ನೂತನ ಸಾಗರ ಇತಿಹಾಸ ಸೃಷ್ಟಿಸಲು ಭಾರತ ಸಿದ್ಧ! – ಕೇಂದ್ರ ಗೃಹ ಸಚಿವ ಅಮಿತ್ ಶಾ- Amit Shah Maritime Week

ಕೇಂದ್ರ ಗೃಹ ಸಚಿವ ಅಮಿತ್ ಶಹಾ ಅವರಿಂದ ‘ಇಂಡಿಯಾ ಮ್ಯಾರಿಟೈಮ್ ವೀಕ್ – ೨೦೨೫’ ಉದ್ಘಾಟನೆ

ಮುಂಬಯಿ – ಮುಂಬಯಿ ಭಾರತದ ಕಡಲ ಕ್ಷೇತ್ರದ ಪ್ರಮುಖ ಸ್ಥಾನವಾಗಿದ್ದು, ‘ಇಂಡಿಯಾ ಮ್ಯಾರಿಟೈಮ್ ವೀಕ್ – ೨೦೨೫’ (ಭಾರತೀಯ ಕಡಲ ಸಪ್ತಾಹ – ೨೦೨೫) ನಿಮಿತ್ತ ಭಾರತವು ನೂತನ ಸಾಗರ ಇತಿಹಾಸ ಸೃಷ್ಟಿಸಲು ಸಿದ್ಧವಾಗಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಹಾ ಹೇಳಿದ್ದಾರೆ. ನೆಸ್ಕೊ, ಗೋರೆಗಾವದಲ್ಲಿ ಆಯೋಜಿಸಲಾಗಿದ್ದ ‘ಇಂಡಿಯಾ ಮ್ಯಾರಿಟೈಮ್ ವೀಕ್ – ೨೦೨೫’ ಅಂತರರಾಷ್ಟ್ರೀಯ ಕಡಲ ಸಮಾವೇಶವನ್ನು ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಅಮಿತ್ ಶಹಾ ಅವರು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು. ಅವರು ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆಗೆ ಪುಷ್ಪಮಾಲೆ ಅರ್ಪಿಸಿ ಗೌರವ ಸಲ್ಲಿಸಿದರು.

ಉದ್ಘಾಟನಾ ಸಮಾರಂಭದಲ್ಲಿ ಕೇಂದ್ರ ಬಂದರು, ಹಡಗು ಮತ್ತು ಜಲಮಾರ್ಗಗಳ ಸಚಿವ ಸರ್ಬಾನಂದ ಸೋನೋವಾಲ್, ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್, ಗೋವಾ ಮುಖ್ಯಮಂತ್ರಿ ಡಾ. ಪ್ರಮೋದ್ ಸಾವಂತ್, ಒಡಿಶಾ ಮುಖ್ಯಮಂತ್ರಿ ಮೋಹನ್ ಶರಣ್ ಮಾಂಝಿ, ಕೇಂದ್ರ ರಾಜ್ಯ ಸಚಿವ ಶಂತನು ಠಾಕೂರ್, ಉಪ ಮುಖ್ಯಮಂತ್ರಿ ಏಕನಾಥ್ ಶಿಂದೆ, ಉಪ ಮುಖ್ಯಮಂತ್ರಿ ಅಜಿತ್ ಪವಾರ್ ಮತ್ತು ಕೇಂದ್ರ ಕಾರ್ಯದರ್ಶಿ ವಿಜಯ ಕುಮಾರ್ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.

ಅಮಿತ್ ಶಹಾ ಅವರು ಮಾತನಾಡಿ,

೧. ‘ಗೇಟ್‌ವೇ ಆಫ್ ಇಂಡಿಯಾ’ ಈಗ ‘ಗೇಟ್‌ವೇ ಆಫ್ ದಿ ವರ್ಲ್ಡ್’ (ವಿಶ್ವದ ಹೆಬ್ಬಾಗಿಲು) ಕಡೆಗೆ ಸಾಗುತ್ತಿದೆ. ಭಾರತದ ೧೧ ಸಾವಿರ ಕಿಲೋಮೀಟರ್ ಕರಾವಳಿಯು ಜಾಗತಿಕ ಅಭಿವೃದ್ಧಿ ಕೇಂದ್ರವಾಗುತ್ತಿದೆ. ಕಡಲ ಕ್ಷೇತ್ರವು ದೇಶದ ಜಿಡಿಪಿ (ಒಟ್ಟು ದೇಶೀಯ ಉತ್ಪನ್ನ) ಗೆ ಶೇ. ೬೦ಕ್ಕಿಂತ ಹೆಚ್ಚು ಕೊಡುಗೆ ನೀಡುತ್ತದೆ.

೨. ಇಂಡೋ-ಪೆಸಿಫಿಕ್ ವಲಯದಲ್ಲಿ ಭಾರತವು ಮತ್ತೊಮ್ಮೆ ತನ್ನ ಕಡಲ ಸಾಮರ್ಥ್ಯವನ್ನು ಸಾಬೀತುಪಡಿಸುತ್ತಿದೆ. ‘ಸಾಗರ್’, ‘ಸಾಗರಮಾಲಾ’, ‘ಗತಿಶಕ್ತಿ’ ಮತ್ತು ‘ಸಮುದ್ರಯಾನ’ದಂತಹ ಯೋಜನೆಗಳಿಂದ ಕಡಲ ಮೂಲಸೌಕರ್ಯಕ್ಕೆ ಬಲ ಸಿಕ್ಕಿದೆ. ಹಡಗು ನಿರ್ಮಾಣದಲ್ಲಿ ಭಾರತವು ವಿಶ್ವದಲ್ಲಿ ೫ನೇ ಸ್ಥಾನದಲ್ಲಿದೆ ಮತ್ತು ಹೊಸ ಬಂದರುಗಳ ನಿರ್ಮಾಣವೂ ವೇಗವಾಗಿ ನಡೆಯುತ್ತಿದೆ.

೩. ೨೦೪೭ರ ವೇಳೆಗೆ ಜಾಗತಿಕ ಕಡಲ ನಾಯಕತ್ವವನ್ನು ಸಾಧಿಸುವುದು ಭಾರತದ ಗುರಿಯಾಗಿದೆ. ವಧಾವನ್ ಬಂದರು ಶೀಘ್ರದಲ್ಲೇ ವಿಶ್ವದ ಪ್ರಮುಖ ೧೦ ಬಂದರುಗಳಲ್ಲಿ ಒಂದಾಗಲಿದೆ.

ಈ ಸಂದರ್ಭದಲ್ಲಿ, “ಮಹಾರಾಷ್ಟ್ರವು ದೇಶದ ಕಡಲ ಶಕ್ತಿಯ ಕೇಂದ್ರಬಿಂದುವಾಗಿದೆ. ಆದ್ದರಿಂದ, ಈ ಪ್ರಯಾಣದಲ್ಲಿ ಹೂಡಿಕೆದಾರರು ಸಹ ಭಾಗವಹಿಸಬೇಕು” ಎಂದು ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು ಮನವಿ ಮಾಡಿದರು.