ಮುಂದಿನ 5 ವರ್ಷಗಳಲ್ಲಿ ಭಾರತದಲ್ಲಿರುವ 5,800 ಯಹೂದಿಗಳನ್ನು ಸ್ವದೇಶಕ್ಕೆ ಕರೆದೊಯ್ಯಲಿರುವ ಇಸ್ರೇಲ್ – India Jews Israel Relocation

ಕಳೆದ ನೂರಾರು ವರ್ಷಗಳಿಂದ ಸ್ಥಳಾಂತರಗೊಂಡಿದ್ದರು!

ತೆಲ್ ಅವೀವ್ (ಇಸ್ರೇಲ್) – ಭಾರತದ ಈಶಾನ್ಯ ರಾಜ್ಯಗಳಲ್ಲಿ ವಾಸಿಸುತ್ತಿರುವ ‘ಬನೇಯಿ ಮೆನಾಶೆ’ ಸಮುದಾಯದ 5,800 ಯಹೂದಿಗಳನ್ನು ತಾಯ್ನಾಡಿನಲ್ಲಿ ಸ್ಥಾಯಿಗೊಳಿಸಲು ಇಸ್ರೇಲ್ ನಿರ್ಧಾರ ಮಾಡಿದೆ. ಇದಕ್ಕಾಗಿ 5 ವರ್ಷಗಳ ಕಾಲಮಿತಿಯನ್ನು ನಿಗದಿಪಡಿಸಲಾಗಿದ್ದು, 1,200 ಜನರನ್ನು 2026 ರಲ್ಲೇ ಕರೆದೊಯ್ಯಲು ಈಗಾಗಲೇ ಒಪ್ಪಿಗೆ ನೀಡಲಾಗಿದೆ. 2005 ರಲ್ಲಿ, ಇಸ್ರೇಲ್ ನ ಧಾರ್ಮಿಕ ಗುರು ಶ್ಲೋಮೋ ಅಮಾರ ಅವರು ಈ ಸಮುದಾಯವನ್ನು ‘ಇಸ್ರೇಲ್ ವಂಶದ ಜನರು’ ಎಂದು ಮಾನ್ಯತೆ ನೀಡಿದ್ದರು.

ಕರೆದೊಯ್ಯುವ ಪ್ರಕ್ರಿಯೆ ಹೀಗಿರಲಿದೆ,

ಇಸ್ರೇಲ್ ಸರಕಾರದ ನಿರ್ಧಾರದ ನಂತರ, ಯಹೂದಿ ಧರ್ಮಗುರುಗಳ (‘ರಬ್ಬಿ’ಗಳ) ದೊಡ್ಡ ತಂಡ ಭಾರತಕ್ಕೆ ಬರಲಿದೆ. ಈ ತಂಡದಲ್ಲಿ ರಬ್ಬಿಗಳ ಜೊತೆಗೆ (ಯಹೂದಿ ಧರ್ಮಗುರುಗಳು) ಮತ್ತು ಧಾರ್ಮಿಕ ಕಾನೂನಿನ (ಹಲಾಖಾ) ತಜ್ಞರು ಕೂಡ ಬರಲಿದ್ದಾರೆ. ಈ ತಂಡವು ‘ಬನೇಯಿ ಮೆನಾಶೆ’ ಸಮುದಾಯದ ಜನರ ಧಾರ್ಮಿಕ ಗುರುತಿನ ಪರಿಶೀಲನೆ ನಡೆಸಲಿದೆ. ಅವರ ಧಾರ್ಮಿಕ ಸಂಪ್ರದಾಯಗಳು ಮತ್ತು ಜೀವನಶೈಲಿಯನ್ನು ಪರಿಶೀಲಿಸಲಾಗುವುದು. ತಂಡವು ಪ್ರತಿ ಕುಟುಂಬವನ್ನು ವೈಯಕ್ತಿಕವಾಗಿ ಸಂದರ್ಶನ ಮಾಡಲಿದೆ.

ಪರಿಶೀಲನೆಯ ನಂತರ ಜನರಿಗಾಗಿ ‘ಮತಾಂತರ ತರಗತಿಗಳು’ ಪ್ರಾರಂಭವಾಗಲಿವೆ.

ನಂತರ ಅವರ ದಾಖಲಾತಿಗಳನ್ನು ಪೂರ್ಣಗೊಳಿಸಿ, ಇಸ್ರೇಲ್ ಗೆ ಕರೆದೊಯ್ಯಲು ವಿಮಾನಗಳನ್ನು ಸಿದ್ಧಗೊಳಿಸಲಾಗುವುದು. ಈ ಎಲ್ಲಾ ಕಾರ್ಯಗಳಿಗಾಗಿ ಇಸ್ರೇಲ್ ಸರಕಾರವು ಸುಮಾರು 9 ಕೋಟಿ ಶೆಕೆಲ್ (ಸುಮಾರು 240 ಕೋಟಿ ರೂಪಾಯಿ) ನಿಧಿಯನ್ನು ವೆಚ್ಚ ಮಾಡಲಿದೆ.

ಮಣಿಪುರ ಮತ್ತು ಮಿಜೋರಾಂ ರಾಜ್ಯಗಳಲ್ಲಿ ವಾಸಿಸುವ ‘ಬನೇಯಿ ಮೆನಾಶೆ’ ಸಮುದಾಯವು ತಾವು ಪುರಾತನ ಇಸ್ರೇಲ್ ನ ಮೆನಾಶೆ ಬುಡಕಟ್ಟಿನ ವಂಶಸ್ಥರು ಎಂದು ಹೇಳಿಕೊಳ್ಳುತ್ತಾರೆ. ಇತಿಹಾಸಕಾರರ ಪ್ರಕಾರ, ಈ ಸಮುದಾಯವು ಕಳೆದ 300 ರಿಂದ 500 ವರ್ಷಗಳಲ್ಲಿ ಭಾರತಕ್ಕೆ ಬಂದಿರಬಹುದು.