ನ್ಯಾಯವ್ಯವಸ್ಥೆ ಮತ್ತು ರಾಜ್ಯಪಾಲರ ಕುರಿತು ವಿವಾದಾತ್ಮಕ ಹೇಳಿಕೆ ನೀಡಿದ್ದರಿಂದ ನ್ಯಾಯವಾದಿ ಅಸೀಮ್ ಸರೋದೆ ಅವರ ಪರವಾನಗಿ 3 ತಿಂಗಳ ಅವಧಿಗೆ ರದ್ದು! Asim Sarode Case

ಅಸೀಮ್ ಸರೋದೆ ಅವರು ಮುಂದಿನ 3 ತಿಂಗಳು ವಕಾಲತ್ತು ನಡೆಸಲು ಸಾಧ್ಯವಿಲ್ಲ!

ಪುಣೆ – ಇಲ್ಲಿನ ಸಾಮಾಜಿಕ ಕಾರ್ಯಕರ್ತ ಮತ್ತು ನ್ಯಾಯವಾದಿ ಅಸೀಮ್ ಸರೋದೆ ಅವರ ಪರವಾನಗಿಯನ್ನು 3 ತಿಂಗಳ ಅವಧಿಗೆ ರದ್ದುಗೊಳಿಸಲಾಗಿದೆ. ಅವರು ಒಂದು ಸಾರ್ವಜನಿಕ ಕಾರ್ಯಕ್ರಮದಲ್ಲಿ ನ್ಯಾಯವ್ಯವಸ್ಥೆ, ರಾಜ್ಯಪಾಲರು ಮತ್ತು ವಿಧಾನಸಭೆ ಅಧ್ಯಕ್ಷರ ಕುರಿತು ಕೆಲವು ವಿವಾದಾತ್ಮಕ ಹೇಳಿಕೆಗಳನ್ನು ನೀಡಿದ್ದರು. ಈ ಹಿನ್ನೆಲೆಯಲ್ಲಿ ‘ಮಹಾರಾಷ್ಟ್ರ ಮತ್ತು ಗೋವಾ ಬಾರ್ ಕೌನ್ಸಿಲ್’ ಈ ಕ್ರಮ ಕೈಗೊಂಡಿದೆ. ಈ ಕ್ರಮವು 3 ತಿಂಗಳ ಅವಧಿಗೆ ಜಾರಿಯಲ್ಲಿರುತ್ತದೆ. 3 ತಿಂಗಳ ನಂತರ ಸರೋದೆ ಮತ್ತೆ ನ್ಯಾಯವಾದಿಯಾಗಿ ಕೆಲಸ ಮಾಡಬಹುದು.

ಶಿವಸೇನೆ ಪಕ್ಷದ ಹೆಸರು ಮತ್ತು ಚಿಹ್ನೆಗೆ ಸಂಬಂಧಿಸಿದಂತೆ ಸರ್ವೋಚ್ಚ ನ್ಯಾಯಾಲಯದಲ್ಲಿ ನವೆಂಬರ್ 12 ರಂದು ಮುಂದಿನ ವಿಚಾರಣೆ ಇರುವುದರಿಂದ, ಈ ವಿಚಾರಣೆಯ ಕಲಾಪಗಳಲ್ಲಿ ನ್ಯಾಯವಾದಿಯಾಗಿ ಸರೋದೆ ಅವರಿಗೆ ಭಾಗವಹಿಸಲು ಸಾಧ್ಯವಾಗುವುದಿಲ್ಲ. ಸಂಬಂಧಿತ ಪ್ರಕರಣದಲ್ಲಿ ದೂರುದಾರರು, ಸರೋದೆ ಅವರ ಹೇಳಿಕೆಗಳಿಂದ ನ್ಯಾಯವ್ಯವಸ್ಥೆಯ ಅಪಮಾನ ಮತ್ತು ನ್ಯಾಯಾಲಯಗಳ ಕುರಿತು ಅವಿಶ್ವಾಸ ಮೂಡಿದೆ, ಎಂದು ಆರೋಪಿಸಿದ್ದಾರೆ. ಆಗಸ್ಟ್ 12, 2025 ರಂದು ಈ ಪ್ರಕರಣದ ವಿಚಾರಣೆ ನಡೆಸಲಾಗಿತ್ತು. ನ್ಯಾಯವಾದಿ ವಿವೇಕಾನಂದ ಘಾಟ್ಗೆ ಅವರ ಅಧ್ಯಕ್ಷತೆಯಲ್ಲಿ ನ್ಯಾಯವಾದಿ ಸಂಗ್ರಾಮ್ ದೇಸಾಯಿ ಮತ್ತು ನ್ಯಾಯವಾದಿ ನೆಲ್ಸನ್ ರಾಜನ್ ಅವರು ಸದಸ್ಯರಾಗಿದ್ದ ತ್ರಿಸದಸ್ಯ ಸಮಿತಿಯನ್ನು ರಚಿಸಲಾಗಿತ್ತು.

ಅಸೀಮ್ ಸರೋದೆ ಏನು ಹೇಳಿದ್ದರು?

ನ್ಯಾಯವಾದಿ ಸರೋದೆ ಅವರು ತಮ್ಮ ಹೇಳಿಕೆಯಲ್ಲಿ, ನ್ಯಾಯವ್ಯವಸ್ಥೆಯು ಸರಕಾರದ ಒತ್ತಡದಲ್ಲಿ ಕಾರ್ಯನಿರ್ವಹಿಸುತ್ತಿದೆ. ತೀರ್ಪುಗಳನ್ನು ಸರಕಾರದ ಪರವಾಗಿ ನೀಡಲಾಗುತ್ತದೆ ಎಂದು ಹೇಳಿದ್ದರು. ಅವರು ರಾಜ್ಯಪಾಲರನ್ನು ಉದ್ದೇಶಿಸಿ ‘ಫಾಲ್ತೂ’ (ನಿಷ್ಪ್ರಯೋಜಕ) ಎಂಬ ಪದವನ್ನು ಬಳಸಿದ್ದರು. ಈ ಹೇಳಿಕೆಯಿಂದ ಸಾಮಾನ್ಯ ನಾಗರಿಕರಲ್ಲಿ ನ್ಯಾಯವ್ಯವಸ್ಥೆಯ ಮೇಲಿನ ವಿಶ್ವಾಸ ಕುಸಿಯುತ್ತದೆ ಮತ್ತು ಸಾಂವಿಧಾನಿಕ ಸಂಸ್ಥೆಗಳಿಗೂ ಅವಮಾನವಾಗುತ್ತದೆ. ದೂರುದಾರರು ಮಾರ್ಚ್ 19, 2024 ರಂದು ಪ್ರತಿವಾದಿಗೆ ಲಿಖಿತ ಕ್ಷಮೆಯಾಚಿಸಲು ಅವಕಾಶ ನೀಡಿದ್ದರು; ಆದರೆ ಅವರು ಅದನ್ನು ತಿರಸ್ಕರಿಸಿದರು.

ಅಸೀಮ್ ಸರೋದೆ ಮಾಡಿದ ವಾದ!

ನಾನು ಯಾವುದೇ ರೀತಿಯಲ್ಲಿ ನ್ಯಾಯಾಲಯದ ಅಥವಾ ಸಾಂವಿಧಾನಿಕ ಹುದ್ದೆಗಳ ಅಪಮಾನ ಮಾಡಿಲ್ಲ. ನನ್ನ ಹೇಳಿಕೆಯು ಪ್ರಜಾಪ್ರಭುತ್ವದಲ್ಲಿನ ರಚನಾತ್ಮಕ ಟೀಕೆಯಾಗಿತ್ತು. ‘ಫಾಲ್ತೂ’ ಎಂಬ ಪದವನ್ನು ನಾನು ಅಪಮಾನದ ಅರ್ಥದಲ್ಲಿ ಅಲ್ಲ, ಬದಲಾಗಿ ಸಾಮಾನ್ಯ ಭಾಷೆಯಲ್ಲಿ ಬಳಸಿದ್ದೇನೆ. ನನಗೆ ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕು ಇದೆ, ಎಂದು ಹೇಳಿದರು.