ಇಬ್ಬರು ವಯಸ್ಕರು ಮದುವೆಗೆ ಅರ್ಹರಾದ ವಯಸ್ಸನ್ನು ತಲುಪದಿದ್ದರೂ ಸಹ ಒಟ್ಟಿಗೆ ಇರಬಹುದು – Rajasthan High Court

ಜಯಪುರ (ರಾಜಸ್ಥಾನ) – ರಾಜಸ್ಥಾನ ಉಚ್ಚ ನ್ಯಾಯಾಲಯವು ಸ್ಪಷ್ಟಪಡಿಸಿರುವ ಪ್ರಕಾರ ಇಬ್ಬರೂ ವ್ಯಕ್ತಿಗಳು ವಯಸ್ಕರಾಗಿದ್ದರೆ (18 ವರ್ಷಕ್ಕಿಂತ ಮೇಲ್ಪಟ್ಟವರು) ಮತ್ತು ಅವರು ಸ್ವಇಚ್ಛೆಯಿಂದ ಒಟ್ಟಿಗೆ ವಾಸಿಸಲು ನಿರ್ಧರಿಸಿದ್ದರೆ, ವಿವಾಹಕ್ಕಾಗಿ ಇರುವ ಕಾನೂನುಬದ್ಧ ವಯೋಮಿತಿ (ಹುಡುಗಿಗೆ 18, ಮತ್ತು ಹುಡುಗನಿಗೆ 21 ವರ್ಷ) ಪೂರ್ಣವಾಗದಿದ್ದರೂ ಸಹ, ಅವರಿಗೆ ‘ಲಿವ್ ಇನ್ ರಿಲೇಶನ್ಶಿಪ್’ನಲ್ಲಿ (ಮದುವೆಯಾಗದೆ ಪುರುಷ ಮತ್ತು ಸ್ತ್ರೀ ಒಟ್ಟಿಗೆ ವಾಸಿಸುವುದು) ಇರುವ ಹಕ್ಕಿದೆ. ಕೇವಲ ವಿವಾಹಕ್ಕೆ ಅರ್ಹರಾಗುವ ವಯಸ್ಸು ತಲುಪಿಲ್ಲ ಎಂಬ ಕಾರಣಕ್ಕಾಗಿ ಅವರ ಸಾಂವಿಧಾನಿಕ ಹಕ್ಕುಗಳ ಮೇಲೆ ನಿರ್ಬಂಧಗಳನ್ನು ಹೇರಲು ಸಾಧ್ಯವಿಲ್ಲ ಎಂದು ಹೇಳಿದೆ.

ಪ್ರಕರಣವೇನು?

ಕೋಟಾ (ರಾಜಸ್ಥಾನ) ಇಲ್ಲಿನ 18 ವರ್ಷದ ಯುವತಿ ಮತ್ತು 19 ವರ್ಷದ ಯುವಕ ರಕ್ಷಣೆಗಾಗಿ ಕೋರಿದ್ದರು. ನಾವು ಸ್ವಂತ ಇಚ್ಛೆಯಿಂದ ಒಟ್ಟಿಗೆ ವಾಸಿಸುತ್ತಿದ್ದೇವೆ ಮತ್ತು ಅಕ್ಟೋಬರ್ 27, 2025 ರಂದು ‘ಲಿವ್ ಇನ್ ರಿಲೇಶನ್ಶಿಪ್’ ಒಪ್ಪಂದವನ್ನು ಸಹ ಮಾಡಿಕೊಂಡಿದ್ದೇವೆ ಎಂದು ಇಬ್ಬರೂ ನ್ಯಾಯಾಲಯಕ್ಕೆ ತಿಳಿಸಿದರು. ಯುವತಿಯ ಕುಟುಂಬಸ್ಥರಿಗೆ ಈ ಸಂಬಂಧ ಒಪ್ಪಿಗೆ ಇಲ್ಲ ಮತ್ತು ಅವರು ಬೆದರಿಕೆಗಳನ್ನು ಹಾಕುತ್ತಿದ್ದಾರೆ. ಆದರೆ, ಇವರ ದೂರಿನ ಬಗ್ಗೆ ಕೋಟಾ ಪೊಲೀಸರು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಇಬ್ಬರೂ ಹೇಳಿದ್ದರು.
ಸರಕಾರಿ ವಕೀಲರು ಯುವಕನಿಗೆ 21 ವರ್ಷಕ್ಕಿಂತ ಕಡಿಮೆ ವಯಸ್ಸಿರುವುದರಿಂದ ಅವನಿಗೆ ‘ಲಿವ್ ಇನ್’ ಸಂಬಂಧಕ್ಕೆ ಮಾನ್ಯತೆ ನೀಡಲು ಸಾಧ್ಯವಿಲ್ಲ ಎಂದು ವಾದಿಸಿದ್ದರು.

ಇಬ್ಬರಿಗೂ ರಕ್ಷಣೆ ನೀಡಲು ನ್ಯಾಯಾಲಯದ ಆದೇಶ

ಈ ವಾದವನ್ನು ತಿರಸ್ಕರಿಸಿದ ನ್ಯಾಯಾಲಯವು ಜೀವನ ಹಾಗೂ ವೈಯಕ್ತಿಕ ಸ್ವಾತಂತ್ರ್ಯದ ಹಕ್ಕು ಸಾಂವಿಧಾನಿಕವಾಗಿದ್ದು, ಕೇವಲ ವಿವಾಹದ ವಯಸ್ಸು ಪೂರ್ಣವಾಗಲಿಲ್ಲ ಎಂಬ ಕಾರಣಕ್ಕೆ ಅದನ್ನು ಕಸಿದುಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿತು. ಭಾರತೀಯ ಕಾನೂನಿನಲ್ಲಿ ಲಿವ್ ಇನ್ ಸಂಬಂಧಗಳಿಗೆ ನಿಷೇಧವಿಲ್ಲ, ಅಥವಾ ಅವುಗಳನ್ನು ಅಪರಾಧವೆಂದು ಪರಿಗಣಿಸಲಾಗುವುದಿಲ್ಲ ಎಂದು ಸಹ ನ್ಯಾಯಾಲಯವು ಸ್ಪಷ್ಟಪಡಿಸಿತು. ಜೊತೆಗೆ, ಈ ಇಬ್ಬರಿಗೂ ರಕ್ಷಣೆ ನೀಡುವಂತೆ ನ್ಯಾಯಾಲಯವು ಪೊಲೀಸರಿಗೆ ನಿರ್ದೇಶನ ನೀಡಿತು.