ಸಿಂಹಸ್ಥ ಕುಂಭಮೇಳದ ಅತ್ಯುತ್ತಮ ಮತ್ತು ಪರಿಣಾಮಕಾರಿ ಯೋಜನೆಯೊಂದಿಗೆ ನಾಸಿಕಗೆ ದೇಶಾದ್ಯಂತ ಕೀರ್ತಿ ತರಬೇಕು! – ಗಿರೀಶ ಮಹಾಜನ, ಕುಂಭಮೇಳ ಸಚಿವರು ಹಾಗೂ ಸಚಿವರ ಸಮಿತಿಯ ಮುಖ್ಯಸ್ಥರು

ಸಿಂಹಸ್ಥ ಕುಂಭಮೇಳದ ಸಭೆಯಲ್ಲಿ ಮಾತನಾಡುತ್ತಿರುವ ಮಧ್ಯದಲ್ಲಿ ಕುಂಭಮೇಳ ಸಚಿವ ಗಿರೀಶ ಮಹಾಜನ ಮತ್ತು ಉಪಸ್ಥಿತರಿರುವ ಇತರ ಸಚಿವರು

ಮುಂಬಯಿ – ನಾಸಿಕ-ತ್ರಯಂಬಕೇಶ್ವರ ಸಿಂಹಸ್ಥ ಕುಂಭಮೇಳದ ಅತ್ಯುತ್ತಮ ಮತ್ತು ಪರಿಣಾಮಕಾರಿ ಯೋಜನೆಯೊಂದಿಗೆ ನಾಸಿಕನ ಕೀರ್ತಿಯು ದೇಶಾದ್ಯಂತ ಪಸರಿಸುವಂತಹ ಯೋಜನೆ ರೂಪಿಸಬೇಕು ಎಂದು ಕುಂಭಮೇಳ ಸಚಿವರು ಹಾಗೂ ಸಚಿವರ ಸಮಿತಿಯ ಮುಖ್ಯಸ್ಥರಾದ ಗಿರೀಶ ಮಹಾಜನ ಅವರು ಕರೆ ನೀಡಿದ್ದಾರೆ. ಸಿಂಹಸ್ಥ ಕುಂಭಮೇಳದ ನಿಮಿತ್ತ ಅಕ್ಟೋಬರ 29 ರಂದು ಸಚಿವಾಲಯದಲ್ಲಿ ವಿವಿಧ ಇಲಾಖೆಗಳ ವತಿಯಿಂದ ಕೈಗೊಳ್ಳಲಾಗುತ್ತಿರುವ ಅಭಿವೃದ್ಧಿ ಯೋಜನೆಗಳ ಪ್ರಗತಿ ಪರಿಶೀಲನೆಯನ್ನು ಗಿರೀಶ ಮಹಾಜನ ಅವರ ಅಧ್ಯಕ್ಷತೆಯಲ್ಲಿ ನಡೆದ ‘ಸಿಂಹಸ್ಥ ಕುಂಭಮೇಳ 2027’ ಸಚಿವರ ಸಮಿತಿಯ ಸಭೆಯಲ್ಲಿ ನಡೆಸಲಾಯಿತು. ಈ ಸಂದರ್ಭದಲ್ಲಿ ಅವರು ಮಾತನಾಡುತ್ತಿದ್ದರು. ಗಿರೀಶ ಮಹಾಜನ ಅವರು, ನಾಸಿಕನಲ್ಲಿ ಕುಂಭಮೇಳವು ಮಳೆಗಾಲದಲ್ಲಿ ನಡೆಯುವುದರಿಂದ ವಿಶೇಷ ಎಚ್ಚರಿಕೆ ವಹಿಸಬೇಕಾಗಿದೆ. ಆಡಳಿತವು ಎಲ್ಲಾ ಸಾಧ್ಯತೆಗಳನ್ನು ಪರಿಶೀಲಿಸಿ ಕ್ರಮ ಕೈಗೊಳ್ಳಬೇಕು. 12 ವರ್ಷಗಳ ಹಿಂದಿನ ಕುಂಭಮೇಳದ ಅನುಭವವನ್ನು ಗಮನದಲ್ಲಿಟ್ಟುಕೊಂಡು, ಈ ಬಾರಿ ಬರುವ ಭಕ್ತರ ಸಂಖ್ಯೆ ಹೆಚ್ಚಿರುವ ಸಾಧ್ಯತೆ ಇರುವುದರಿಂದ ರಾಜ್ಯ ಸರಕಾರವು ಸೂಕ್ಷ್ಮ ಯೋಜನೆಗಳನ್ನು ರೂಪಿಸುತ್ತಿದೆ ಎಂದು ಹೇಳಿದರು.

1. ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ಸಂರಕ್ಷಣಾ ಸಚಿವ ಛಗನ ಭುಜಬಲ ಅವರು ರಾಮಕುಂಡದ ಬಳಿ ಆಗಬಹುದಾದ ಜನಸಂದಣಿಯನ್ನು ಗಮನದಲ್ಲಿಟ್ಟುಕೊಂಡು ಆಡಳಿತವು ಮಾಡುತ್ತಿರುವ ಯೋಜನೆಯ ಬಗ್ಗೆ ತೃಪ್ತಿ ವ್ಯಕ್ತಪಡಿಸಿದರು. ಕುಂಭಮೇಳದ ನಿಮಿತ್ತ ಒದಗಿಸುತ್ತಿರುವ ಸೌಲಭ್ಯಗಳು ನಾಸಿಕನ ಜನರಿಗೆ ಶಾಶ್ವತವಾಗಿ ಲಭ್ಯವಾಗುವ ದೃಷ್ಟಿಯಿಂದ ಯೋಜನೆಗಳನ್ನು ರೂಪಿಸುವುದು ಅವಶ್ಯಕವಾಗಿದೆ. ಗೋದಾವರಿ ನದಿಗೆ ಸೇರುವ ಕೊಳಚೆ ನೀರನ್ನು ಬೇರ್ಪಡಿಸಲು ಆದ್ಯತೆಯ ಮೇರೆಗೆ ಕ್ರಮ ಕೈಗೊಳ್ಳಬೇಕು, ಎಂದು ಅವರು ನಿರ್ದೇಶಿಸಿದರು.

2. ಶಾಲಾ ಶಿಕ್ಷಣ ಸಚಿವ ದಾದಾ ಭುಸೆ ಅವರು, ನಾಸಿಕನಲ್ಲಿ ಹೊಸ ಆಸ್ಪತ್ರೆಯನ್ನು ನಿರ್ಮಿಸುವ ಅವಶ್ಯಕತೆಯಿದೆ. ನಿರ್ಮಿಸಲಾಗುತ್ತಿರುವ ಸೌಲಭ್ಯಗಳನ್ನು ಭವಿಷ್ಯದಲ್ಲಿಯೂ ಉಪಯುಕ್ತ ವಾಗುವಂತಿರಬೇಕು. ಈ ನಿಮಿತ್ತ ನಾಸಿಕ ಜಿಲ್ಲೆಯ ಇತರ ತೀರ್ಥಕ್ಷೇತ್ರಗಳೂ ಅಭಿವೃದ್ಧಿಯಾಗಬೇಕು ಎಂದರು.

3. ಕ್ರೀಡೆ ಮತ್ತು ಯುವ ಕಲ್ಯಾಣ ಸಚಿವ ನ್ಯಾಯವಾದಿ ಮಾಣಿಕರಾವ್ ಕೋಕಾಟೆ ಅವರು, ‘ದ್ವಾರಕಾದಿಂದ ನಾಸಿಕ ರಸ್ತೆವರೆಗಿನ ಮೇಲ್ಸೇತುವೆಯ ಬಗ್ಗೆ ಆಡಳಿತವು ತಕ್ಷಣ ಕೆಲಸ ಪ್ರಾರಂಭಿಸಬೇಕು; ಆದರೆ ಸಾರ್ವಜನಿಕರಿಗೆ ತೊಂದರೆಯಾಗದಂತೆ ಎಚ್ಚರಿಕೆ ವಹಿಸಬೇಕು, ಎಂದು ತಿಳಿಸಿದರು.”

4. ಕೈಗಾರಿಕಾ ಸಚಿವ ಉದಯ ಸಾಮಂತ ಅವರು, ಡಿಸೆಂಬರನಲ್ಲಿ ನಾಸಿಕನಲ್ಲಿ ನಡೆಯಲಿರುವ ‘ವಿಶ್ವ ಮರಾಠಿ ಸಾಹಿತ್ಯ ಸಮ್ಮೇಳನ’ದ ಸಂದರ್ಭದಲ್ಲಿ ನಾಸಿಕ ಕುಂಭಮೇಳದ ಕುರಿತು ‘ಬ್ರ್ಯಾಂಡಿಂಗ್’ (ಪ್ರಚಾರ) ಮಾಡುವಂತೆ ಸಲಹೆ ನೀಡಿದರು.

5. ಪರಿಸರ ಮತ್ತು ಪಶುಸಂಗೋಪನಾ ಸಚಿವೆ ಪಂಕಜಾ ಮುಂಡೆ ಅವರು, ‘ನಾಸಿಕ ಕುಂಭಮೇಳದ ನಿಯೋಜನೆಯನ್ನು 3 ಹಂತಗಳಲ್ಲಿ ಮಾಡಬೇಕು’, ಎಂದು ಈ ಸಂದರ್ಭದಲ್ಲಿ ಸೂಚಿಸಿದರು.

6. ಸಾರಿಗೆ ಸಚಿವ ಪ್ರತಾಪ ಸರನಾಯಕ ಅವರು, ‘ರಾಜ್ಯ ಸರಕಾರದ ವತಿಯಿಂದ ನಿಗಮಕ್ಕೆ 200 ಹೊಸ ಬಸ್ಸುಗಳು ಲಭ್ಯವಾಗಬೇಕು. ಈ ಬಸ್ಸುಗಳು ಕುಂಭಮೇಳದ ನಂತರ ರಾಜ್ಯದಲ್ಲಿ ಉಪಯುಕ್ತವಾಗುತ್ತವೆ’, ಎಂದು ಹೇಳಿದರು.

7. ಕುಂಭಮೇಳ ಪ್ರಾಧಿಕಾರದ ಕುಂಭಮೇಳ ಆಯುಕ್ತ ಶೇಖರ ಸಿಂಗ ಅವರು ನಾಸಿಕ-ತ್ರಯಂಬಕೇಶ್ವರ ಕುಂಭಮೇಳ ಪ್ರಾಧಿಕಾರದ ಹಾಗೂ ಇತರ ಇಲಾಖೆಗಳ ವತಿಯಿಂದ ಕೈಗೊಳ್ಳಲಾಗುತ್ತಿರುವ ಕ್ರಮಗಳ ಕುರಿತು ಪ್ರಸ್ತಾಪಿಸಿದರು.