ಮುಂಬರುವ ಅಧಿವೇಶನದಲ್ಲಿ ‘ಗೋಹತ್ಯೆ ನಿಷೇಧ ಕಾಯಿದೆ’ ಮತ್ತು ‘ಧಾರ್ಮಿಕ ಮತಾಂತರ ನಿಷೇಧ ಕಾಯಿದೆ’ ಹಿಂಪಡೆಯಲು ಪ್ರಕ್ರಿಯೆ ಆರಂಭ! Congress Siddaramaiah Cow Slaughter

ಕಾಂಗ್ರೆಸ್ ಸರಕಾರದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಅಲ್ಪಸಂಖ್ಯಾತರ ನಿಯೋಗಕ್ಕೆ ಭರವಸೆ

ಮಂಗಳೂರು – ಹಿಂದಿನ ಭಾಜಪ ಸರಕಾರ ಜಾರಿಗೆ ತಂದಿದ್ದ ‘ಕರ್ನಾಟಕ ಜಾನುವಾರು ಸಂರಕ್ಷಣಾ ಕಾಯಿದೆ ೨೦೨೧ (ಗೋಹತ್ಯೆ ನಿಷೇಧ ಕಾಯಿದೆ)’ ಮತ್ತು ‘ಕರ್ನಾಟಕ ಧಾರ್ಮಿಕ ಸ್ವಾತಂತ್ರ್ಯ ಸಂರಕ್ಷಣಾ ಕಾಯಿದೆ ೨೦೨೧ (ಧಾರ್ಮಿಕ ಮತಾಂತರ ನಿಷೇಧ ಕಾಯಿದೆ)’ಯನ್ನು ಹಿಂಪಡೆಯುವ ಬಗ್ಗೆ ಮುಂಬರುವ ಬೆಳಗಾವಿ ಅಧಿವೇಶನದಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತ ನಿಯೋಗಕ್ಕೆ ಭರವಸೆ ನೀಡಿದ್ದಾರೆ.

೧. ಇತ್ತೀಚೆಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜಾನುವಾರುಗಳ ಸಾಗಣೆಗೆ ಸಂಬಂಧಿಸಿದ ಘಟನೆಗಳ ಹಿನ್ನೆಲೆಯಲ್ಲಿ, ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಮುಖಂಡರು ಮತ್ತು ಜಿಲ್ಲಾ ಕಾಂಗ್ರೆಸ್ ಸಮಿತಿಯ ನಿಯೋಗವು ಮುಖ್ಯಮಂತ್ರಿಗಳ ನಿವಾಸ ‘ಕಾವೇರಿ’ಯಲ್ಲಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದೆ.

೨. ೨೦೨೩ ರ ವಿಧಾನಸಭಾ ಚುನಾವಣೆ ಪ್ರಣಾಳಿಕೆಯಲ್ಲಿ ಕಾಂಗ್ರೆಸ್ ಪಕ್ಷವು ಅಧಿಕಾರಕ್ಕೆ ಬಂದ ಒಂದು ವರ್ಷದೊಳಗೆ ಈ ಕಾಯಿದೆಗಳನ್ನು ಹಿಂಪಡೆಯುವುದಾಗಿ ಭರವಸೆ ನೀಡಿತ್ತು. ಕೊಟ್ಟ ಮಾತಿನಂತೆ ಈ ಎರಡೂ ಕಾಯಿದೆಗಳನ್ನು ಹಿಂಪಡೆಯಲು ಮುಂದಿನ ಬೆಳಗಾವಿ ಅಧಿವೇಶನದಲ್ಲಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಮನವಿಯಲ್ಲಿ ವಿನಂತಿಸಲಾಗಿದೆ.

೩. ಮನವಿಯಲ್ಲಿ, ಭಾಝಪ ಸರಕಾರದ ಗೋಹತ್ಯೆ ನಿಷೇಧ ಕಾಯಿದೆಯಿಂದಾಗಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಯದ ವಾತಾವರಣ ಸೃಷ್ಟಿಯಾಗಿದ್ದು, ಗೋ ಕಳ್ಳಸಾಗಣೆ ಮಾಡುವವರ ಮೇಲೆ ಪೊಲೀಸರು ಗುಂಡು ಹಾರಿಸುವುದು, ಅವರ ಮನೆ-ಆಸ್ತಿ ಜಪ್ತಿ ಮಾಡುವುದು ಮುಂತಾದ ಕಳವಳಕಾರಿ ಘಟನೆಗಳು ನಡೆದಿವೆ ಎಂದು ಹೇಳಲಾಗಿದೆ. ಈ ‘ಕರಾಳ ಕಾಯಿದೆ’ಯಿಂದಾಗಿ ರೈತರಿಗೆ ತಮ್ಮ ಜಾನುವಾರುಗಳನ್ನು ಮಾರಾಟ ಮಾಡಲು ಸಾಧ್ಯವಾಗದಂತಹ ವಾತಾವರಣ ನಿರ್ಮಾಣವಾಗಿದೆ. ಅಲ್ಲದೆ, ‘ಕರ್ನಾಟಕ ಧಾರ್ಮಿಕ ಸಂರಕ್ಷಣಾ ಕಾಯಿದೆ’ಯ ಹೆಸರಿನಲ್ಲಿ ರಾ.ಸ್ವ. ಸಂಘ ಪರಿವಾರದ ಜನರು ಅಲ್ಪಸಂಖ್ಯಾತರ ಮೇಲೆ ನಿರಂತರವಾಗಿ ದೌರ್ಜನ್ಯ ಎಸಗುತ್ತಿದ್ದಾರೆ. ಸಂವಿಧಾನದ ಪ್ರಕಾರ, ಪ್ರತಿಯೊಬ್ಬರಿಗೂ ಯಾವುದೇ ಒತ್ತಡವಿಲ್ಲದೆ ತಮಗೆ ಬೇಕಾದ ಧರ್ಮವನ್ನು ಪಾಲಿಸುವ ಹಕ್ಕಿರುವಾಗ, ರಾಜ್ಯದಲ್ಲಿ ಮತಾಂತರ ನಿಷೇಧ ಕಾಯಿದೆ ಜಾರಿಯಲ್ಲಿರುವುದು ಸಂವಿಧಾನ ವಿರೋಧಿಯಾಗಿದೆ ಎಂದು ಅವರು ಮನವಿಯಲ್ಲಿ ದೂರಿದ್ದಾರೆ.