ಮುಂಬಯಿ: ರಾಜ್ಯ ಸಂರಕ್ಷಿತ ಸ್ಮಾರಕ ಬಾಂದ್ರಾ ಕೋಟೆಯಲ್ಲಿ ಮದ್ಯ ಪಾರ್ಟಿ!

ಮುಂಬಯಿ – ಮಹಾರಾಷ್ಟ್ರ ರಾಜ್ಯದ ಸಂರಕ್ಷಿತ ಸ್ಮಾರಕವಾದ ಬಾಂದ್ರಾ ಕೋಟೆಯಲ್ಲಿ ಮದ್ಯ ಪಾರ್ಟಿ ನಡೆಯುತ್ತಿರುವ ವಿಡಿಯೋವೊಂದನ್ನು ಉದ್ಧವ್ ಬಾಳಾಸಾಹೇಬ್ ಠಾಕ್ರೆ ಪಕ್ಷದ ಅಖಿಲ್ ಚಿತ್ರೆ ಅವರು ತಮ್ಮ ‘ಎಕ್ಸ್’ ಖಾತೆಯಲ್ಲಿ ಪ್ರಸಾರ ಮಾಡಿದ್ದಾರೆ.
ಕೆಲವು ಸ್ಥಳೀಯ ನಾಗರಿಕರು ಪೊಲೀಸರೊಂದಿಗೆ ಪಾರ್ಟಿ ನಡೆಯುತ್ತಿದ್ದ ಸ್ಥಳಕ್ಕೆ ಬಂದರು. ಪೊಲೀಸರು ಪಾರ್ಟಿ ಆಯೋಜಕರನ್ನು, “ನಿಮಗೆ ಅನುಮತಿ ಯಾರು ನೀಡಿದರು?,” ಎಂದು ಪ್ರಶ್ನಿಸಿದರು. ಅದಕ್ಕೆ ಆಯೋಜಕರು ಅನುಮತಿ ಇದೆ ಎಂದು ಹೇಳಿದರು; ಆದರೆ ವಾಸ್ತವದಲ್ಲಿ ಅವರು ಯಾವುದೇ ದಾಖಲೆಗಳನ್ನು ತೋರಿಸಲಿಲ್ಲ. ಈ ಸಂಪೂರ್ಣ ಮಾತುಕತೆಯು ಅಖಿಲ್ ಚಿತ್ರೆ ಅವರು ಪ್ರಸಾರ ಮಾಡಿದ ವಿಡಿಯೋದಲ್ಲಿ ಕಂಡು ಬರುತ್ತದೆ.

ಬಾಂದ್ರಾ ಕೋಟೆಯಲ್ಲಿ ಪಾರ್ಟಿ ನಡೆಯುತ್ತಿರುವುದು ಹಾಗೂ ಮದ್ಯದ ಬಾಟಲಿಗಳು ಈ ವಿಡಿಯೋದಲ್ಲಿ ಸೆರೆಯಾಗಿವೆ. ಪೊಲೀಸರು ಅನುಮತಿ ಪತ್ರಗಳನ್ನು ಕೇಳಿದರೂ ಆಯೋಜಕರು ದಾಖಲೆಗಳನ್ನು ತೋರಿಸದೆ, ಸ್ಥಳೀಯ ನಾಗರಿಕರೊಂದಿಗೆ ವಾಗ್ವಾದ ನಡೆಸಿದ್ದಾರೆ. “ರಾಜ್ಯ ಸಂರಕ್ಷಿತ ಸ್ಮಾರಕದಲ್ಲಿ ಪಾರ್ಟಿ ನಡೆಸಲು ಸರ್ಕಾರ ಹೇಗೆ ಅನುಮತಿ ನೀಡಿತು?” ಎಂದು ಪ್ರಶ್ನಿಸಿ ವಿರೋಧ ಪಕ್ಷಗಳಿಂದ ಮಹಾಯುತಿ ನಾಯಕರ ವಿರುದ್ಧ ಟೀಕೆಗಳು ವ್ಯಕ್ತವಾಗುತ್ತಿವೆ.

ಪಾರ್ಟಿಗೆ ಅನುಮತಿ ನೀಡಿದ್ದರೆ, ಕ್ರಮ ಕೈಗೊಳ್ಳುತ್ತೇವೆ! – ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್

ಈ ವಿಷಯದ ಕುರಿತಾದ ವಿಡಿಯೋವನ್ನು ನಾನು ಇನ್ನೂ ನೋಡಿಲ್ಲ; ಆದರೆ ಕೆಲವು ಜನರಿಂದ ನನಗೆ ಈ ವಿಷಯ ತಿಳಿದುಬಂದಿದೆ. ಬಾಂದ್ರಾ ಕೋಟೆಯಲ್ಲಿ ಪಾರ್ಟಿಗೆ ಅನುಮತಿ ನೀಡಿದ್ದರೆ, ಖಂಡಿತವಾಗಿಯೂ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡುತ್ತಾ ಪ್ರತಿಕ್ರಿಯೆ ವ್ಯಕ್ತಪಡಿಸಿದರು.

 

ಸಂಪಾದಕೀಯ ನಿಲುವು

ಎಲ್ಲಿಯವರೆಗೆ ಇಂತವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಿಲ್ಲವೋ ಅಲ್ಲಿಯವರೆಗೆ ಇಂತಹ ಕೃತ್ಯವನ್ನು ಯಾರೂ ಮಾಡಲು ಧೈರ್ಯ ಮಾಡುವುದಿಲ್ಲ!