ಭಾರತೀಯ ಮೂಲದ ಗಜಾಲಾ ಹಾಶ್ಮಿ ವರ್ಜೀನಿಯಾ ಉಪ ರಾಜ್ಯಪಾಲರಾಗಿ ಆಯ್ಕೆ!

ರಿಚ್ಮಂಡ್ (ವರ್ಜೀನಿಯಾ) – ಅಮೆರಿಕಾದ ವರ್ಜೀನಿಯಾ ರಾಜ್ಯದಲ್ಲಿ ಭಾರತೀಯ ಮೂಲದ ಗಜಾಲಾ ಹಾಶ್ಮಿ ಅವರು ಉಪ ರಾಜ್ಯಪಾಲರಾಗಿ ಆಯ್ಕೆಯಾಗಿದ್ದಾರೆ. ರಾಜ್ಯದ ಈ ಉನ್ನತ ಹುದ್ದೆಯನ್ನು ತಲುಪಿದ ಮೊದಲ ಮುಸ್ಲಿಂ ಮತ್ತು ದಕ್ಷಿಣ ಏಷ್ಯಾ ಮೂಲದ ಮಹಿಳೆ ಇವರಾಗಿದ್ದಾರೆ. 61 ವರ್ಷದ ಡೆಮೋಕ್ರಾಟ್ ಗಜಾಲಾ ಹಾಶ್ಮಿ ಅವರು ಉಪ ರಾಜ್ಯಪಾಲ ಸ್ಥಾನದ ಚುನಾವಣೆಯಲ್ಲಿ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಜಾನ್ ರೀಡ್ ಅವರನ್ನು ಸೋಲಿಸಿದರು. ‘ಇಂಡಿಯನ್ ಅಮೆರಿಕನ್ ಇಂಪ್ಯಾಕ್ಟ್ ಫಂಡ್’ ಎಂಬ ಭಾರತೀಯ-ಅಮೆರಿಕನ್ ಸಾಮಾಜಿಕ ಸಂಸ್ಥೆಯು ಗಜಾಲಾ ಹಾಶ್ಮಿ ಅವರ ವಿಜಯವನ್ನು ಸ್ವಾಗತಿಸಿದೆ. ‘ಇಂಪ್ಯಾಕ್ಟ್ ಫಂಡ್’ನ ಕಾರ್ಯಕಾರಿ ನಿರ್ದೇಶಕ ಚಿಂತನ್ ಪಟೇಲ್ ಅವರು ಹಾಶ್ಮಿ ಅವರ ಗೆಲುವನ್ನು ಪ್ರಜಾಪ್ರಭುತ್ವ ಮತ್ತು ಭಾರತೀಯ ಸಮುದಾಯಕ್ಕೆ ಒಂದು ಪ್ರಮುಖ ಮೈಲಿಗಲ್ಲು ಎಂದು ಬಣ್ಣಿಸಿದ್ದಾರೆ.

ಗಜಾಲಾ ಹಾಶ್ಮಿ ಅವರು ಮೊದಲ ಬಾರಿಗೆ ನವೆಂಬರ್ 2019 ರಲ್ಲಿ ವರ್ಜೀನಿಯಾ ಶಾಸನ ಸಭೆಗೆ ಆಯ್ಕೆಯಾಗಿದ್ದರು. ಗಜಾಲಾ ಅವರು 4 ವರ್ಷದವರಿದ್ದಾಗ, ಭಾರತದಿಂದ ಅಮೆರಿಕಾಕ್ಕೆ ಬಂದು ತಮ್ಮ ತಾಯಿ ಮತ್ತು ದೊಡ್ಡ ಸಹೋದರನೊಂದಿಗೆ ಜಾರ್ಜಿಯಾದಲ್ಲಿ ತಮ್ಮ ತಂದೆಯೊಂದಿಗೆ ನೆಲೆಸಿದರು. 1991ರಲ್ಲಿ ಪತಿ ಅಝರ್ ಅವರೊಂದಿಗೆ ವಿವಾಹವಾದ ನಂತರ, ಅವರು ವರ್ಜೀನಿಯಾದ ರಿಚ್ಮಂಡ್‌ನಲ್ಲಿ ನೆಲೆಸಿದರು. ಅವರು ಸುಮಾರು 30 ವರ್ಷಗಳ ಕಾಲ ರಿಚ್ಮಂಡ್ ವಿಶ್ವವಿದ್ಯಾಲಯ ಮತ್ತು ‘ರೆನಾಲ್ಡ್ಸ್ ಕಮ್ಯುನಿಟಿ ಕಾಲೇಜ್’ಗಳಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದಾರೆ.