ಸನಾತನ ಸಂಸ್ಥೆಯ ನಿರಪರಾಧಿತನ ಮತ್ತೆ ಸಾಬೀತು; ‘ಹಿಂದೂ ಭಯೋತ್ಪಾದನೆ’ಯ ಪಿತೂರಿ ಬಯಲು – ಅಭಯ ವರ್ತಕ, ವಕ್ತಾರರು, ಸನಾತನ ಸಂಸ್ಥೆ

ಸನಾತನ ಸಂಸ್ಥೆಯ ಮೇಲಿನ ನಿಷೇಧದ ಅರ್ಜಿಯನ್ನು ಅರ್ಜಿದಾರರು ಹಿಂಪಡೆದುಕೊಂಡ ಪ್ರಕರಣ

ಮುಂಬಯಿ – ಸನಾತನ ಸಂಸ್ಥೆಯನ್ನು ‘ಭಯೋತ್ಪಾದಕ ಸಂಘಟನೆ’ ಎಂದು ನಿರ್ಧರಿಸಿ, ಅದರ ಮೇಲೆ ನಿಷೇಧ ಹೇರಲು 2011ರಲ್ಲಿ ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಕೊನೆಗೂ ಅರ್ಜಿದಾರರು ವಾಪಸ್ಸು ಪಡೆಯುವ ಹೀನಾಯ ಸ್ಥಿತಿಗೆ ತಲುಪಿದ್ದಾರೆ. 14 ವರ್ಷಗಳ ಈ ಕಾನೂನು ಹೋರಾಟದಲ್ಲಿ, ಅರ್ಜಿದಾರರು ಸಂಸ್ಥೆಯ ವಿರುದ್ಧ ಭಯೋತ್ಪಾದನೆಯ ಯಾವುದೇ ಪುರಾವೆಗಳನ್ನು ನೀಡಲು ಸಾಧ್ಯವಾಗಲಿಲ್ಲ. ‘ಅರ್ಜಿಯನ್ನು ವಿಚಾರಣೆ ಮಾಡಲು ಯಾವುದೇ ಆಧಾರವಿಲ್ಲ. ನೀವು ಅರ್ಜಿಯನ್ನು ವಾಪಸ್ಸು ಪಡೆಯುತ್ತೀರಾ ಅಥವಾ ನಾವು ಅದನ್ನು ತಿರಸ್ಕರಿಸಬೇಕೆ?’ ಎಂದು ಮುಂಬಯಿ ಉಚ್ಚ ನ್ಯಾಯಾಲಯ ಕಟುವಾಗಿ ಪ್ರಶ್ನಿಸಿದ ನಂತರ ಅರ್ಜಿದಾರರು ಯಾವುದೇ ಷರತ್ತಿಲ್ಲದೆ ಅರ್ಜಿಯನ್ನು ವಾಪಸ್ಸು ಪಡೆದುಕೊಂಡರು. ಇದು ಸನಾತನ ಸಂಸ್ಥೆಯ ಗೆಲುವು ಮಾತ್ರವಲ್ಲ, ಸತ್ಯ, ನ್ಯಾಯ ಮತ್ತು ಧರ್ಮನಿಷ್ಠೆಯ ಗೆಲುವಾಗಿದೆ. ನಮಗೆ ನ್ಯಾಯದೇವತೆಯ ಮೇಲೆ ನಂಬಿಕೆ ಇತ್ತು, ಅದು ಇಂದು ಮತ್ತೊಮ್ಮೆ ಸಾಬೀತಾಗಿದೆ. ಸರ್ವಶಕ್ತ ಪರಮಾತ್ಮ, ನ್ಯಾಯದೇವತೆ, ನಮ್ಮ ಗುರುಗಳು (ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ) ಮತ್ತು ಈ ಪ್ರಕರಣದಲ್ಲಿ ನಮ್ಮ ಪರವಾಗಿ ಹೋರಾಡಿದ ನ್ಯಾಯವಾದಿಗಳಿಗೆ ನಾವು ಕೃತಜ್ಞರಾಗಿದ್ದೇವೆ, ಎಂದು ಸನಾತನ ಸಂಸ್ಥೆಯ ವಕ್ತಾರರಾದ ಶ್ರೀ. ಅಭಯ ವರ್ತಕ ಅವರು ಈ ತೀರ್ಪಿನ ನಂತರ ಪ್ರತಿಕ್ರಿಯಿಸಿದ್ದಾರೆ.

ಸನಾತನ ಸಂಸ್ಥೆಯ ಪರವಾಗಿ ಹಿಂದೂ ವಿಧಿಜ್ಞ ಪರಿಷತ್ತಿನ ಅಧ್ಯಕ್ಷ ನ್ಯಾಯವಾದಿ ವೀರೇಂದ್ರ ಇಚಲಕರಂಜಿ, ಕಾರ್ಯದರ್ಶಿ ನ್ಯಾಯವಾದಿ ಸಂಜೀವ ಪುನಾಳೇಕರ, ಹಾಗೆಯೇ ಹಿರಿಯ ನ್ಯಾಯವಾದಿ ಸುಭಾಷ ಝಾ, ನ್ಯಾಯವಾದಿ ಅಲೌಕಿಕ ಪೈ ಮತ್ತು ನ್ಯಾಯವಾದಿ ವಸಂತ ಬನಸೋಡೆ ಅವರು ವಾದ ಮಂಡಿಸಿದರು.

ಸುಳ್ಳು ಆರೋಪಗಳ ಮೂಲಕ ನಿಷೇಧದ ಪ್ರಯತ್ನವನ್ನು ನ್ಯಾಯಾಲಯವು ವಿಫಲಗೊಳಿಸಿದೆ!

‘ಕಳೆದ ಒಂದೂವರೆ ದಶಕದಿಂದ ಕಾಂಗ್ರೆಸ್, ರಾಷ್ಟ್ರೀಯವಾದಿ ಕಾಂಗ್ರೆಸ್ ಮತ್ತು ಕಮ್ಯುನಿಸ್ಟ್ ಸಿದ್ಧಾಂತದ ‘ಇಕೋಸಿಸ್ಟಮ್’ (ವ್ಯವಸ್ಥೆ) ಸನಾತನ ಸಂಸ್ಥೆಯನ್ನು ಗುರಿಯಾಗಿಸಿ ‘ಕೇಸರಿ ಭಯೋತ್ಪಾದನೆ’ ಎಂಬ ಸುಳ್ಳು ಕಥೆಯನ್ನು ಸೃಷ್ಟಿಸಿದೆ. 2008 ರಿಂದ 2025ರ ಅವಧಿಯಲ್ಲಿ ಸನಾತನ ಸಂಸ್ಥೆಗೆ ಉಂಟಾದ ಅಪಾರ ನಷ್ಟ ಮತ್ತು ಸಾವಿರಾರು ಅಮಾಯಕ ಸಾಧಕರು ಅನುಭವಿಸಿದ ಅಗಾಧ ಮಾನಸಿಕ ನೋವಿಗೆ ಯಾರು ಪರಿಹಾರ ನೀಡುತ್ತಾರೆ? ಈ ಸಂಪೂರ್ಣ ಕಾಲಾವಧಿಯಲ್ಲಿ ಸನಾತನ ಸಂಸ್ಥೆಯು ಭಾರತೀಯ ನ್ಯಾಯ ವ್ಯವಸ್ಥೆಯಲ್ಲಿ ಸಂಪೂರ್ಣ ವಿಶ್ವಾಸವಿಟ್ಟು, ಎಲ್ಲಾ ತನಿಖಾ ಸಂಸ್ಥೆಗಳಿಗೆ ಸಹನೆಯಿಂದ ಸಹಕರಿಸಿದೆ. ದೇಶದ ಅತಿದೊಡ್ಡ ರಾಷ್ಟ್ರೀಯವಾದಿ ಸಂಘಟನೆಯಾದ ರಾಷ್ಟ್ರೀಯ ಸ್ವಯಂಸೇವಕ ಸಂಘದ ಮೇಲೆ ಸುಳ್ಳು ಆರೋಪಗಳನ್ನು ಮಾಡಿ ನಿಷೇಧ ಹೇರಲು ಹೇಗೆ ಪ್ರಯತ್ನಿಸಲಾಯಿತೋ, ಅದೇ ಇತಿಹಾಸವನ್ನು ಪುನರಾವರ್ತಿಸುವ ಪ್ರಯತ್ನ ಇದಾಗಿತ್ತು, ಅದನ್ನು ನ್ಯಾಯದೇವತೆಯು ವಿಫಲಗೊಳಿಸಿದ್ದಾಳೆ’ ಎಂದು ವರ್ತಕ ಹೇಳಿದರು.

‘ಸನಾತನ ಸಂಸ್ಥೆಯನ್ನು ಭಯೋತ್ಪಾದಕ ಎಂದು ಘೋಷಿಸಿ ಅದರ ಮೇಲೆ ನಿಷೇಧ ಹೇರಬೇಕು’ ಎಂದು ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷವು ಮೊದಲ ಬಾರಿಗೆ 2008ರಲ್ಲಿ ಬೇಡಿಕೆ ಇಟ್ಟಿತ್ತು. ನಂತರ ಕಾಂಗ್ರೆಸ್ ‘ಹಿಂದೂ ಭಯೋತ್ಪಾದನೆ’ ಎಂಬ ಪದವನ್ನು ಪ್ರಚಲಿತಗೊಳಿಸಲು ಶ್ರಮಿಸಿತು; ಆದರೆ ಪ್ರತಿ ಬಾರಿಯೂ ಸನಾತನ ಸಂಸ್ಥೆ ನಿರಪರಾಧಿ ಎಂದು ಸಾಬೀತಾಯಿತು. 2008ರ ಗಡಕರಿ ರಂಗಾಯಣದ ಸ್ಫೋಟ ಪ್ರಕರಣದಲ್ಲಿ ಸನಾತನವನ್ನು ಮೊದಲು ಸಿಲುಕಿಸಲಾಯಿತು; ಆದರೆ ನ್ಯಾಯಾಲಯದಲ್ಲಿ ಸನಾತನ ಸಂಸ್ಥೆ ನಿರಪರಾಧಿ ಎಂದು ಸಾಬೀತಾಯಿತು. ಮುಂದೆ 2009ರಲ್ಲಿ ಗೋವಾದ ಮಡಗಾಂವ್ ಬಾಂಬ್ ಸ್ಫೋಟ ಪ್ರಕರಣದಲ್ಲೂ ಕಾಂಗ್ರೆಸ್ ಸರಕಾರ ಸನಾತನವನ್ನು ಸಿಲುಕಿಸಿತು. ಈ ಪ್ರಕರಣದಲ್ಲೂ ವಿಶೇಷ ಸೆಷನ್ಸ್ ನ್ಯಾಯಾಲಯವು 2013ರಲ್ಲಿ ಸನಾತನದ ನಿರಪರಾಧಿತ್ವವನ್ನು ಸಾಬೀತುಪಡಿಸಿ ತನಿಖಾ ಸಂಸ್ಥೆಗಳನ್ನು ತರಾಟೆಗೆ ತೆಗೆದುಕೊಂಡಿತು. 2013ರಲ್ಲಿ ಡಾ. ದಾಭೋಲ್ಕರ್ ಹತ್ಯೆ ಪ್ರಕರಣದಲ್ಲೂ ಸನಾತನವನ್ನು ಗುರಿಯಾಗಿಸಿ ಸಿಕ್ಕಿಹಾಕಲು ಪ್ರಯತ್ನಿಸಲಾಗಿತ್ತು; ಆದರೆ ಅಲ್ಲೂ ಕೂಡ ವಿಫಲವಾಯಿತು. ಈ ಎಲ್ಲಾ ಮೊಕದ್ದಮೆಗಳು ‘ಹಿಂದೂ ಭಯೋತ್ಪಾದನೆ’ಯನ್ನು ಸಾಬೀತುಪಡಿಸಿ ಸನಾತನ ಸಂಸ್ಥೆಯನ್ನು ಅಂತ್ಯಗೊಳಿಸುವ ದೊಡ್ಡ ಪಿತೂರಿಯ ಭಾಗವಾಗಿತ್ತು.

‘ಈಶ್ವರೀ ಕಾರ್ಯವನ್ನು ಮಾಡುವ ಸಂಘಟನೆಯನ್ನು ಅಂತ್ಯಗೊಳಿಸಲು ಪ್ರಯತ್ನಿಸುವವರಿಗೆ ಕಾಲವೇ (ಈಶ್ವರನೇ) ಸೂಕ್ತ ಉತ್ತರ ನೀಡಿದ್ದಾನೆ. ಈ ಕಷ್ಟದ ಸಮಯದಲ್ಲಿಯೂ ಸನಾತನ ಸಂಸ್ಥೆಯ ರಾಷ್ಟ್ರ, ಧರ್ಮ ಮತ್ತು ಸಮಾಜ ಹಿತದ ಕಾರ್ಯ ನಿರಂತರವಾಗಿ ಹೆಚ್ಚುತ್ತಿದ್ದು, ಇತ್ತೀಚೆಗೆ ಸನಾತನವು ರಜತ ಮಹೋತ್ಸವ ವರ್ಷವನ್ನು ಆಚರಿಸಿದೆ. ನ್ಯಾಯಾಲಯವು ಸನಾತನವನ್ನು ನಿರಪರಾಧಿ ಎಂದು ಬಿಡುಗಡೆ ಮಾಡಿದೆ; ಆದರೆ ಸನಾತನ ಧರ್ಮ ವಿರೋಧಿ ಶಕ್ತಿಗಳ ವಿರುದ್ಧ, ಅಂದರೆ ಈ ‘ಇಕೋಸಿಸ್ಟಮ್’ ವಿರುದ್ಧದ ಹೋರಾಟ ಇನ್ನೂ ಮುಗಿದಿಲ್ಲ. ಈ ಹೋರಾಟವನ್ನು ನಡೆಸಲು ಎಲ್ಲಾ ಹಿಂದೂಗಳು ಸಂಘಟಿತರಾಗುವುದು ಅವಶ್ಯಕವಾಗಿದೆ’ ಎಂದು ಶ್ರೀ. ಅಭಯ ವರ್ತಕ ಹೇಳಿದರು.

ಪುರಾವೆಯಿಲ್ಲದೆ ಸನಾತನ ಸಂಸ್ಥೆಯ 14 ವರ್ಷಗಳ ಮಾನಹಾನಿ, ಇದು ವೈಚಾರಿಕ ಭಯೋತ್ಪಾದನೆ! – ಸಂಜೀವ ಪುನಾಳೇಕರ, ರಾಷ್ಟ್ರೀಯ ಕಾರ್ಯದರ್ಶಿ, ಹಿಂದೂ ವಿಧಿಜ್ಞ ಪರಿಷತ್

ಮುಂಬಯಿ, ಸೆಪ್ಟೆಂಬರ್ 24 (ವಾರ್ತಾ) – ಸನಾತನ ಸಂಸ್ಥೆಯ ಮೇಲೆ ನಿಷೇಧ ಹೇರಬೇಕು ಎಂದು ವಿಜಯ ರೋಕಡೆ ಮತ್ತು ಇತರರು ಮುಂಬಯಿ ಉಚ್ಚ ನ್ಯಾಯಾಲಯದಲ್ಲಿ ಒಂದು ಅರ್ಜಿಯನ್ನು ಸಲ್ಲಿಸಿದ್ದರು. ಈ ಅರ್ಜಿ ವಿಚಾರಣೆಗೆ ಬಂದಾಗ, ಅರ್ಜಿದಾರರು ತಮ್ಮ ನಿಲುವನ್ನು ಬದಲಿಸಿ ಸಂಸ್ಥೆಯ ಮೇಲೆ ಭಯೋತ್ಪಾದನೆಯ ಆರೋಪಗಳನ್ನು ಮಾಡಲು ಪ್ರಾರಂಭಿಸಿದರು. ಮಹಾರಾಷ್ಟ್ರ ಮತ್ತು ಕೇಂದ್ರ ಸರಕಾರಗಳು ‘ಸನಾತನ ಸಂಸ್ಥೆಯು ಭಯೋತ್ಪಾದಕ ಸಂಘಟನೆ ಎಂಬುದಕ್ಕೆ ಯಾವುದೇ ಪುರಾವೆಗಳಿಲ್ಲ. ಹಾಗಾಗಿ ಸನಾತನ ಸಂಸ್ಥೆಯನ್ನು ಭಯೋತ್ಪಾದಕ ಸಂಘಟನೆ ಎಂದು ಘೋಷಿಸಲು ಸಾಧ್ಯವಿಲ್ಲ’ ಎಂದು ಸ್ಪಷ್ಟವಾಗಿ ತಿಳಿಸಿದ್ದವು. ಈ ಅರ್ಜಿಯ ವಿಚಾರಣೆ ನಡೆದಾಗ ನ್ಯಾಯಾಲಯವು ‘ಈ ಅರ್ಜಿಯು ಕಾನೂನಿಗೆ ಅನುಗುಣವಾಗಿಲ್ಲ ಮತ್ತು ಹಾಸ್ಯಾಸ್ಪದವಾಗಿದೆ’ ಎಂದು ಹೇಳಿ ಅರ್ಜಿದಾರರನ್ನು ತರಾಟೆಗೆ ತೆಗೆದುಕೊಂಡಿತು. ಆದರೆ ಕಳೆದ 14 ವರ್ಷಗಳಲ್ಲಿ ಸನಾತನ ಸಂಸ್ಥೆಯ ಮೇಲೆ ಭಯೋತ್ಪಾದಕ ಎಂದು ಆರೋಪಿಸಿ ಮಾನಹಾನಿ ಮಾಡಲಾಗಿದೆ. ಅದರ ಬಗ್ಗೆ ಸುದ್ದಿಗಳು ಪ್ರಕಟವಾಗಿವೆ. ಒಟ್ಟಿನಲ್ಲಿ ಅರ್ಜಿದಾರರು ನ್ಯಾಯಾಲಯದ ಪ್ರಕ್ರಿಯೆಯನ್ನು ದುರುಪಯೋಗಪಡಿಸಿಕೊಂಡಿದ್ದಾರೆ. ರಾಷ್ಟ್ರೀಯ ಸ್ವಯಂಸೇವಕ ಸಂಘ ಅಥವಾ ಸನಾತನ ಸಂಸ್ಥೆಗಳ ಮೇಲಿನ ನಿಷೇಧದಿಂದ ಈ ಸಂಘಟನೆಗಳಿಗೆ ಹಾನಿಯಾಗಿದೆ. ಆದ್ದರಿಂದ ಈ ರೀತಿ ಪುರಾವೆಯಿಲ್ಲದೆ ಅರ್ಜಿ ಸಲ್ಲಿಸುವವರ ಮೇಲೆ ನ್ಯಾಯಾಲಯವು ಕಠಿಣ ಕ್ರಮ ಕೈಗೊಳ್ಳಬೇಕು ಎಂದು ನಮಗೆ ಅನಿಸುತ್ತದೆ, ಎಂದು ಹಿಂದೂ ವಿಧಿಜ್ಞ ಪರಿಷತ್ತಿನ ರಾಷ್ಟ್ರೀಯ ಕಾರ್ಯದರ್ಶಿ ವಕೀಲ ಸಂಜೀವ ಪುನಾಳೇಕರ ಪ್ರತಿಕ್ರಿಯೆ ನೀಡಿದ್ದಾರೆ.

ಸನಾತನ ಸಂಸ್ಥೆಯ ಮೇಲಿನ ನಿಷೇಧ ಅರ್ಜಿಯನ್ನು ತಿರಸ್ಕರಿಸಿದ ಸುದ್ದಿಗಳನ್ನೂ ಅಪಕೀರ್ತಿಯಂತೆಯೇ ಪ್ರಸಾರ ಮಾಡಲಾಗುತ್ತದೆಯೇ? – ಅಡ್ವೊಕೇಟ್ ವೀರೇಂದ್ರ ಇಚಲಕರಂಜೀಕರ್, ರಾಷ್ಟ್ರೀಯ ಅಧ್ಯಕ್ಷರು, ಹಿಂದೂ ವಿಧಿಜ್ಞ ಪರಿಷತ್

ನ್ಯಾಯವಾದಿ ವೀರೇಂದ್ರ ಇಚಲಕರಂಜಿಕರ್

೨೦೧೧ ರಲ್ಲಿ ಸನಾತನ ಸಂಸ್ಥೆಯ ಮೇಲೆ ನಿಷೇಧ ಹೇರಲು ಅರ್ಜಿಯನ್ನು ಸಲ್ಲಿಸಲಾಗಿತ್ತು. ಇದರಲ್ಲಿ ಹಾಸ್ಯಾಸ್ಪದ ಸಂಗತಿ ಏನೆಂದರೆ, ಸನಾತನ ಸಂಸ್ಥೆಯ ಆಶ್ರಮದಲ್ಲಿ ಸಮ್ಮೋಹನ ಮಾಡಿ ಇಡಲಾಗುತ್ತದೆ ಎಂಬ ಕಾರಣಕ್ಕಾಗಿ ನಿಷೇಧದ ಬೇಡಿಕೆ ಇಡಲಾಗಿತ್ತು. ಸಮ್ಮೋಹನದ ಮೂಲಕ ಹೀಗೆ ಮಾಡಲು ಸಾಧ್ಯವಾಗಿದ್ದರೆ, ಸಿಮಿಯಂತಹ ಭಯೋತ್ಪಾದಕ ಸಂಘಟನೆಗಳು ಲಕ್ಷಾಂತರ ಸಂಖ್ಯೆಯಲ್ಲಿ ಭಯೋತ್ಪಾದಕರನ್ನು ಸೃಷ್ಟಿಸಿರುತ್ತಿದ್ದವು; ಆದರೆ ಅಂತಹದ್ದು ಯಾವುದೂ ಸಾಧ್ಯವಿಲ್ಲ ಮತ್ತು ವಸ್ತುನಿಷ್ಠವೂ ಅಲ್ಲ. ಈ ವಿಚಾರಣೆಯಲ್ಲಿ ಕಳೆದ ಬಾರಿ ನ್ಯಾಯಾಲಯವು, ‘ನೀವು ಇಂತಹ ಅರ್ಜಿಯನ್ನು ಯಾವ ಆಧಾರದ ಮೇಲೆ ಸಲ್ಲಿಸಬಹುದು?’ ಎಂದು ಪ್ರಶ್ನಿಸಿತ್ತು; ಆದರೆ ಅರ್ಜಿದಾರರಿಗೆ ಅದಕ್ಕೆ ಉತ್ತರ ನೀಡಲು ಸಾಧ್ಯವಾಗಲಿಲ್ಲ. ಇದೇ ಅಂಶದ ಮೇಲೆ ನ್ಯಾಯಾಲಯವು ಈ ಅರ್ಜಿಯನ್ನು ಹಿಂಪಡೆಯಲು ಸೂಚಿಸಿತು. ಅರ್ಜಿಯನ್ನು ಹಿಂಪಡೆಯದಿದ್ದರೆ ಅದನ್ನು ವಜಾಗೊಳಿಸುವ ಎಚ್ಚರಿಕೆಯನ್ನು ನ್ಯಾಯಾಲಯ ನೀಡಿತ್ತು; ಆದರೆ ಇದಕ್ಕಾಗಿ ೧೪ ವರ್ಷಗಳು ಕಳೆದವು. ಈ ಅವಧಿಯಲ್ಲಿ ಸನಾತನ ಸಂಸ್ಥೆಯ ಅಪಕೀರ್ತಿ ಮಾಡುವ ಅನೇಕ ಸುದ್ದಿಗಳನ್ನು ಮುದ್ರಿಸಲಾಯಿತು. ಈಗ ನ್ಯಾಯಾಲಯವು ಈ ಅರ್ಜಿಯನ್ನು ತಿರಸ್ಕರಿಸಿದ ನಂತರ, ಈ ಕುರಿತಾದ ಸುದ್ದಿಗಳನ್ನು ಸಹ ಅದೇ ರೀತಿಯಲ್ಲಿ ಪ್ರಕಟಿಸಲಾಗುವುದೇ ಎಂಬುದು ಪ್ರಶ್ನೆಯಾಗಿದೆ. ಪ್ರಜಾಪ್ರಭುತ್ವ, ವೈಚಾರಿಕ ಸ್ವಾತಂತ್ರ್ಯ ಎಂದು ಹೇಳಲಾಗುತ್ತದೆ; ಆದರೆ ಕೆಲವು ಆಯ್ದ ವಿಷಯಗಳನ್ನು ಮಾತ್ರ ತೋರಿಸಲಾಗುತ್ತದೆ ಮತ್ತು ಕೆಲವನ್ನು ಹತ್ತಿಕ್ಕಲಾಗುತ್ತದೆ. ಇದು ವೈಚಾರಿಕ ಭಯೋತ್ಪಾದನೆಯೇ? ಕೆಲವು ವ್ಯಕ್ತಿಗಳು ಅಥವಾ ಸಂಘಟನೆಗಳನ್ನು ಇದರಲ್ಲಿ ಗುರಿಯಾಗಿಸಲಾಗುತ್ತದೆಯೇ?, ಎಂಬ ಪ್ರಶ್ನೆ ನನ್ನ ಮನಸ್ಸಿನಲ್ಲಿದೆ, ಎಂದು ಹೇಳಿದರು.