11 ಜನರ ವಿರುದ್ಧ ಆರೋಪಪಟ್ಟಿ ಸಲ್ಲಿಕೆ – Suhas Shetty Murder Case

ಮಂಗಳೂರಿನ ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣ

ಮಂಗಳೂರು – ಮಂಗಳೂರಿನಲ್ಲಿ ನಡೆದ ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ, ರಾಷ್ಟ್ರೀಯ ತನಿಖಾ ದಳದ (‘ಎನ್.ಐ.ಎ.’ – ನ್ಯಾಷನಲ್ ಇನ್ವೆಸ್ಟಿಗೇಷನ್ ಏಜೆನ್ಸಿ) ಅಧಿಕಾರಿಗಳು ಬೆಂಗಳೂರಿನ ‘ಎನ್.ಐ.ಎ.’ ವಿಶೇಷ ನ್ಯಾಯಾಲಯದಲ್ಲಿ 11 ಆರೋಪಿಗಳ ವಿರುದ್ಧ ಆರೋಪಪಟ್ಟಿಯನ್ನು ಸಲ್ಲಿಸಿದ್ದಾರೆ. ಹಳೆಯ ದ್ವೇಷದಿಂದ ಸುಹಾಸ್ ಶೆಟ್ಟಿಯವರ ಹತ್ಯೆ ಮಾಡಲಾಗಿದೆ, ಎಂದು ಆರೋಪಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ. ಆರೋಪಿಗಳಾದ ಸಫವಾನ್ ಉರ್ಫ ಕವಲೂರಿನ ಸಫವಾನ್, ನಿಯಾಜ್ ಉರ್ಫ ನಿಯಾ, ಮಹಮ್ಮದ್ ಮುಸಾಮಿರ್, ನೌಷಾದ್, ಆದಿಲ್ ಮಹರೂಫ್, ಅಜರುದ್ದೀನ್, ಅಬ್ದುಲ್ ಖಾದರ್, ಕಲಂದರ್ ಶಫಿ, ಎಂ. ನಾಗರಾಜ್, ರಂಜಿತ್ ಮತ್ತು ಮಹಮ್ಮದ್ ರಿಜ್ವಾನ್ ಇವರ ವಿರುದ್ಧ ಆರೋಪಪಟ್ಟಿ ಸಲ್ಲಿಸಲಾಗಿದೆ.

ಈ ಪ್ರಕರಣದಲ್ಲಿ ಆದಿಲ್ ಮಹರೂಫ್ ಎಂಬಾತ ಸುಹಾಸ್ ಶೆಟ್ಟಿಯವರ ಹಂತಕರಿಗೆ ಹಣಕಾಸಿನ ನೆರವು ನೀಡಿದ್ದನು. ಆರೋಪಿಗಳಲ್ಲಿ ಹೆಚ್ಚಿನವರು ನಿಷೇಧಿತ ಇಸ್ಲಾಮಿಕ್ ಸಂಘಟನೆಗಳಾದ ‘ಪಿ.ಎಫ್.ಐ.’ (ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ) ಮತ್ತು ‘ಕೆ.ಎಫ್.ಡಿ.’ (ಕರ್ನಾಟಕ ಫೋರಮ್ ಫಾರ್ ಡಿಗ್ನಿಟಿ) ಗಳ ಮಾಜಿ ಸದಸ್ಯರಾಗಿದ್ದಾರೆ ಎಂದು ಹೇಳಲಾಗಿದೆ.