ಮಹಿಳೆಯರ ಮೇಲಿನ ದೌರ್ಜನ್ಯ ತಡೆಯಲು ಸಮಿತಿ ರಚಿಸದಿದ್ದರೆ 50,000 ರೂ. ದಂಡ!

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಆಯುಕ್ತೆ ನಯನಾ ಗುಂಡೆ ಅವರಿಂದ ಸರಕಾರಿ ಇಲಾಖೆಗಳು ಮತ್ತು ಖಾಸಗಿ ಸಂಸ್ಥೆಗಳಿಗೆ ಎಚ್ಚರಿಕೆ!

ಮುಂಬಯಿ – ಮಹಿಳೆಯರ ಮೇಲಿನ ದೌರ್ಜನ್ಯ ತಡೆಯಲು, ಎಲ್ಲಾ ಸರಕಾರಿ ಇಲಾಖೆಗಳು, ಅರೆ-ಸರಕಾರಿ ಸಂಸ್ಥೆಗಳು ಮತ್ತು ಖಾಸಗಿ ಸಂಸ್ಥೆಗಳು ‘ಪೋಶ್’ (ಲೈಂಗಿಕ ಕಿರುಕುಳ ತಡೆಗಟ್ಟುವಿಕೆ) ಕಾಯಿದೆಯ ಅನುಷ್ಠಾನಗೊಳಿಸುವುದು ಕಡ್ಡಾಯವಾಗಿದೆ. ಎಲ್ಲಾ ಸಂಸ್ಥೆಗಳು ಆಂತರಿಕ ಸಮಿತಿಯನ್ನು ಸ್ಥಾಪಿಸಬೇಕು, ಇಲ್ಲದಿದ್ದರೆ ‘ಸಂಸ್ಥೆಯ ಮುಖ್ಯಸ್ಥರಿಗೆ 50,000 ರೂಪಾಯಿ ದಂಡ ವಿಧಿಸಲಾಗುವುದು’ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಆಯುಕ್ತೆ ನಯನಾ ಗುಂಡೆ ಎಚ್ಚರಿಕೆ ನೀಡಿದ್ದಾರೆ.

ಆಯುಕ್ತೆ ನಯನಾ ಗುಂಡೆ ಅವರು ಹೇಳಿದ್ದು;

1. ಯಾವ ಕಚೇರಿಗಳಲ್ಲಿ ಅಥವಾ ಸಂಸ್ಥೆಗಳಲ್ಲಿ 10 ಅಥವಾ ಅದಕ್ಕಿಂತ ಹೆಚ್ಚು ಉದ್ಯೋಗಿಗಳು ಕಾರ್ಯನಿರ್ವಹಿಸುತ್ತಿದ್ದಾರೋ, ಅವರು ಆಂತರಿಕ ಸಮಿತಿಯನ್ನು ಸ್ಥಾಪಿಸುವುದು ಕಡ್ಡಾಯವಾಗಿದೆ.

2. ರಾಜ್ಯದ ಸರಕಾರಿ, ಅರೆ-ಸರಕಾರಿ ಕಚೇರಿಗಳು, ನಿಗಮಗಳು, ಸ್ಥಳೀಯ ಸ್ವ- ಸರಕಾರಿ ಸಂಸ್ಥೆಗಳು, ಸರಕಾರಿ ಸಂಸ್ಥೆಗಳು, ನಗರಸಭೆಗಳು, ಹಾಗೂ ಸರಕಾರ ಅಥವಾ ಸ್ಥಳೀಯ ಪ್ರಾಧಿಕಾರಗಳಿಂದ ನಿಧಿ ಪಡೆಯುವ ಎಲ್ಲಾ ಸಂಸ್ಥೆಗಳಲ್ಲಿ ಆಂತರಿಕ ಸಮಿತಿಯನ್ನು ಸ್ಥಾಪಿಸಬೇಕು. ಅದೇ ರೀತಿ ಖಾಸಗಿ ಸಂಸ್ಥೆಗಳು, ಕೈಗಾರಿಕೆಗಳು, ಸೇವಾ ಪೂರೈಕೆದಾರ ಸಂಸ್ಥೆಗಳು, ಶಿಕ್ಷಣ ಸಂಸ್ಥೆಗಳು, ಆಸ್ಪತ್ರೆಗಳು, ಮನರಂಜನಾ ವಲಯದ ಸಂಸ್ಥೆಗಳು, ಕ್ರೀಡಾ ಸಂಘಟನೆಗಳು, ಕ್ರೀಡಾ ಸಂಕೀರ್ಣಗಳು ಸೇರಿದಂತೆ ಇತರೆ ಖಾಸಗಿ ಸಂಸ್ಥೆಗಳಿಗೂ ಈ ನಿಯಮ ಅನ್ವಯಿಸುತ್ತದೆ.

3. ಕಾನೂನಿನ ಪ್ರಕಾರ ನಿಬಂಧನೆಗಳನ್ನು ಪಾಲಿಸದಿದ್ದರೆ, ಸಂಬಂಧಪಟ್ಟ ಸಂಸ್ಥೆಯ ಮುಖ್ಯಸ್ಥರಿಗೆ ಕಲಂ 26 ರ ಅಡಿಯಲ್ಲಿ 50,000 ರೂಪಾಯಿಗಳವರೆಗೆ ದಂಡ ವಿಧಿಸಲಾಗುವುದು. ಅಲ್ಲದೇ, ಉಲ್ಲಂಘನೆಯು ಪುನರಾವರ್ತನೆಯಾದರೆ ದಂಡವನ್ನು ದ್ವಿಗುಣಗೊಳಿಸುವುದು, ಸಂಸ್ಥೆಯ ಪರವಾನಗಿಯನ್ನು ರದ್ದುಗೊಳಿಸುವುದು ಅಥವಾ ಇತರ ಕಠಿಣ ಕ್ರಮಗಳನ್ನು ಕೈಗೊಳ್ಳುವ ಅವಕಾಶ ಈ ಕಾಯಿದೆಯಲ್ಲಿದೆ. ಜೊತೆಗೆ, ಆಂತರಿಕ ಸಮಿತಿಯ ಮಾಹಿತಿಯನ್ನು ಕೇಂದ್ರ ಸರಕಾರದ ತಂತ್ರಾಂಶದಲ್ಲಿ (ಪೋರ್ಟಲ್ ನಲ್ಲಿ) ನವೀಕರಿಸಬೇಕು.

4. ಕಚೇರಿಗಳು ಅಥವಾ ಸಂಸ್ಥೆಗಳ ಸ್ಥಳದಲ್ಲಿ ಆಂತರಿಕ ಸಮಿತಿಯ ಫಲಕವನ್ನು ಪ್ರದರ್ಶಿಸದಿದ್ದರೆ, ಅದರ ಬಗ್ಗೆ ಮಹಿಳಾ ಸಹಾಯವಾಣಿ ಸಂಖ್ಯೆ 181 ಕ್ಕೆ ದೂರು ನೀಡಬೇಕು.

5. ಲಕ್ಷಾಂತರ ಮಹಿಳಾ ಕಾರ್ಯಕರ್ತರನ್ನು ಒಳಗೊಂಡಿರುವ ರಾಜಕೀಯ ಪಕ್ಷಗಳಿಗೆ ಈ ಕಾಯಿದೆ ಕಡ್ಡಾಯವಲ್ಲ; ಏಕೆಂದರೆ ‘ರಾಜಕೀಯ ಪಕ್ಷಗಳನ್ನು ಕೆಲಸದ ಸ್ಥಳ ಅಥವಾ ಕಚೇರಿ ಎಂದು ಪರಿಗಣಿಸಲು ಸಾಧ್ಯವಿಲ್ಲ’ ಎಂದು ಸರ್ವೋಚ್ಚ ನ್ಯಾಯಾಲಯ ಹೇಳಿದೆ.