
ಶ್ರೀ. ಪ್ರೀತಮ ನಾಚಣಕರ, ವಿಶೇಷ ಪ್ರತಿನಿಧಿ, ಸನಾತನ ಪ್ರಭಾತ
ಮುಂಬಯಿ, ಡಿಸೆಂಬರ್ 4 : ನಿರ್ಗತಿಕ ಮತ್ತು ಆರ್ಥಿಕವಾಗಿ ದುರ್ಬಲ ರೋಗಿಗಳಿಗೆ ರಿಯಾಯಿತಿಗಳು ದೊರೆಯುತ್ತಿವೆಯೇ ಎಂಬುದರ ಕುರಿತು ಸಮನ್ವಯ ಸಾಧಿಸಲು, ರಾಜ್ಯದ ಧರ್ಮದಾಯ ಆಸ್ಪತ್ರೆಗಳಲ್ಲಿ ‘ಆರೋಗ್ಯ ಸೇವಕ’ರನ್ನು ನೇಮಿಸುವ ಮಹತ್ವದ ನಿರ್ಧಾರವನ್ನು ಸರಕಾರವು ಕೈಗೊಂಡಿದೆ. ಹೊರಗಿನ ‘ಏಜೆನ್ಸಿ’ಗಳ ಮೂಲಕ ಈ ಆರೋಗ್ಯ ಸೇವಕರನ್ನು ನೇಮಕ ಮಾಡಲಾಗುವುದು. ಸ್ವತಃ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ ಅವರು ಈ ವಿಚಾರದ ಕಡೆಗೆ ಗಮನ ಹರಿಸುತ್ತಿದ್ದಾರೆ. ಸಚಿವಾಲಯದ ಧರ್ಮದಾಯ ಆಸ್ಪತ್ರೆ ಸಹಾಯಕ ವಿಭಾಗದ ಮೂಲಕ ಈ ಪರಿಕಲ್ಪನೆಯನ್ನು ಕಾರ್ಯರೂಪಕ್ಕೆ ತರಲಾಗುತ್ತಿದ್ದು, ಧರ್ಮದಾಯ ಆಯುಕ್ತರ ಕಾರ್ಯಾಲಯವು ಇದನ್ನು ನಿಯಂತ್ರಿಸಲಿದೆ.

1. ರಾಜ್ಯದ 461 ಧರ್ಮದಾಯ ಆಸ್ಪತ್ರೆಗಳ ಪೈಕಿ 186 ಆಸ್ಪತ್ರೆಗಳಲ್ಲಿ ಆರೋಗ್ಯ ಸೇವಕರನ್ನು ನೇಮಕ ಮಾಡಲಾಗುವುದು. ಇಲ್ಲಿಯವರೆಗೆ 125 ಧರ್ಮದಾಯ ಆಸ್ಪತ್ರೆಗಳಲ್ಲಿ ಆರೋಗ್ಯ ಸೇವಕರನ್ನು ನೇಮಿಸಲಾಗಿದ್ದು, ಉಳಿದ ಧರ್ಮದಾಯ ಆಸ್ಪತ್ರೆಗಳಲ್ಲಿಯೂ ಮುಂದಿನ ಕೆಲವೇ ದಿನಗಳಲ್ಲಿ ನೇಮಕಾತಿ ನಡೆಯಲಿದೆ.
2. ಹಾಸಿಗೆಗಳ ಸಂಖ್ಯೆಗೆ ಅನುಗುಣವಾಗಿ ಧರ್ಮದಾಯ ಆಸ್ಪತ್ರೆಗಳನ್ನು ವಿಂಗಡಿಸಲಾಗಿದೆ. 100 ಕ್ಕಿಂತ ಹೆಚ್ಚು ಹಾಸಿಗೆಗಳಿರುವ ಆಸ್ಪತ್ರೆಗಳಿಗೆ ‘ಅ’ ಶ್ರೇಣಿ, 51 ರಿಂದ 100 ಹಾಸಿಗೆಗಳಿರುವ ಆಸ್ಪತ್ರೆಗಳಿಗೆ ‘ಬ’ ಶ್ರೇಣಿ ಮತ್ತು 1 ರಿಂದ 50 ಹಾಸಿಗೆಗಳಿರುವ ಆಸ್ಪತ್ರೆಗಳಿಗೆ ‘ಕ’ ಶ್ರೇಣಿ ನೀಡಲಾಗಿದೆ. ‘ಅ’ ಶ್ರೇಣಿಯ ಆಸ್ಪತ್ರೆಗಳಿಗೆ ತಲಾ ಒಬ್ಬರು ಆರೋಗ್ಯ ಸೇವಕರು, ‘ಬ’ ಶ್ರೇಣಿಯ ಪ್ರತಿ 3 ಆಸ್ಪತ್ರೆಗಳಿಗೆ ಒಬ್ಬರು ಮತ್ತು ‘ಕ’ ಶ್ರೇಣಿಯ ಪ್ರತಿ 5 ಆಸ್ಪತ್ರೆಗಳಿಗೆ ಒಬ್ಬ ಆರೋಗ್ಯ ಸೇವಕನನ್ನು ನೇಮಕ ಮಾಡಲಾಗುವುದು.
‘ಆರೋಗ್ಯ ಸೇವಕ’ರ ಅವಶ್ಯಕತೆ ಏಕೆ?
ಮಹಾರಾಷ್ಟ್ರ ಸಾರ್ವಜನಿಕ ಧರ್ಮದರ್ಶಿ ವ್ಯವಸ್ಥೆ ಅಧಿನಿಯಮ, 1950ರ ಪ್ರಕಾರ, ಧರ್ಮದಾಯ ಆಸ್ಪತ್ರೆಗಳಲ್ಲಿ ನಿರ್ಗತಿಕ ರೋಗಿಗಳಿಗೆ ಶೇ. 10 ಮತ್ತು ಬಡ ಹಾಗೂ ಆರ್ಥಿಕವಾಗಿ ದುರ್ಬಲ ರೋಗಿಗಳಿಗೆ ಶೇ. 10 ಹಾಸಿಗೆಗಳನ್ನು ಮೀಸಲಿಡುವುದು ಕಡ್ಡಾಯವಾಗಿದೆ. ಈ ರಿಯಾಯಿತಿಗಳ ಬದಲಿಗೆ ಧರ್ಮದಾಯ ಆಸ್ಪತ್ರೆಗಳಿಗೆ ಸರಕಾರದಿಂದ ವಿವಿಧ ಸೌಲಭ್ಯಗಳನ್ನು ನೀಡಲಾಗುತ್ತದೆ. ಆದರೆ, ಕೆಲವು ಧರ್ಮದಾಯ ಆಸ್ಪತ್ರೆಗಳು ಸರಕಾರದಿಂದ ಸೌಲಭ್ಯಗಳನ್ನು ಪಡೆದುಕೊಂಡರೂ ನಿರ್ಗತಿಕ ಮತ್ತು ಬಡ ರೋಗಿಗಳಿಗೆ ಹಾಸಿಗೆಗಳನ್ನು ನೀಡುತ್ತಿಲ್ಲ ಎಂಬುದು ಕಂಡುಬಂದಿದೆ.
ಆದ್ದರಿಂದ, ಇದನ್ನು ಸುಧಾರಿಸಲು, ಸರಕಾರಿ ಸಮಿತಿಯು ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲಿಸುವುದು, ಆಸ್ಪತ್ರೆಯ ಮುಖ್ಯ ಸ್ಥಳದಲ್ಲಿ ‘ಧರ್ಮದಾಯ ಆಸ್ಪತ್ರೆ’ ಎಂದು ಫಲಕ ಹಾಕುವುದು, ಬಡ ಮತ್ತು ನಿರ್ಗತಿಕ ರೋಗಿಗಳಿಗೆ ಮೀಸಲಿಟ್ಟ ಹಾಸಿಗೆಗಳಲ್ಲಿ ಎಷ್ಟು ಖಾಲಿ ಇವೆ ಎಂಬುದರ ಮಾಹಿತಿಯನ್ನು ಮುಖ್ಯ ಫಲಕದಲ್ಲಿ ಬರೆಯುವುದು ಮುಂತಾದ ಪ್ರಯತ್ನಗಳನ್ನು ಮಾಡಲಾಯಿತು. ಇದರಿಂದಾಗಿ ಇದರಲ್ಲಿ ಸ್ವಲ್ಪ ಮಟ್ಟಿಗೆ ಸುಧಾರಣೆ ಕಂಡುಬಂದಿತು; ಆದರೆ ಕೆಲವು ಆಸ್ಪತ್ರೆಗಳು ಇನ್ನೂ ಸರಕಾರದ ನಿಯಮಗಳಿಗೆ ಮನ್ನಣೆ ನೀಡುತ್ತಿಲ್ಲ. ಆದ್ದರಿಂದ ‘ಆರೋಗ್ಯ ಸೇವಕ’ ಪರಿಕಲ್ಪನೆಯನ್ನು ಜಾರಿಗೆ ತರಲಾಗುತ್ತಿದೆ. (ಸರಕಾರದ ನಿಯಮಗಳನ್ನು ಪಾಲಿಸದ ಇಂತಹ ಆಸ್ಪತ್ರೆಗಳ ನೋಂದಣಿಯನ್ನು ಸರಕಾರವು ರದ್ದುಗೊಳಿಸಬೇಕು! – ಸಂಪಾದಕರು)
ಆರೋಗ್ಯ ಸೇವಕರು ಈ ರೀತಿ ಕಾರ್ಯನಿರ್ವಹಿಸುತ್ತಾರೆ.
1. ಕೆಲವು ಧರ್ಮದಾಯ ಆಸ್ಪತ್ರೆಗಳು ಹಾಸಿಗೆಗಳು ಖಾಲಿ ಇದ್ದರೂ ಅವುಗಳನ್ನು ಬಡ ಮತ್ತು ನಿರ್ಗತಿಕ ರೋಗಿಗಳಿಗೆ ಒದಗಿಸುವುದಿಲ್ಲ. ಕೆಲವು ಆಸ್ಪತ್ರೆಗಳು ಗಣ್ಯ ವ್ಯಕ್ತಿಗಳ ಶಿಫಾರಸಿನ ಮೇರೆಗೆ ಮಾತ್ರ ರಿಯಾಯಿತಿ ನೀಡುತ್ತವೆ, ಇನ್ನೂ ಕೆಲವು ಆಸ್ಪತ್ರೆಗಳು ಬಡ ಮತ್ತು ನಿರ್ಗತಿಕ ರೋಗಿಗಳಿಂದಲೂ ಶುಲ್ಕ ವಸೂಲಿ ಮಾಡುತ್ತವೆ. ಇಂತಹ ಅಕ್ರಮಗಳಿಗೆ ಕಡಿವಾಣ ಹಾಕಲು ಆರೋಗ್ಯ ಸೇವಕರು ಪ್ರಮುಖ ಪಾತ್ರ ವಹಿಸಲಿದ್ದಾರೆ.
2. ಆಸ್ಪತ್ರೆಯಲ್ಲಿ ಬಡ ಮತ್ತು ನಿರ್ಗತಿಕ ರೋಗಿಗಳಿಗೆ ಎಷ್ಟು ಹಾಸಿಗೆಗಳು ಲಭ್ಯ ಇವೆ ಎಂಬ ಖಚಿತ ಮಾಹಿತಿ ಆರೋಗ್ಯ ಸೇವಕರಿಂದ ಸರಕಾರಕ್ಕೆ ದೊರೆಯಲಿದೆ. ಒಂದು ವೇಳೆ ಯಾವುದೇ ಧರ್ಮದಾಯ ಆಸ್ಪತ್ರೆಯು ಬಡ ಮತ್ತು ನಿರ್ಗತಿಕ ರೋಗಿಗಳಿಗೆ ರಿಯಾಯಿತಿ ನೀಡಲು ನಿರಾಕರಿಸುತ್ತಿದ್ದರೆ, ಆ ಮಾಹಿತಿಯು ಆರೋಗ್ಯ ಸೇವಕರ ಮೂಲಕ ಸರಕಾರಕ್ಕೆ ತಿಳಿಯಲಿದೆ.
3. ಆಸ್ಪತ್ರೆಗೆ ಬರುವ ರೋಗಿಗಳು ರಿಯಾಯಿತಿಗೆ ಅರ್ಹರಾಗಿದ್ದಾರೆಯೇ ಎಂಬುದರ ಕುರಿತು ಆರೋಗ್ಯ ಸೇವಕರು ರೋಗಿಯ ಸಂಬಂಧಿಕರಿಗೆ ಸರಿಯಾದ ರೀತಿಯಲ್ಲಿ ಮಾರ್ಗದರ್ಶನ ನೀಡಲಿದ್ದಾರೆ.
ಧರ್ಮದಾಯ ಆಸ್ಪತ್ರೆಗಳಿಗೆ ಸರಕಾರದಿಂದ ದೊರೆಯುವ ಸೌಲಭ್ಯಗಳು!
1. ಆಸ್ಪತ್ರೆಗಾಗಿ ಸರಕಾರಿ ಭೂಮಿಯನ್ನು ನಾಮಮಾತ್ರ ದರದಲ್ಲಿ(ಸಾಂಕೇತಿಕ ಬೆಲೆಗೆ?) ಒದಗಿಸಲಾಗುತ್ತದೆ.
2. ಭೂ ಬಾಡಿಗೆಯಲ್ಲಿ ರಿಯಾಯಿತಿ ನೀಡಲಾಗುತ್ತದೆ.
3. ವಿದ್ಯುತ್ ಮತ್ತು ನೀರಿನ ಶುಲ್ಕದಲ್ಲಿ ರಿಯಾಯಿತಿ ನೀಡಲಾಗುತ್ತದೆ.
4. ಆದಾಯ ತೆರಿಗೆಯಲ್ಲಿ ರಿಯಾಯಿತಿ ನೀಡಲಾಗುತ್ತದೆ.
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭಗವಾನ್ ಶಿವನ ರೂಪದಲ್ಲಿ ತೋರಿಸಿದ ‘ವಿಶ್ವವಾಣಿ’ ಪತ್ರಿಕೆ !
‘ಭಂಡಾರ ಎಂದರೆ ಶುದ್ಧ ಅರಿಶಿನ’ ಎಂದು ಘೋಷಿಸುವಂತೆ ಅನ್ನ ಮತ್ತು ಔಷಧ ಆಡಳಿತಕ್ಕೆ (FDA) ಆಗ್ರಹ!
ಪಾನ್ ಮಸಾಲಾ, ಗುಟ್ಕಾ ಮತ್ತು ಕಲಬೆರಕೆ ಆಹಾರ ಪದಾರ್ಥಗಳ ಒಂದೂವರೆ ಕೋಟಿಗೂ ಹೆಚ್ಚು ಮೌಲ್ಯದ ದಾಸ್ತಾನು ವಶ
‘ಲವ್ ಜಿಹಾದ್’, ‘ಲ್ಯಾಂಡ್ ಜಿಹಾದ್’ ಇವೆಲ್ಲಾ ಮೂರ್ಖತನದ ಸಂಗತಿಗಳಂತೆ !
ತುಮಕೂರಿನಲ್ಲಿ ಶ್ರೀರಾಮಮಂದಿರದ ಹತ್ತಿರ ಅಲ್ಪಸಂಖ್ಯಾತರ ವಸತಿಗೃಹ ನಿರ್ಮಿಸುವ ಸಂಚು !
ನಾಗಪುರ: ಮಾನಸಿಕ ಒತ್ತಡದಿಂದಾಗಿ ‘ನೀಟ್’ ಪರೀಕ್ಷೆಯ ವಿದ್ಯಾರ್ಥಿನಿ ಆತ್ಮಹತ್ಯೆ