ಸಾಗರ (ಮಧ್ಯಪ್ರದೇಶ)ದಲ್ಲಿ ಮಸೀದಿ ಉತ್ಖನನದಲ್ಲಿ ಶ್ರೀರಾಮನ ಮೂರ್ತಿ ಪತ್ತೆ!

  • ಹಿಂದೂಗಳಿಂದ ಪೂಜೆ ಆರಂಭ

  • ಈ ಜಾಗದಲ್ಲಿ ಮಂದಿರ ನಿರ್ಮಿಸಲು ಹಿಂದೂ ಸಂಘಟನೆಗಳ ಬೇಡಿಕೆ

ಸಾಗರ (ಮಧ್ಯಪ್ರದೇಶ) – ಇಲ್ಲಿನ ಪಾಪೇಡ್ ಗ್ರಾಮದಲ್ಲಿ ಮಸೀದಿ ನಿರ್ಮಾಣಕ್ಕಾಗಿ ನಡೆಯುತ್ತಿದ್ದ ಉತ್ಖನನದ ವೇಳೆ ನೆಲದಡಿಯಲ್ಲಿ ಭಗವಾನ್ ಶ್ರೀರಾಮನ ಮೂರ್ತಿ ಪತ್ತೆಯಾಗಿದೆ. ಮೂರ್ತಿ ಸಿಕ್ಕಿದ ಸುದ್ದಿ ಗ್ರಾಮದಲ್ಲಿ ಹರಡುತ್ತಿದ್ದಂತೆ, ಹೆಚ್ಚಿನ ಸಂಖ್ಯೆಯ ಹಿಂದೂಗಳು ಅಲ್ಲಿ ಜಮಾಯಿಸಿ ತಕ್ಷಣವೇ ಪೂಜೆ ಆರಂಭಿಸಿದರು. ಈ ಮೂರ್ತಿ ಭಗ್ನ ಸ್ಥಿತಿಯಲ್ಲಿದೆ. ಈ ಸ್ಥಳಕ್ಕೆ ಹಿಂದುತ್ವನಿಷ್ಠ ಸಂಘಟನೆಗಳ ಕಾರ್ಯಕರ್ತರು ಭೇಟಿ ನೀಡಿ ಇಲ್ಲಿ ಮಂದಿರ ನಿರ್ಮಿಸಬೇಕು ಎಂದು ಬೇಡಿಕೆ ಇಟ್ಟರು. ಆ ನಂತರ ಮುಸ್ಲಿಮರೂ ಅಲ್ಲಿಗೆ ಬಂದಿದ್ದರಿಂದ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಯಿತು. ಇದರಿಂದಾಗಿ ಪೊಲೀಸ್ ಮತ್ತು ಆಡಳಿತದ ತಂಡವೂ ತಕ್ಷಣ ಸ್ಥಳಕ್ಕೆ ಧಾವಿಸಿತು.

ಮಂದಿರ ಕೆಡವಿ ಮಸೀದಿ ಕಟ್ಟಲಾಗಿದೆ! – ಹಿಂದೂ ಸಂಘಟನೆಗಳ ಪ್ರತಿಪಾದನೆ

ಹಿಂದೂ ಸಂಘಟನೆಗಳ ಪ್ರಕಾರ, ಈ ಸ್ಥಳದಲ್ಲಿ ಹಿಂದೆ ಮಂದಿರವಿತ್ತು ಮತ್ತು ನಂತರ ಅದನ್ನು ಕೆಡವಿ ಮಸೀದಿಯನ್ನು ನಿರ್ಮಿಸಲಾಗಿದೆ. ಇದರಿಂದ ಹಿಂದೂ ಮತ್ತು ಮುಸ್ಲಿಮರು ಮುಖಾಮುಖಿಯಾಗಿದ್ದರಿಂದ ಪ್ರದೇಶದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಯಿತು. ಪೊಲೀಸ್ ಮತ್ತು ಆಡಳಿತಾಧಿಕಾರಿಗಳು ಎರಡೂ ಕಡೆಯ ನಾಯಕರೊಂದಿಗೆ ಚರ್ಚಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಲು ಪ್ರಯತ್ನಿಸಿದರು. ಸದ್ಯ ಗ್ರಾಮದಲ್ಲಿ ಉದ್ವಿಗ್ನ ವಾತಾವರಣವಿದೆ.

ಜಾಗದಲ್ಲಿ ಯಾವುದೇ ನಿರ್ಮಾಣ ಕಾರ್ಯ ನಡೆಯುವುದಿಲ್ಲ! – ಉಪ ವಿಭಾಗೀಯ ದಂಡಾಧಿಕಾರಿ

ಮೂರ್ತಿ ಪತ್ತೆಯಾದ ನಂತರ ಬಂಡಾದ ಉಪ ವಿಭಾಗೀಯ ದಂಡಾಧಿಕಾರಿ ನವೀನ್ ಠಾಕೂರ್ ಅವರು ಮಾತನಾಡಿ, ಉತ್ಖನನದ ವೇಳೆ ಸಿಕ್ಕ ಮೂರ್ತಿಯ ಬಗ್ಗೆ ಗ್ರಾಮಸ್ಥರು ಮಾಹಿತಿ ನೀಡಿದ್ದಾರೆ. ಇದನ್ನು ಪುರಾತತ್ವ ಇಲಾಖೆ ಪರಿಶೀಲಿಸಲಿದೆ. ಮೂರ್ತಿಯನ್ನು ಪೊಲೀಸರ ವಶಕ್ಕೆ ನೀಡಲಾಗುವುದು. ಪುರಾತತ್ವ ಇಲಾಖೆ ಮೂರ್ತಿಯ ಮೂಲವನ್ನು ಪರಿಶೀಲಿಸಲಿದೆ. ಅಲ್ಲಿಯವರೆಗೆ ಈ ಜಾಗದಲ್ಲಿ ಯಾವುದೇ ನಿರ್ಮಾಣ ಕಾರ್ಯ ನಡೆಯುವುದಿಲ್ಲ, ಎಂದು ಹೇಳಿದರು. ಈ ಜಾಗ ಮಸೀದಿ ನಿರ್ವಹಣಾ ಸಮಿತಿಯ ಒಡೆತನದಲ್ಲಿದೆ.

ಸಂಪಾದಕೀಯ ನಿಲುವು

ಇಲ್ಲಿಯವರೆಗೆ ಬಹಿರಂಗಗೊಂಡ ಇಂತಹ ಘಟನೆಗಳಿಂದ ‘ಭಾರತದಲ್ಲಿ ಬಹುತೇಕ ಮಸೀದಿಗಳನ್ನು ದೇವಾಲಯಗಳನ್ನು ಕೆಡವಿ ನಿರ್ಮಿಸಲಾಗಿದೆ’ ಎಂಬುದು ಸಾಬೀತಾಗುತ್ತದೆ. ಆದ್ದರಿಂದ, ಕೇಂದ್ರ ಸರಕಾರವು ಒಂದು ಸಮಿತಿಯನ್ನು ರಚಿಸಿ, ಈ ರೀತಿ ನಾಶವಾದ ಹಿಂದೂ ದೇವಾಲಯಗಳನ್ನು ಪತ್ತೆ ಹಚ್ಚಿ, ಅಲ್ಲಿ ಮತ್ತೆ ಮಂದಿರ ನಿರ್ಮಿಸಲು ಪ್ರಯತ್ನಿಸಬೇಕು!