ಆಂಧ್ರಪ್ರದೇಶ: ‘ಲೂಲು ಗ್ರೂಪ್’ಗೆ ಸರಕಾರದಿಂದ ಭೂಮಿ; ಸಚಿವ ಸಂಪುಟದ ಸಭೆಯಲ್ಲಿ ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ ಆಕ್ರೋಶ

ಅಮರಾವತಿ (ಆಂಧ್ರಪ್ರದೇಶ) – ಆಂಧ್ರಪ್ರದೇಶದ ಮೈತ್ರಿ ಸರಕಾರದ ಜನಸೇನಾ ಪಕ್ಷದ ಮುಖ್ಯಸ್ಥರು ಹಾಗೂ ರಾಜ್ಯದ ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ ಅವರು, ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಅವರ ಅಧ್ಯಕ್ಷತೆಯಲ್ಲಿ ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಅಸಮಾಧಾನ ವ್ಯಕ್ತಪಡಿಸಿದರು. ಲೂಲು ಗ್ರೂಪ್ ಅನ್ನು ಸಂತುಷ್ಟಗೊಳಿಸಲು ಸರಕಾರಿ ನಿಯಮಗಳನ್ನು ಬದಲಿಸಿದ ಬಗ್ಗೆ ಪವನ್ ಕಲ್ಯಾಣ್ ಪ್ರಶ್ನಿಸಿದರು. ಜನಸೇನಾ ಸಚಿವ ನಾದೆಂಡ್ಲಾ ಮನೋಹರ್ ಅವರು ಕೂಡ ಈ ಬದಲಾವಣೆ ಕುರಿತು ಅಧಿಕಾರಿಗಳಿಂದ ಸ್ಪಷ್ಟೀಕರಣ ಕೇಳಿದರು.

ಲೂಲು ಗ್ರೂಪ್ ಆಹಾರ ಸಂಸ್ಕರಣೆ ಮಾಡಲಿದೆಯೇ ಅಥವಾ ಗೋಹತ್ಯೆ ಮಾಡುವ ಪಶು ಕಸಾಯಿಖಾನೆಯನ್ನು ನಿರ್ಮಿಸಲಿದೆಯೇ? – ಪವನ್ ಕಲ್ಯಾಣ್ ಪ್ರಶ್ನೆ

ಪವನ್ ಕಲ್ಯಾಣ್ ಅವರು, ‘ಲೂಲು ಸಮೂಹದ ಉಪ ಸಂಸ್ಥೆ ‘ಫೇರ್ ಎಕ್ಸ್‌ಪೋರ್ಟ್ಸ್’ ಮಲ್ಲವಲ್ಲಿ (ಕೃಷ್ಣಾ ಜಿಲ್ಲೆ) ಯಲ್ಲಿ ನಿರ್ಮಿಸುತ್ತಿರುವ ‘ಫುಡ್ ಪಾರ್ಕ್’ನಲ್ಲಿ ನಿಖರವಾಗಿ ಏನು ಮಾಡಲಿದೆ?’ ಎಂದು ಪ್ರಶ್ನಿಸಿದರು. ಸರಕಾರವು ಈ ಯೋಜನೆಗೆ ೭.೪೮ ಎಕರೆ ಭೂಮಿಯನ್ನು ನೀಡಿದೆ. ಅಧಿಕಾರಿಗಳು ‘ಆಹಾರ ಸಂಸ್ಕರಣೆ’ ಎಂಬ ಅಸ್ಪಷ್ಟ ಉತ್ತರ ನೀಡಿದಾಗ, ಪವನ್ ಕಲ್ಯಾಣ್ ಅವರು, ‘ಅದರ ಅರ್ಥವೇನು? ತರಕಾರಿ-ಹಣ್ಣುಗಳನ್ನು ಸಂಸ್ಕರಿಸುವುದೇ ಅಥವಾ ಗೋಹತ್ಯೆ ಮಾಡಿ ಮಾಂಸ ರಫ್ತು ಮಾಡುವುದೇ?’ ಎಂದು ಕೇಳಿದರು.

ಈ ಪ್ರಶ್ನೆಯಿಂದ ಸಚಿವ ಸಂಪುಟದಲ್ಲಿ ವಾತಾವರಣ ಇನ್ನಷ್ಟು ಬಿಗಡಾಯಿಸಿತು.

ಗೋಹತ್ಯೆಗೆ ಅನುಮತಿ ಇಲ್ಲ! – ಮುಖ್ಯಮಂತ್ರಿ ನಾಯ್ಡು

ಮುಖ್ಯಮಂತ್ರಿ ನಾಯ್ಡು ಅವರು ಮಧ್ಯಪ್ರವೇಶಿಸಿ, ಗೋಹತ್ಯೆಗೆ ಯಾವುದೇ ಅನುಮತಿ ನೀಡಿಲ್ಲ. ಕೇವಲ ಆಹಾರ ಸಂಸ್ಕರಣಾ ಕೇಂದ್ರಕ್ಕೆ ಮಾತ್ರ ಅನುಮೋದನೆ ನೀಡಲಾಗಿದೆ ಎಂದು ಸ್ಪಷ್ಟಪಡಿಸಿದರು.

ಆದರೂ ಪವನ್ ಕಲ್ಯಾಣ್ ಅವರು ಸರಕಾರದ ನಿಲುವಿನ ಬಗ್ಗೆ ಪ್ರಶ್ನೆಗಳನ್ನು ಎತ್ತಿ, ಲೂಲು ನಮ್ಮ ಮೇಲೆ ಉಪಕಾರ ಮಾಡುತ್ತಿದೆಯೇನೋ ಎಂಬಂತೆ ಸರಕಾರ ಏಕೆ ಇಷ್ಟು ಆತುರಗೊಂಡಿದೆ? ಎಂದು ಕೇಳಿದರು.

ಆಂಧ್ರಪ್ರದೇಶದ ಯುವಕರಿಗೆ ಉದ್ಯೋಗ ಸಿಗದಿದ್ದರೆ ಭೂಮಿ ಕೊಟ್ಟು ಪ್ರಯೋಜನವೇನು? ಪ್ರತಿಫಲ ಸಿಗದೆ ನಮ್ಮ ಆಸ್ತಿಯನ್ನು ನೀಡಬಾರದು.

ಗುತ್ತಿಗೆ ಮತ್ತು ಉದ್ಯೋಗದ ಷರತ್ತುಗಳ ಬಗ್ಗೆ ಅನುಮಾನ

ಸಚಿವ ಮನೋಹರ್ ಅವರು, ಸರಕಾರವು ಪ್ರತಿ ೫ ವರ್ಷಗಳಿಗೊಮ್ಮೆ ಕೇವಲ ೫% ರಷ್ಟು ಮಾತ್ರ ಗುತ್ತಿಗೆ (ಲೀಸ್) ಮೊತ್ತವನ್ನು ಹೆಚ್ಚಿಸಲು ಒಪ್ಪಿಕೊಂಡಿದೆ, ಆದರೆ ನಿಯಮಗಳ ಪ್ರಕಾರ ಅದನ್ನು ೩ ವರ್ಷಗಳಿಗೊಮ್ಮೆ ೧೦% ರಷ್ಟು ಹೆಚ್ಚಿಸಬೇಕು ಎಂದು ಗಮನಸೆಳೆದರು. ಇದಕ್ಕೆ ಅಧಿಕಾರಿಗಳು, ‘ಲೂಲು ಉದ್ಯೋಗ ಸೃಷ್ಟಿಸಲಿದೆ ಎಂದು ರಿಯಾಯಿತಿ ನೀಡಲಾಗಿದೆ’ ಎಂದರು. ಇದಕ್ಕೆ ಪವನ್ ಕಲ್ಯಾಣ್ ಅವರು, ವಿಜಯವಾಡ ಮತ್ತು ವಿಶಾಖಪಟ್ಟಣಮ್‌ನಲ್ಲಿ ಲೂಲುಗೆ ಯಾವ ಷರತ್ತುಗಳ ಮೇಲೆ ಭೂಮಿ ನೀಡಲಾಗಿದೆ? ಸರಕಾರಿ ಭೂಮಿ ಪಡೆದರೂ ಅವರು ಷರತ್ತುಗಳನ್ನು ನಿರ್ಧರಿಸುವುದು ಸರಿಯೇ? ಲೂಲು ಮಾಲ್‌ನಲ್ಲಿನ ಅಂಗಡಿಗಳು ೩ ವರ್ಷಗಳ ನಂತರ ಬಾಡಿಗೆ ಹೆಚ್ಚಿಸುತ್ತವೆ; ಹಾಗಾದರೆ ಸರಕಾರ ೧೦ ವರ್ಷ ಕಾಯಬೇಕೇ? ಎರಡು ವಿಭಿನ್ನ ನಿಯಮಗಳು ಇರಬಾರದು ಎಂದು ಪ್ರಶ್ನಿಸಿದರು.

ಲೂಲು ಗ್ರೂಪ್ ಎಂದರೇನು?

ಯೂಸುಫ್ ಅಲಿ ಅವರು ಲೂಲು ಗ್ರೂಪ್ ಇಂಟರ್‌ನ್ಯಾಶನಲ್ ಅನ್ನು ಸ್ಥಾಪಿಸಿದರು ಮತ್ತು ಅವರು ಈ ಸಮೂಹವನ್ನು ಮುನ್ನಡೆಸುತ್ತಿದ್ದಾರೆ. ಲೂಲು ಗ್ರೂಪ್ ಜಗತ್ತಿನಾದ್ಯಂತ ಹೈಪರ್‌ಮಾರ್ಕೆಟ್‌ಗಳು, ಮಾಲ್‌ಗಳು (ವಾಣಿಜ್ಯ ಸಂಕೀರ್ಣಗಳು) ಮತ್ತು ರಿಟೇಲ್ ವ್ಯಾಪಾರವನ್ನು ನಡೆಸುತ್ತದೆ.