ರಿಜರ್ವ್ ಬ್ಯಾಂಕ್‌ನಿಂದ ‘ರೆಪೋ ದರ’ದಲ್ಲಿ ಕಾಲು ಶೇಕಡಾ ಕಡಿತ : ಕಂತುಗಳ ಭಾರ ಕಡಿಮೆ – RBI Cuts Repo Rate

ರಿಜರ್ವ್ ಬ್ಯಾಂಕಿನ ಗವರ್ನರ್ ಸಂಜಯ ಮಲ್ಹೋತ್ರಾ

ನವದೆಹಲಿ – ರಿಜರ್ವ್ ಬ್ಯಾಂಕ್ ‘ರೆಪೋ ದರ’ವನ್ನು ೨೫ ಮೂಲ ಅಂಕಗಳು, ಅಂದರೆ ಕಾಲು ಶೇಕಡಾ ಕಡಿತಗೊಳಿಸಿ, ಅದನ್ನು ೫.೨೫ ಪ್ರತಿಶತಕ್ಕೆ ಇಳಿಸಲು ನಿರ್ಧರಿಸಿದೆ. ಈ ಹಿಂದೆ ರೆಪೋ ದರವು ೫.೫೦ ಪ್ರತಿಶತ ಇತ್ತು. ರಿಜರ್ವ್ ಬ್ಯಾಂಕಿನ ಈ ನಿರ್ಧಾರದಿಂದ ನಾಗರಿಕರ ಮೇಲಿನ ಕಂತುಗಳ ಭಾರ ಕಡಿಮೆ ಆಗಲಿದೆ. ರಿಜರ್ವ್ ಬ್ಯಾಂಕಿನ ಗವರ್ನರ್ ಸಂಜಯ ಮಲ್ಹೋತ್ರಾ ಅವರ ಅಧ್ಯಕ್ಷತೆಯಲ್ಲಿ ನಡೆದ ೩ ದಿನಗಳ ಸಭೆಯ ನಂತರ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಈ ರೆಪೋ ದರವು ಕಳೆದ ಕೆಲವು ವರ್ಷಗಳಲ್ಲಿ ಅತ್ಯಂತ ಕಡಿಮೆ ಆಗಿದೆ.

ರೆಪೋ ದರ’ ಎಂದರೇನು?

ಬ್ಯಾಂಕುಗಳು ಯಾವ ದರದಲ್ಲಿ ರಿಜರ್ವ್ ಬ್ಯಾಂಕಿನಿಂದ ಹಣವನ್ನು ಪಡೆಯುತ್ತವೆಯೋ, ಆ ದರವನ್ನು ‘ರೆಪೋ ದರ’ (ರೇಟ್) ಎಂದು ಕರೆಯುತ್ತಾರೆ. ರೆಪೋ ದರ ಹೆಚ್ಚಳ ಎಂದರೆ ಬ್ಯಾಂಕುಗಳಿಗೆ ರಿಜರ್ವ್ ಬ್ಯಾಂಕಿನಿಂದ ಸಿಗುವ ಸಾಲದ ದರದಲ್ಲಿ ಹೆಚ್ಚಳ ಆಗುವುದು. ರೆಪೋ ದರ ಕಡಿಮೆಯಾಗುವುದೆಂದರೆ ಬ್ಯಾಂಕಿಗೆ ಅಗ್ಗದಲ್ಲಿ ಹಣ ಸಿಗುವುದು. ಇದರರ್ಥ, ‘ರಿಜರ್ವ್ ಬ್ಯಾಂಕ್’ ರೆಪೋ ದರವನ್ನು ಹೆಚ್ಚಿಸಿದರೆ, ಸಾಮಾನ್ಯ ಜನರ ಸಾಲದ ಮೊತ್ತ ಹೆಚ್ಚಾಗುತ್ತದೆ ಮತ್ತು ಕಡಿತಗೊಳಿಸಿದರೆ, ಸಾಲದ ಕಂತುಗಳು ಕಡಿಮೆಯಾಗುತ್ತವೆ.