೮ ಲಕ್ಷ ರೂಪಾಯಿ ಲಂಚ ಪ್ರಕರಣದಲ್ಲಿ ಪಂಜಾಬ್‌ನ ಪೊಲೀಸ್ ಉಪ ಮಹಾನಿರೀಕ್ಷಕರ ಬಂಧನ

ಒಂದೂವರೆ ಕಿಲೋ ಚಿನ್ನ ಮತ್ತು ೫೦೦ ರೂಪಾಯಿ ನೋಟುಗಳ ಕಟ್ಟು ಮನೆಯಿಂದ ಜಪ್ತಿ !

ಚಂಡೀಗಢ – ಪಂಜಾಬ್ ಪೊಲೀಸರ ಪೊಲೀಸ್ ಉಪ ಮಹಾನಿರೀಕ್ಷಕ ಹರಚರಣ್ ಸಿಂಗ್ ಭುಲ್ಲರ್ ಅವರನ್ನು ೮ ಲಕ್ಷ ರೂಪಾಯಿ ಲಂಚ ತೆಗೆದುಕೊಂಡ ಆರೋಪದ ಮೇಲೆ ಸಿಬಿಐ ಬಂಧಿಸಿದೆ. ಸಿಬಿಐ ತಂಡವು ಚಂಡೀಗಢದ ಸೆಕ್ಟರ್ ೪೦ ರಲ್ಲಿರುವ ಭುಲ್ಲರ್ ಅವರ ಮನೆಯ ಮೇಲೆ ದಾಳಿ ನಡೆಸಿ ನಗದು ಮತ್ತು ಆಭರಣಗಳನ್ನು ವಶಪಡಿಸಿಕೊಂಡಿದೆ.

೫೦೦ ರೂಪಾಯಿ ನೋಟುಗಳ ಎಷ್ಟೊಂದು ಕಟ್ಟುಗಳು ಸಿಕ್ಕಿವೆ ಎಂದರೆ, ಅವುಗಳನ್ನು ಇಡಲು ಟೇಬಲ್ ತುಂಬಾ ಚಿಕ್ಕದಾಗಿತ್ತು. ನಂತರ ನೆಲದ ಮೇಲೆ ಚಾಪೆ ಹಾಕಿ ನೋಟುಗಳನ್ನು ಎಣಿಸಲಾಯಿತು. ನೋಟುಗಳನ್ನು ಎಣಿಸುವುದಕ್ಕಾಗಿ ೩ ಯಂತ್ರಗಳನ್ನು ತರಲಾಯಿತು. ಮನೆಯಿಂದ ಸುಮಾರು ಒಂದೂವರೆ ಕಿಲೋ ಚಿನ್ನವನ್ನೂ ಜಪ್ತಿ ಮಾಡಲಾಗಿದೆ. ಇದರೊಂದಿಗೆ, ಮನೆಯಿಂದ ೨೨ ಐಷಾರಾಮಿ ಕೈಗಡಿಯಾರಗಳು, ೪೦ ಲೀಟರ್ ವಿದೇಶಿ ಮದ್ಯ, ‘ಮರ್ಸಿಡಿಸ್’ ಮತ್ತು ‘ಆಡಿ’ ಕಾರುಗಳು, ಹಾಗೂ ಬ್ಯಾಂಕ್‌ಗಳ ಲಾಕರ್ ಕೀಲಿಗಳನ್ನೂ ಸಹ ವಶಪಡಿಸಿಕೊಳ್ಳಲಾಗಿದೆ.

ಸಂಪಾದಕೀಯ ನಿಲುವು

ಇಂತಹವರ ಸಂಪೂರ್ಣ ಆಸ್ತಿಯನ್ನು ಜಪ್ತಿ ಮಾಡಿ ಅವರಿಗೆ ಗಲ್ಲು ಶಿಕ್ಷೆ ಆಗುವಂತೆ ಪ್ರಯತ್ನ ಮಾಡಬೇಕು, ಆಗ ಮಾತ್ರ ಸಮಾಜದಲ್ಲಿ ಲಂಚ ತೆಗೆದುಕೊಳ್ಳುವವರಿಗೆ ಭಯ ನಿರ್ಮಾಣವಾಗುತ್ತದೆ!