ಹಿಂದೂ ಆಗಿರುವುದು ಎಂದರೆ, ಭಾರತಕ್ಕೆ ಉತ್ತರಾಧಿಕಾರಿಯಾಗಿರುವುದು! – ಸರಸಂಘಚಾಲಕರು RSS Chief P.P. Mohan Bhagwat Statement

ಬೆಂಗಳೂರು – ಹಿಂದೂ ಆಗಿರುವುದು ಎಂದರೆ, ಭಾರತಕ್ಕೆ ಉತ್ತರಾಧಿಕಾರಿ ಆಗಿರುವುದು, ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ.ಪೂ. ಸರಸಂಘಚಾಲಕ ಡಾ. ಮೋಹನಜೀ ಭಾಗವತ್ ಅವರು ಹೇಳಿದ್ದಾರೆ. ರಾಷ್ಟ್ರೀಯ ಸ್ವಯಂಸೇವಕ ಸಂಘಕ್ಕೆ ೧೦೦ ವರ್ಷಗಳು ಪೂರ್ಣಗೊಂಡ ಹಿನ್ನೆಲೆಯಲ್ಲಿ ಇಲ್ಲಿ ಆಯೋಜಿಸಲಾಗಿದ್ದ ಉಪನ್ಯಾಸದಲ್ಲಿ ಅವರು ಮಾತನಾಡುತ್ತಿದ್ದರು.

ಪ.ಪೂ. ಸರಸಂಘಚಾಲಕರು ಮಾತು ಮುಂದುವರೆಸಿ, ‘ರಾಷ್ಟ್ರೀಯ ಸ್ವಯಂಸೇವಕ ಸಂಘಕ್ಕೆ ಅಧಿಕಾರದ ಯಾವುದೇ ಮೋಹವಿಲ್ಲ. ನಮ್ಮ ಉದ್ದೇಶ ಕೇವಲ ಸೇವೆ ಮಾಡುವುದಾಗಿದೆ. ಹಿಂದೂ ಸಮಾಜವನ್ನು ಅಧಿಕಾರಕ್ಕಾಗಿ ಅಲ್ಲ, ಬದಲಾಗಿ ರಾಷ್ಟ್ರದ ಗೌರವಕ್ಕಾಗಿ ಸಂಘಟಿಸುವುದು, ರಾಷ್ಟ್ರೀಯ ಸ್ವಯಂಸೇವಕ ಸಂಘದ ಗುರಿಯಾಗಿದೆ. ಭಾರತದ ಗೌರವಕ್ಕಾಗಿ ಹಿಂದೂಗಳು ಸಂಘಟಿತರಾಗಬೇಕು. ಭಾರತದಲ್ಲಿ ಯಾರೂ ಅ-ಹಿಂದೂಗಳಿಲ್ಲ; ಏಕೆಂದರೆ ಎಲ್ಲರ ಪೂರ್ವಜರು ಒಂದೇ ಮತ್ತು ಅವರ ಸಂಸ್ಕೃತಿಯು ದೇಶದ ಮೂಲ ಹಿಂದೂ ಸಂಸ್ಕೃತಿಯಾಗಿದೆ’ ಎಂದರು.

ನಮಗೆ ನಮ್ಮ ರಾಷ್ಟ್ರೀಯತೆಯನ್ನು ಬ್ರಿಟಿಷರು ನೀಡಿಲ್ಲ! – ಭಾಗವತ್

ಪ.ಪೂ. ಮೋಹನ ಭಾಗವತ್ ಅವರು ಮಾತು ಮುಂದುವರೆಸಿ, ‘ರಾಷ್ಟ್ರೀಯ ಸ್ವಯಂಸೇವಕ ಸಂಘವು ಹಿಂದೂ ಸಮಾಜದ ಮೇಲೆ ಗಮನ ಕೇಂದ್ರೀಕರಿಸಿದಾಗ, ‘ನೀವು ಇದನ್ನು ಏಕೆ ಮಾಡುತ್ತಿದ್ದೀರಿ?’ ಎಂದು ನಮಗೆ ಪ್ರಶ್ನಿಸಲಾಗುತ್ತದೆ. ಪ್ರತಿಯೊಬ್ಬ ಹಿಂದೂವೂ ಭಾರತಕ್ಕೆ ಜವಾಬ್ದಾರಿಯುತ ವ್ಯಕ್ತಿಯಾಗಿದ್ದಾನೆ. ನಮಗೆ ನಮ್ಮ ರಾಷ್ಟ್ರೀಯತೆಯನ್ನು ಬ್ರಿಟಿಷರು ನೀಡಿಲ್ಲ. ನಾವು ಪ್ರಾಚೀನ ಕಾಲದಿಂದಲೂ ಹಿಂದೂಗಳಾಗಿದ್ದೇವೆ. ಪ್ರತಿ ರಾಷ್ಟ್ರಕ್ಕೂ ಒಂದು ಮೂಲ ಸಂಸ್ಕೃತಿ ಇರುತ್ತದೆ. ಭಾರತದ ಮೂಲ ಸಂಸ್ಕೃತಿ ಏನು? ಎಂದು ನಾವು ಪ್ರಶ್ನಿಸಿದರೆ, ಅದರ ವಿವರಣೆಯು ನಮ್ಮನ್ನು ‘ಹಿಂದೂ’ ಎಂಬ ಶಬ್ದದ ಕಡೆಗೆ ಕೊಂಡೊಯ್ಯುತ್ತದೆ’ ಎಂದು ಹೇಳಿದರು.

ಸಂಘವು ೬೦ ರಿಂದ ೭೦ ವರ್ಷಗಳ ಕಾಲ ತೀವ್ರ ವಿರೋಧವನ್ನು ಸಹಿಸಿದೆ!

ರಾಷ್ಟ್ರೀಯ ಸ್ವಯಂಸೇವಕ ಸಂಘದ ಬಗ್ಗೆ ಮಾತನಾಡಿದ ಅವರು, ‘ರಾಷ್ಟ್ರೀಯ ಸ್ವಯಂಸೇವಕ ಸಂಘದ ಪಯಣ ಸುಲಭವಾಗಿರಲಿಲ್ಲ. ಸಂಘಕ್ಕೆ ೧೦೦ ವರ್ಷಗಳು ಪೂರ್ಣಗೊಂಡಿವೆ. ಅವುಗಳಲ್ಲಿ ೬೦ ರಿಂದ ೭೦ ವರ್ಷಗಳು ಸಂಘರ್ಷದ ಮತ್ತು ತೀವ್ರ ವಿರೋಧವನ್ನು ಸಹಿಸುವಂತಿತ್ತು. ಸಂಘದ ಮೇಲೆ ಎರಡು ಬಾರಿ ನಿಷೇಧ ಹೇರಲಾಯಿತು ಮತ್ತು ಸ್ವಯಂಸೇವಕರ ಮೇಲೆ ಆಕ್ರಮಣಗಳೂ ಆದವು. ಸ್ವಯಂಸೇವಕರ ಹತ್ಯೆಗಳೂ ಆದವು. ಸಂಘದ ವಿಸ್ತರಣೆ ಆಗಬಾರದು ಎಂದು ನಾನಾ ರೀತಿಯ ಪ್ರಯತ್ನಗಳು ನಡೆದವು; ಆದರೆ ಸ್ವಯಂಸೇವಕರು ಈ ಉದ್ದೇಶವನ್ನು ಯಶಸ್ವಿಯಾಗಲು ಬಿಡಲಿಲ್ಲ. ನಿಸ್ಪೃಹ ಭಾವನೆಯಿಂದ ಸ್ವಯಂಸೇವಕರು ಮತ್ತು ಸಂಘವು ಕೆಲಸ ಮಾಡುತ್ತಲೇ ಇತ್ತು. ಅದಕ್ಕಾಗಿಯೇ ಸಂಘವು ಜನರ ಮನಸ್ಸಿನಲ್ಲಿ ವಿಶ್ವಾಸವನ್ನು ಮೂಡಿಸಲು ಸಾಧ್ಯವಾಯಿತು’’ಎಂದರು.