರೋಧಿಯಲ್ಲ !

ರಾಷ್ಟ್ರೀಯ ಸ್ವಯಂ ಸೇವಕ ಸಂಘವು ಹಿಂದೂಗಳ ಹಿತಾಸಕ್ತಿಯನ್ನು ರಕ್ಷಿಸುವ ಮತ್ತು ಕಟ್ಟರ್ ರಾಷ್ಟ್ರವಾದಿ ಸಂಘಟನೆಯಾಗಿದೆ; ಆದರೆ ಅದರರ್ಥ ನಾವು ಮುಸಲ್ಮಾನ ವಿರೋಧಿ ಎಂದಲ್ಲ. ಸಂಘದ ಕೆಲಸವು ಅತ್ಯಂತ ಪಾರದರ್ಶಕವಾಗಿದೆ. ಒಂದು ವೇಳೆ ನಾವು ಮುಸಲ್ಮಾನ ವಿರೋಧಿ ಎಂದು ಯಾರಿಗಾದರೂ ಅನಿಸಿದರೆ, ಅವರು ನೇರವಾಗಿ ಬಂದು ನಮ್ಮ ಕೆಲಸವನ್ನು ಗಮನಿಸಲಿ. ಒಂದು ವೇಳೆ ನಿಮಗೆ ಏನಾದರೂ ತಪ್ಪು ಕಂಡುಬಂದಲ್ಲಿ ನಿಮ್ಮ ಅಭಿಪ್ರಾಯವನ್ನು ಹಾಗೆಯೇ ಇಟ್ಟುಕೊಳ್ಳಿ; ಆದರೆ ತಪ್ಪು ಕಂಡುಬರದಿದ್ದರೆ ನಿಮ್ಮ ಆಲೋಚನೆಗಳನ್ನು ಬದಲಾಯಿಸಿಕೊಳ್ಳಲು ಸಿದ್ಧರಾಗಿ.

ಬಾಂಗ್ಲಾದೇಶದ ಗಡಿಯನ್ನು ಹಿಂದೂಗಳಿಗಾಗಿ ತೆರೆದರೆ ಬೇರೆಯವರೇ ಬರುತ್ತಿದ್ದಾರೆ !

ಪಶ್ಚಿಮ ಬಂಗಾಳದಲ್ಲಿನ ಇಸ್ಲಾಮಿಕ್ ಕಟ್ಟರವಾದಿ, ಹಿಂದೂಗಳ ಮೇಲೆ ನಡೆಯುತ್ತಿರುವ ದಾಳಿಗಳು, ಬಾಂಗ್ಲಾದೇಶದ ಸದ್ಯದ ಪರಿಸ್ಥಿತಿ ಮತ್ತು ಬಾಂಗ್ಲಾ ಮುಸಲ್ಮಾನರ ಅಕ್ರಮ ವಲಸೆಯು ಪ.ಬಂಗಾಳದ ಮೇಲೆ ತೀವ್ರ ಪರಿಣಾಮ ಬೀರಿದೆ. ಬಾಂಗ್ಲಾದೇಶದ ಗಡಿಯನ್ನು ತೆರೆಯಬೇಕೋ ಬೇಡವೋ ಎಂಬ ಬಗ್ಗೆ ಸರ್ಕಾರ ನಿರ್ಧರಿಸಬೇಕಾಗುತ್ತದೆ. ದೇಶದೊಳಗೆ ಯಾರನ್ನು ಪ್ರವೇಶಿಸಲು ಬಿಡಬೇಕು ಎನ್ನುವುದರ ಮೇಲೆ ನಿಯಂತ್ರಣವಿರಬೇಕು. ಗಡಿಯನ್ನು ಹಿಂದೂಗಳಿಗಾಗಿ ತೆರೆದಾಗ ಬೇರೆಯವರು ಒಳಬರಬಾರದು.

ಪ.ಬಂಗಾಳದಲ್ಲಿ ಬಾಬರಿ ಮಸೀದಿಯ ನಿರ್ಮಾಣವು ಒಂದು ರಾಜಕೀಯ ಪಿತೂರಿ !

ಪಶ್ಚಿಮ ಬಂಗಾಳದ ಮುರ್ಶಿದಾಬಾದ ಜಿಲ್ಲೆಯಲ್ಲಿ ಬಾಬರಿ ಮಸೀದಿಯಂತಹ ಹೊಸ ಮಸೀದಿಗಳ ಮರುನಿರ್ಮಾಣಕ್ಕೆ ಅಡಿಪಾಯ ಹಾಕಿರುವುದು ಒಂದು ರಾಜಕೀಯ ಪಿತೂರಿಯಾಗಿದೆ. ಈ ಕ್ರಿಯೆಯ ಉದ್ದೇಶ ಕೇವಲ ಮತಗಳ ಲಾಭಕ್ಕಾಗಿ ಹಳೆಯ ವಿವಾದಗಳನ್ನು ಮತ್ತೆ ಪ್ರಚೋದಿಸುವುದಾಗಿದೆ. ಇದು ಮುಸಲ್ಮಾನ ಮತ್ತು ಹಿಂದೂ ಇಬ್ಬರಿಗೂ ಹಿತಕರವಲ್ಲ. ಅಯೋಧ್ಯೆಯ ಬಾಬರಿ-ಶ್ರೀರಾಮ ಜನ್ಮ ಭೂಮಿ ವಿವಾದವು ನ್ಯಾಯಾಲಯದ ತೀರ್ಪಿನ ನಂತರ ಮುಕ್ತಾಯಗೊಂಡಿದೆ. ಅದನ್ನು ಮತ್ತೆ ಕೆದಕುವ ಪ್ರಯತ್ನಗಳು ಸಮಾಜದ ಏಕತೆಗೆ ಧಕ್ಕೆ ತರುತ್ತವೆ.

ಸರಕಾರಿ ಹಣದಿಂದ ಧಾರ್ಮಿಕ ಸ್ಥಳಗಳ ನಿರ್ಮಾಣ ಬೇಡ !

ಸರಕಾರವು ಧಾರ್ಮಿಕ ಸ್ಥಳಗಳಿಗಾಗಿ ಸರಕಾರಿ ನಿಧಿಯನ್ನು ಬಳಸಬಾರದು; ಉದಾಹರಣೆಯಾಗಿ ಅವರು ಸೋಮನಾಥ ದೇವಾಲಯ ಮತ್ತು ಶ್ರೀರಾಮ ಮಂದಿರದ ಉಲ್ಲೇಖ ಮಾಡಿದರು. ಈ ದೇವಾಲಯಗಳು ಜನರ ದೇಣಿಗೆಯಿಂದ ನಿರ್ಮಿಸಲ್ಪಟ್ಟಿವೆ.

ನಾವು ಜನಸಂಖ್ಯೆಯನ್ನು ಪರಿಣಾಮಕಾರಿಯಾಗಿ ನಿರ್ವಹಣೆ ಮಾಡಿಲ್ಲ !

‘ಲಿವ್-ಇನ್ ರಿಲೇಶನ್‌ಶಿಪ್’ನಲ್ಲಿ (ವಿವಾಹವಾಗದೆ ಸ್ತ್ರೀ-ಪುರುಷರು ಜೊತೆಯಾಗಿ ವಾಸಿಸುವುದು) ಇರುವ ಜನರು ಜವಾಬ್ದಾರಿಯನ್ನು ಸ್ವೀಕರಿಸಲು ಸಿದ್ಧರಿಲ್ಲ. ಕುಟುಂಬ ಮತ್ತು ಮದುವೆ ಎನ್ನುವುದು ಕೇವಲ ದೈಹಿಕ ಸುಖದ ಸಾಧನವಲ್ಲ. ಅದು ಸಮಾಜದ ಒಂದು ಮೂಲಭೂತ ಘಟಕವಾಗಿದೆ. ವ್ಯಕ್ತಿಯು ಸಮಾಜದಲ್ಲಿ ಹೇಗೆ ಬದುಕಬೇಕು ಎಂಬುದನ್ನು ಕಲಿಯುವ ಸ್ಥಳವೇ ಕುಟುಂಬವಾಗಿದೆ. ಮೌಲ್ಯಗಳು ಅಲ್ಲಿಂದಲೇ ಬರುತ್ತವೆ. ಮಕ್ಕಳ ಸಂಖ್ಯೆ ಅಥವಾ ಮದುವೆಯ ವಯಸ್ಸನ್ನು ನಿರ್ಧರಿಸಲು ಯಾವುದೇ ಕಟ್ಟುನಿಟ್ಟಾದ ನಿಯಮವಿಲ್ಲ; ಆದರೆ ಸಂಶೋಧನೆಗಳ ಪ್ರಕಾರ 3 ಮಕ್ಕಳು ಹೆತ್ತುವುದು ಆದರ್ಶಪ್ರಾಯವಾಗಿದೆ. ನಾನು ವೈದ್ಯರೊಂದಿಗೆ ಮಾತನಾಡಿ ಈ ಬಗ್ಗೆ ಮಾಹಿತಿ ಪಡೆದಿದ್ದೇನೆ. 19 ರಿಂದ 25 ವರ್ಷದ ವಯಸ್ಸಿನಲ್ಲಿ ಮದುವೆಯಾಗಿ 3 ಮಕ್ಕಳಿದ್ದರೆ, ಪೋಷಕರು ಮತ್ತು ಮಕ್ಕಳ ಆರೋಗ್ಯವು ಉತ್ತಮವಾಗಿರುತ್ತದೆ ಎಂದು ಅವರು ಹೇಳುತ್ತಾರೆ. ನಾವು ಜನಸಂಖ್ಯೆಯನ್ನು ಸಮರ್ಪಕವಾಗಿ ನಿರ್ವಹಿಸಿಲ್ಲ. ಜನಸಂಖ್ಯೆಯು ಒಂದು ಹೊರೆಯಾಗಿದೆ, ಆದರೆ ಅದು ಒಂದು ಸಂಪತ್ತು ಕೂಡ ಆಗಿದೆ.