ವಕ್ಫ್ ಬೋರ್ಡ್ ಇನ್ನು ಮುಂದೆ ನ್ಯಾಯಾಲಯದ ಶುಲ್ಕ ಪಾವತಿಸದೆ ಪ್ರಕರಣಗಳನ್ನು ದಾಖಲಿಸಲು ಸಾಧ್ಯವಿಲ್ಲ! – Gujarat HC

  • ವಕ್ಫ್ ಬೋರ್ಡ್ ಕುರಿತು ಐತಿಹಾಸಿಕ ತೀರ್ಪು ನೀಡಿದ ಗುಜರಾತ್ ಉಚ್ಚ ನ್ಯಾಯಾಲಯ

  • ಈ ಸಂಬಂಧಿತ ೧೫೦ ಅರ್ಜಿಗಳನ್ನು ವಜಾ‌ ಮಾಡಿದ ನ್ಯಾಯಾಲಯ

ಕರ್ಣಾವತಿ (ಗುಜರಾತ) – ಗುಜರಾತ ಉಚ್ಚ ನ್ಯಾಯಾಲಯವು ವಕ್ಫ್ ಬೋರ್ಡ್‌ ಗೆ ಸಂಬಂಧಿಸಿದಂತೆ ಒಂದು ಮಹತ್ವದ ಮತ್ತು ಐತಿಹಾಸಿಕ ತೀರ್ಪು ನೀಡಿದೆ. ವಕ್ಫ್ ಬೋರ್ಡ್ ಇನ್ನು ಮುಂದೆ ನ್ಯಾಯಾಲಯದ ಶುಲ್ಕವನ್ನು ಪಾವತಿಸದೆ ಪ್ರಕರಣಗಳನ್ನು ದಾಖಲಿಸಲು ಸಾಧ್ಯವಿಲ್ಲ ಎಂದು ನ್ಯಾಯಾಲಯವು ಸ್ಪಷ್ಟಪಡಿಸಿದೆ. ಸುಮಾರು ಒಂದು ವಾರಗಳ ಕಾಲ ನಡೆದ ವಿಚಾರಣೆಯ ನಂತರ, ಉಚ್ಚ ನ್ಯಾಯಾಲಯವು ವಕ್ಫ್ ಸಂಸ್ಥೆಗಳು ಸಲ್ಲಿಸಿದ್ದ ಸುಮಾರು ೧೫೦ ಅರ್ಜಿಗಳನ್ನು ವಜಾಗೊಳಿಸಿದೆ. ಈ ಅರ್ಜಿಗಳಲ್ಲಿ ಬಾಡಿಗೆದಾರರು ಅಥವಾ ಅತಿಕ್ರಮಣಕಾರರಿಂದ ವಕ್ಫ್ ಆಸ್ತಿಗಳ ನಿಯಂತ್ರಣವನ್ನು ಮರಳಿ ಪಡೆಯುವುದು ಹಾಗೂ ಅದಕ್ಕೆ ಸಂಬಂಧಿಸಿದ ಲಾಭಗಳನ್ನು ಪಡೆಯಲು ಬೇಡಿಕೆ ಇಡಲಾಗಿತ್ತು. ಗುಜರಾತ್ ಇತಿಹಾಸದಲ್ಲಿ ವಕ್ಫ್ ಪ್ರಕರಣಗಳಿಗೆ ಸಂಬಂಧಿಸಿದಂತೆ ಅತಿ ದೊಡ್ಡ ಪ್ರಮಾಣದಲ್ಲಿ ಸಾಮೂಹಿಕ ಅರ್ಜಿಗಳನ್ನು ವಜಾಗೊಳಿಸಿರುವ ಘಟನೆ ಇದಾಗಿದೆ ಎಂದು ಹೇಳಲಾಗಿದೆ. ‘ನ್ಯಾಯಾಲಯ ಮತ್ತು ನ್ಯಾಯಾಧೀಕರಣಗಳಲ್ಲಿ ಮೇಲ್ಮನವಿ ಸಲ್ಲಿಸುವಾಗ ವಕ್ಫ್ ಸಂಸ್ಥೆಗಳಿಗೆ ವಿಶೇಷ ವಿನಾಯಿತಿ ನೀಡಲಾಗುತ್ತದೆ, ಆದರೆ ಮತ್ತೊಂದೆಡೆ ಮಂದಿರಗಳು ಮತ್ತು ಇತರ ಧಾರ್ಮಿಕ ಸಂಸ್ಥೆಗಳು ನ್ಯಾಯಾಲಯದ ಶುಲ್ಕವನ್ನು ಪಾವತಿಸಬೇಕಾಗುತ್ತದೆ’ ಎಂಬ ಭಾವನೆ ಜನರಲ್ಲಿತ್ತು. ಈ ತೀರ್ಪು ಇಂತಹ ಭಾವನೆಗೆ ಪೂರ್ಣವಿರಾಮ ಇಟ್ಟಿದೆ.

೧. ‘ಸುನ್ನಿ ಮುಸ್ಲಿಂ ಈದ್ಗಾ ಮಸೀದಿ ಟ್ರಸ್ಟ್ ವಡೋದರಾ’, ‘ಸಹರ್ ಮಸೀದಿ ಸಭಾ ಟ್ರಸ್ಟ್’ ಹಾಗೂ ಕರ್ಣಾವತಿಯ ‘ಸರಖೇಜ್ ರೋಜಾ ಸಮಿತಿ’ಯಂತಹ ವಕ್ಫ್ ವಿಶ್ವಸ್ತರು ಅರ್ಜಿದಾರರಾಗಿದ್ದರು. ಈ ವಿಶ್ವಸ್ತರು ಗುಜರಾತ ರಾಜ್ಯ ವಕ್ಫ್ ನ್ಯಾಯಾಧೀಕರಣದ ಆದೇಶಗಳನ್ನು ಪ್ರಶ್ನಿಸಿ ಸವಾಲು ಹಾಕಿದ್ದರು. ಆ ಆದೇಶಗಳ ಪ್ರಕಾರ, ಯಾವುದೇ ವಿವಾದದ ವಿಚಾರಣೆಗೆ ಮೊದಲು ನ್ಯಾಯಾಲಯದ ಶುಲ್ಕವನ್ನು ಪಾವತಿಸುವುದು ಕಡ್ಡಾಯವಾಗಿತ್ತು.

೨. ಉಚ್ಚ ನ್ಯಾಯಾಲಯವು, ವಕ್ಫ್ ವಿಶ್ವಸ್ತರು ನ್ಯಾಯಾಧೀಕರಣದ ಮುಂದೆ ಪರಿಹಾರವನ್ನು ಕೋರಿದ್ದರು, ಉಭಯ ಪಕ್ಷಗಳ ನಡುವೆ ವಿವಾದವಿತ್ತು ಮತ್ತು ಹಕ್ಕು ಹಾಗೂ ಹೊಣೆಗಾರಿಕೆಗಳನ್ನು ಕಾನೂನುಬದ್ಧವಾಗಿ ನಿರ್ಧರಿಸಬೇಕಾಗಿತ್ತು ಎಂದು ಕೋರ್ಟ್ ಗಮನಿಸಿತು. ಆದ್ದರಿಂದ ಇವು ಕೇವಲ ಅರ್ಜಿಗಳಾಗಿರದೆ, ವಿವಾದಾತ್ಮಕ ಮೊಕದ್ದಮೆಗಳಾಗಿದ್ದವು.

೩. ವಕ್ಫ್ ಅಧಿನಿಯಮದ ಕಲಂ ೮೩ ರ ಅಡಿಯಲ್ಲಿ ಸಲ್ಲಿಸಲಾಗುವ ಅರ್ಜಿಗಳು ನ್ಯಾಯಾಂಗ ಪ್ರಕ್ರಿಯೆಗಳೇ ಆಗಿವೆ. ಅವು ಮೊಕದ್ದಮೆಯ ಸ್ವರೂಪ ಪಡೆದುಕೊಳ್ಳುವುದರಿಂದ ಅವುಗಳಿಗೆ ‘ಗುಜರಾತ್ ನ್ಯಾಯಾಲಯ ಶುಲ್ಕ ಅಧಿನಿಯಮ ೨೦೦೪’ ಅನ್ವಯಿಸುತ್ತದೆ. ಆದ್ದರಿಂದ ನ್ಯಾಯಾಲಯದ ಶುಲ್ಕ ಪಾವತಿಸುವುದು ಕಡ್ಡಾಯ ಎಂದು ನ್ಯಾಯಾಲಯ ಸ್ಪಷ್ಟಪಡಿಸಿತು.

ವಕ್ಫ್ ನ್ಯಾಯಾಧೀಕರಣದ ಆದೇಶದಲ್ಲಿ ಹಸ್ತಕ್ಷೇಪ ಮಾಡದಿರಲು ನಿರ್ಧಾರ

ಗುಜರಾತ ಉಚ್ಚ ನ್ಯಾಯಾಲಯವು, ವಕ್ಫ್ ನ್ಯಾಯಾಧಿಕರಣವು ನೀಡಿದ್ದ ಮೊದಲ ಆದೇಶದಲ್ಲಿ ಮೊಕದ್ದಮೆಯ ಮೌಲ್ಯಕ್ಕೆ ತಕ್ಕಂತೆ ನ್ಯಾಯಾಲಯದ ಶುಲ್ಕ ಮತ್ತು ಅಧಿಕಾರ ವ್ಯಾಪ್ತಿಯನ್ನು ಸರಿಪಡಿಸಲು ಸೂಚನೆ ನೀಡಿತ್ತು. ಆ ಆದೇಶವನ್ನು ವಕ್ಫ್ ಸಂಸ್ಥೆಗಳು ಸಮಯಕ್ಕೆ ಸರಿಯಾಗಿ ಯಾವುದೇ ಉಚ್ಚ ನ್ಯಾಯಾಲಯದಲ್ಲಿ ಪ್ರಶ್ನಿಸಿರಲಿಲ್ಲ. ನಂತರ ಶುಲ್ಕ ಪಾವತಿಸದ ಕಾರಣ ದಾವೆಯನ್ನು ವಜಾಗೊಳಿಸಿದಾಗ, ಆ ಬಗ್ಗೆ ಆಕ್ಷೇಪ ವ್ಯಕ್ತಪಡಿಸಲಾಯಿತು. ಮೊದಲ ಆದೇಶವನ್ನೇ ಸಕಾಲದಲ್ಲಿ ಪ್ರಶ್ನಿಸದಿದ್ದಾಗ, ಈಗ ಕೇವಲ ಶುಲ್ಕ ಪಾವತಿಸದ ಕಾರಣಕ್ಕಾಗಿ ನೀಡಲಾದ ಎರಡನೇ ಆದೇಶವನ್ನು ತಪ್ಪು ಎಂದು ಹೇಳಲು ಸಾಧ್ಯವಿಲ್ಲ. ಕೆಳಹಂತದ ನ್ಯಾಯಾಲಯದ ಆದೇಶದಲ್ಲಿ ಯಾವುದೇ ಗಂಭೀರ ಕಾನೂನು ದೋಷ ಅಥವಾ ಅಧಿಕಾರ ವ್ಯಾಪ್ತಿಯ ಉಲ್ಲಂಘನೆ ಕಂಡುಬರದ ಕಾರಣ ಹಸ್ತಕ್ಷೇಪದ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದು ತಿಳಿಸಿ ಎಲ್ಲಾ ಅರ್ಜಿಗಳನ್ನು ಕೋರ್ಟ್ ವಜಾಗೊಳಿಸಿತು.

ಅರ್ಜಿ ಎಂದು ಕರೆದರೂ ನಿಯಮಗಳು ಬದಲಾಗುವುದಿಲ್ಲ

ವಕ್ಫ್ ಅಧಿನಿಯಮದಲ್ಲಿ ನ್ಯಾಯಾಲಯದ ಶುಲ್ಕದ ಬಗ್ಗೆ ಸ್ಪಷ್ಟ ಪ್ರಾವಧಾನಗಳಿಲ್ಲ, ಆದ್ದರಿಂದ ಆ ಅರ್ಜಿಗಳ ಮೇಲೆ ಶುಲ್ಕ ವಿಧಿಸಬಾರದು ಎಂದು ವಕ್ಫ್ ಸಂಸ್ಥೆಗಳ ಪರವಾಗಿ ವಾದಿಸಲಾಯಿತು; ಆದರೆ ಉಚ್ಚ ನ್ಯಾಯಾಲಯವು ಈ ವಾದವನ್ನು ತಳ್ಳಿಹಾಕಿತು.

ಹಲವು ವರ್ಷಗಳ ಅಪನಂಬಿಕೆ ದೂರ

ಹಿಂದೆ, ಕೆಲವು ಕಾನೂನು ನಿಯಮಗಳಿಂದ ವಕ್ಫ್ ಸಂಸ್ಥೆಗಳಿಗೆ ನ್ಯಾಯಾಲಯದ ಶುಲ್ಕದಿಂದ ವಿನಾಯಿತಿ ಸಿಗುತ್ತಿತ್ತು; ಆದರೆ ಈಗ ಆ ವಿನಾಯಿತಿ ಕೊನೆಗೊಂಡಿದೆ ಎಂದು ಉಚ್ಚ ನ್ಯಾಯಾಲಯ ಸ್ಪಷ್ಟಪಡಿಸಿದೆ. ಮುಸ್ಲಿಂ ವಕ್ಫ್ ಟ್ರಸ್ಟ್‌ ಗಳು ಕೂಡ ಇತರ ಧಾರ್ಮಿಕ ಟ್ರಸ್ಟ್ ಮತ್ತು ಧರ್ಮಾದಾಯ ಸಂಸ್ಥೆಗಳಂತೆಯೇ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಲು ನಿಗದಿತ ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಸಣ್ಣ ದರ್ಗಾ ವ್ಯವಸ್ಥಾಪಕರಿಂದ ಹಿಡಿದು ದೊಡ್ಡ ಮಸೀದಿ ಬೋರ್ಡ್‌ ಗಳವರೆಗೆ ವಕ್ಫ್ ವಿವಾದಗಳಿಗೆ ಶುಲ್ಕ ಬೇಕಿಲ್ಲ ಎಂಬ ತಪ್ಪು ತಿಳುವಳಿಕೆಯಿತ್ತು; ಈ ತೀರ್ಪಿನಿಂದ ಅದು ದೂರವಾಗಿದೆ.

ದೇಶಾದ್ಯಂತ ನಡೆಯುತ್ತಿರುವ ಚರ್ಚೆಯ ಹಿನ್ನೆಲೆಯಲ್ಲಿ ತೀರ್ಪು

ದೇಶಾದ್ಯಂತ ವಕ್ಫ್ ಆಡಳಿತದ ಬಗ್ಗೆ ಚರ್ಚೆ ನಡೆಯುತ್ತಿರುವ ಸಮಯದಲ್ಲಿ ಈ ತೀರ್ಪು ಬಂದಿರುವುದು ಮಹತ್ವ ಪಡೆದುಕೊಂಡಿದೆ. ಈ ವರ್ಷ ಸಂಸತ್ತಿನಲ್ಲಿ ವಕ್ಫ್ ತಿದ್ದುಪಡಿ ಅಧಿನಿಯಮ ೨೦೨೫ ಅನ್ನು ಅಂಗೀಕರಿಸಲಾಗಿತ್ತು. ವಕ್ಫ್ ಭೂಮಿ ಮತ್ತು ಆಸ್ತಿಗಳ ನಿರ್ವಹಣೆಯಲ್ಲಿ ಸುಧಾರಣೆ ತರುವುದು ಈ ಕಾಯ್ದೆಯ ಉದ್ದೇಶವಾಗಿದೆ. ಈ ಕಾಯ್ದೆಯನ್ನು ಕೆಲವರು ಸ್ವಾಗತಿಸಿದ್ದರೆ, ಕೆಲವರು ಟೀಕಿಸಿದ್ದಾರೆ.

ಉಚ್ಚ ನ್ಯಾಯಾಲಯದ ತೀರ್ಪು ‘ಐತಿಹಾಸಿಕ’! – ಉಪಮುಖ್ಯಮಂತ್ರಿ ಹರ್ಷ ಸಂಘವಿ

ಗುಜರಾತ ಉಪಮುಖ್ಯಮಂತ್ರಿ ಹರ್ಷ ರಮೇಶ ಸಂಘವಿ ಅವರು ಉಚ್ಚ ನ್ಯಾಯಾಲಯದ ಈ ನಿರ್ಧಾರವನ್ನು ‘ಐತಿಹಾಸಿಕ’ ಎಂದು ಕರೆದಿದ್ದಾರೆ. ಭಾರತದಲ್ಲಿ ಎಲ್ಲಾ ಧರ್ಮಗಳು ಸಮಾನವಾಗಿವೆ ಮತ್ತು ನ್ಯಾಯಾಲಯವು ಎಲ್ಲಾ ನಾಗರಿಕರಿಗೆ ಸಮಾನ ಹಕ್ಕುಗಳನ್ನು ಖಚಿತಪಡಿಸಿದೆ ಎಂದು ಅವರು ತಿಳಿಸಿದರು. ಕಾಂಗ್ರೆಸ್ ತನ್ನ ಓಲೈಕೆಯ ರಾಜಕಾರಣಕ್ಕಾಗಿ ತಂದಿದ್ದ ವಕ್ಫ್ ಕಾಯ್ದೆಯಲ್ಲಿ, ವಕ್ಫ್ ಆಸ್ತಿ ಮತ್ತು ನ್ಯಾಯಾಧಿಕರಣದ ಪ್ರಕರಣಗಳಿಗೆ ನ್ಯಾಯಾಲಯದ ಶುಲ್ಕದಿಂದ ವಿನಾಯಿತಿ ನೀಡುವ ಅವಕಾಶಗಳಿದ್ದವು. ಆದರೆ ಮಂದಿರ, ಗುರುದ್ವಾರ ಮತ್ತು ಇತರ ಧಾರ್ಮಿಕ ಸಂಸ್ಥೆಗಳ ಆಸ್ತಿಗಳ ವಿಷಯದಲ್ಲಿ ಶುಲ್ಕ ವಿಧಿಸಲಾಗುತ್ತಿತ್ತು. ಈ ತೀರ್ಪಿನಿಂದ ಆ ಅಸಮಾನತೆ ದೂರವಾಗಿದೆ ಎಂದು ಅವರು ಹೇಳಿದರು.

ಸಂಪಾದಕೀಯ ನಿಲುವು

  • ಈವರೆಗೂ ವಕ್ಫ್ ಬೋರ್ಡ್‌ ಗೆ ಇಂತಹ ವಿನಾಯಿತಿಯನ್ನು ಯಾಕೆ ನೀಡಲಾಗುತ್ತಿತ್ತು? ಎಂಬುದು ಕೂಡ ಹೊರಬರಬೇಕಿದೆ.
  • ವಕ್ಫ್ ಬೋರ್ಡ್ ಅನ್ನೇ ರದ್ದುಗೊಳಿಸಲು ನ್ಯಾಯಾಲಯವು ಆದೇಶ ನೀಡಬೇಕೆಂದು ಜನತೆಗೆ ಅನ್ನಿಸುತ್ತಿದೆ!