ಭಾರತೀಯ ವಾಯುಸೇನೆ 97 ಹೊಸ ತೇಜಸ್ ವಿಮಾನಗಳನ್ನು ಖರೀದಿಸಲಿದೆ ! – IAF Orders Tejas Fighter Aircraft

‘ಹಿಂದೂಸ್ತಾನ್ ಏರೋನಾಟಿಕಲ್ಸ್ ಲಿಮಿಟೆಡ್’ ಜೊತೆ 66 ಸಾವಿರ ಕೋಟಿ ರೂಪಾಯಿಗಳ ಒಪ್ಪಂದ

ನವದೆಹಲಿ – ಭಾರತೀಯ ವಾಯುಸೇನೆಯು ‘ಹಿಂದೂಸ್ತಾನ್ ಏರೋನಾಟಿಕಲ್ಸ್ ಲಿಮಿಟೆಡ್’ (ಎಚ್.ಎ.ಎಲ್.) ಸಂಸ್ಥೆಯಿಂದ 97 ‘ತೇಜಸ್ ಮಾರ್ಕ್-1ಎ’ ಯುದ್ಧ ವಿಮಾನಗಳನ್ನು ಖರೀದಿಸುವ ಒಪ್ಪಂದ ಮಾಡಿಕೊಂಡಿದೆ. ಈ ಒಪ್ಪಂದವು 66 ಸಾವಿರದ 500 ಕೋಟಿ ರೂಪಾಯಿಗಳಾಗಿದ್ದು, ಇದು ವಾಯುಸೇನೆಯು ಇಲ್ಲಿಯವರೆಗೂ ಮಾಡಿಕೊಂಡಿರುವ ಅತ್ಯಂತ ದೊಡ್ಡ ವ್ಯವಹಾರವಾಗಿದೆ.

1. ವಾಯುಸೇನೆಯ ಬಳಿ ಇರುವ 36 ಹಳೆಯ ‘ಮಿಗ್ 21’ ವಿಮಾನಗಳು ಸೇವೆಯಿಂದ ನಿವೃತ್ತಿಯಾಗುತ್ತಿವೆ. ಆದ್ದರಿಂದ, ಯುದ್ಧ ವಿಮಾನಗಳ ಕೊರತೆಯನ್ನು ನೀಗಿಸಲು ಈ ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದು ಹೇಳಲಾಗಿದೆ. ಏರ್ ಮಾರ್ಷಲ್ ಎ.ಪಿ. ಸಿಂಗ್ ಇವರು ಇತ್ತೀಚೆಗೆ ‘ಭಾರತೀಯ ವಾಯುಸೇನೆಯು ಯುದ್ಧ ವಿಮಾನಗಳ ವಿಷಯದಲ್ಲಿ ದುರ್ಬಲ ಸ್ಥಿತಿಯಲ್ಲಿದೆ. ವಾಯುಸೇನೆಗೆ ಪ್ರತಿ ವರ್ಷ 40 ಹೊಸ ಯುದ್ಧ ವಿಮಾನಗಳ ಅವಶ್ಯಕತೆಯಿದೆ’, ಎಂದು ಹೇಳಿದ್ದರು.

2. ಪ್ರಸ್ತುತ ಭಾರತದ ಬಳಿ ಕೇವಲ 29 ‘ಫೈಟರ್ ಸ್ಕ್ವಾಡ್ರನ್ಸ್’ (17 ರಿಂದ 18 ಯುದ್ಧ ವಿಮಾನಗಳ ಒಂದು ತಂಡ, ಈ ಪ್ರಕಾರ 29 ತಂಡಗಳು) ಇವೆ. ಚೀನಾ ಅಥವಾ ಪಾಕಿಸ್ತಾನದ ಯಾವುದೇ ರೀತಿಯ ಅಪಾಯ ಉಂಟಾದರೆ, ಭಾರತಕ್ಕೆ 42 ‘ಸ್ಕ್ವಾಡ್ರನ್ಸ್’ಗಳು ಕೂಡ ಸಾಕಾಗುವುದಿಲ್ಲ. ಆದ್ದರಿಂದ ಹೆಚ್ಚು ಯುದ್ಧ ವಿಮಾನಗಳನ್ನು ಪಡೆಯಬೇಕು ಎಂದು ವಾಯುಸೇನೆಯು ನಿರಂತರವಾಗಿ ಬೇಡಿಕೆ ಇಡುತ್ತಿದೆ. ಈ ಬೇಡಿಕೆಯು ಈಗ ಕೆಲವು ಹಂತಗಳಲ್ಲಿ ಪೂರ್ಣಗೊಳ್ಳಲಿದೆ.

3. ಇದಕ್ಕೂ ಮೊದಲು ಫೆಬ್ರವರಿ 2021ರಲ್ಲಿ 46 ಸಾವಿರ 989 ಕೋಟಿ ರೂಪಾಯಿಗಳಲ್ಲಿ 83 ‘ತೇಜಸ್ ಮಾರ್ಕ್-1ಎ’ ವಿಮಾನಗಳನ್ನು ಖರೀದಿಸುವ ವ್ಯವಹಾರ ನಡೆದಿತ್ತು. ಅದರ ಪ್ರಕಾರ ಫೆಬ್ರವರಿ 2024 ರಿಂದ ಫೆಬ್ರವರಿ 2028ರ ಅವಧಿಯಲ್ಲಿ ಎಚ್.ಎ.ಎಲ್. ನಿಂದ ವಾಯುಸೇನೆಗೆ ವಿಮಾನಗಳನ್ನು ನೀಡಲಾಗುವುದು. ‘ಈ ವರ್ಷದ ಅಕ್ಟೋಬರ್ ತಿಂಗಳವರೆಗೆ ಭಾರತೀಯ ವಾಯುಸೇನೆಗೆ 2 ತೇಜಸ್ ವಿಮಾನಗಳನ್ನು ಹಸ್ತಾಂತರಿಸಲಾಗುವುದು’, ಎಂದು ಎಚ್.ಎ.ಎಲ್. ಹೇಳಿದೆ.