‘ನಿಮ್ಮ ಹೆರಿಗೆಯನ್ನು ನಾವು ಬೇರೆಕಡೆ ಮಾಡಿಸುತ್ತೇವೆ!’(ಅಂತೆ) : Congress MLA RV Deshpande

ಮಹಿಳಾ ಪತ್ರಕರ್ತೆಯು ‘ಗರ್ಭಿಣಿಯರಿಗಾಗಿ ಆಸ್ಪತ್ರೆಗಳನ್ನು ಯಾವಾಗ ನಿರ್ಮಿಸುತ್ತೀರಿ?’, ಎಂದು ಪ್ರಶ್ನಿಸಿದಾಗ ಕಾಂಗ್ರೆಸ್ ಶಾಸಕರಿಂದ ಆಕ್ಷೇಪಾರ್ಹ ಉತ್ತರ!

ಕಾಂಗ್ರೆಸ್ ಶಾಸಕ ಆರ್.ವಿ. ದೇಶಪಾಂಡೆ

ಬೆಂಗಳೂರು – ಉತ್ತರ ಕನ್ನಡ ಜಿಲ್ಲೆಯ ಜೊಯಿಡಾ ತಾಲೂಕಿನಲ್ಲಿ ನಡೆದ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ, ಮಹಿಳಾ ಪತ್ರಕರ್ತೆಯೊಬ್ಬರು ಕಾಂಗ್ರೆಸ್ ಶಾಸಕ ಆರ್.ವಿ. ದೇಶಪಾಂಡೆ ಅವರನ್ನು, ‘ಈ ಭಾಗದಲ್ಲಿ ನಡೆಯುವ ಅಪಘಾತಗಳು ಮತ್ತು ವಿಶೇಷವಾಗಿ ಗರ್ಭಿಣಿಯರಿಗೆ ಆಗುತ್ತಿರುವ ಅನಾನುಕೂಲತೆಗಳಿಂದಾಗಿ, ಈ ಪ್ರದೇಶದಲ್ಲಿ ಆಸ್ಪತ್ರೆ ಸೌಲಭ್ಯ ಯಾವಾಗ ಲಭ್ಯವಾಗಲಿದೆ?’ ಎಂದು ಪ್ರಶ್ನಿಸಿದರು. ಇದಕ್ಕೆ ಶಾಸಕ ದೇಶಪಾಂಡೆ ನಗುತ್ತಾ ಮತ್ತು ಕಣ್ಣು ಮಿಟುಕಿಸುತ್ತಾ, “ಚಿಂತಿಸಬೇಡಿ, ನಿಮ್ಮ ಹೆರಿಗೆಯನ್ನು ನಾವು ಬೇರೆ ಎಲ್ಲಾದರೂ ಮಾಡಿಸುತ್ತೇವೆ” ಎಂದು ಹೇಳಿದರು. ಮಹಿಳಾ ಪತ್ರಕರ್ತೆ ‘ಏನು ಸರ್?’ ಎಂದು ಕೇಳಿದಾಗ, ಶಾಸಕರು ತಮ್ಮ ಉತ್ತರವನ್ನು ಪುನರಾವರ್ತಿಸಿ, “ನಿಮ್ಮ ಹೆರಿಗೆಯ ಸಮಯ ಬಂದಾಗ ನಾವು ಅದನ್ನು ಪೂರ್ಣಗೊಳಿಸುತ್ತೇವೆ” ಎಂದು ಆಕ್ಷೇಪಾರ್ಹ ಉತ್ತರ ನೀಡಿದರು.

ಉತ್ತರ ಕನ್ನಡ ಜಿಲ್ಲೆಯ ಜನರಿಗೆ ಚಿಕಿತ್ಸೆಗಾಗಿ ಉಡುಪಿ, ಮಂಗಳೂರು ಮತ್ತು ಇತರ ಸ್ಥಳಗಳಿಗೆ ಹೋಗಬೇಕಾಗುತ್ತದೆ. ಈ ಸಮಸ್ಯೆಯನ್ನು ಗಮನದಲ್ಲಿಟ್ಟುಕೊಂಡು ಮಹಿಳಾ ಪತ್ರಕರ್ತೆ ಶಾಸಕರನ್ನು ಪರಿಹಾರದ ಬಗ್ಗೆ ಕೇಳಿದಾಗ ಅವರು ಮೇಲೆ ತಿಳಿಸಿದ ಉತ್ತರ ನೀಡಿದರು. ಶಾಸಕ ದೇಶಪಾಂಡೆ ಅವರ ಹೇಳಿಕೆಗೆ ಸಾಮಾಜಿಕ ಜಾಲತಾಣಗಳಲ್ಲಿ ಮತ್ತು ರಾಜಕೀಯ ವಲಯದಲ್ಲಿ ತೀವ್ರ ಟೀಕೆ ವ್ಯಕ್ತವಾಗಿದೆ. ಜನರು ಅವರ ಹೇಳಿಕೆಯನ್ನು ಅತ್ಯಂತ ಸಂವೇದನಾಹೀನ ಮತ್ತು ಅವಮಾನಕರ ಎಂದು ಹೇಳಿದ್ದಾರೆ. ವಿರೋಧ ಪಕ್ಷಗಳು ಇದು ಮಹಿಳೆಯರಿಗೆ ಮಾಡಿದ ಅವಮಾನ ಮತ್ತು ಕಾಂಗ್ರೆಸ್‌ನ ಕೆಳಮಟ್ಟದ ಮನಸ್ಥಿತಿಯ ಉದಾಹರಣೆ ಎಂದು ಟೀಕಿಸಿವೆ.

ಶಾಸಕ ದೇಶಪಾಂಡೆ ಅವರು ರಾಜ್ಯ ಸರಕಾರದಲ್ಲಿ ಕಂದಾಯ, ಕೈಗಾರಿಕೆ, ಶಿಕ್ಷಣ ಮತ್ತು ಪ್ರವಾಸೋದ್ಯಮ ಸಚಿವರಾಗಿದ್ದರು. ಪ್ರಸ್ತುತ ಅವರು ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷರಾಗಿದ್ದಾರೆ.

ಸಂಪಾದಕೀಯ ನಿಲುವು

  • ‘ಮಹಿಳಾ ಪತ್ರಕರ್ತರೊಂದಿಗೆ ಹೀಗೆ ನಡೆದುಕೊಳ್ಳುವ ಕಾಂಗ್ರೆಸ್ ಶಾಸಕರು ಸಾಮಾನ್ಯ ಮಹಿಳೆಯರೊಂದಿಗೆ ಹೇಗೆ ವರ್ತಿಸುತ್ತಾರೋ?’ ಎಂದು ಯೋಚಿಸದಿರುವುದೇ ಉತ್ತಮ! ಇದರಿಂದ ಕಾಂಗ್ರೆಸ್ಸಿಗರ ನೀಚ ಮನಸ್ಥಿತಿಯನ್ನು ತೋರಿಸುತ್ತದೆ! ಇಂತಹವರ ಶಾಸಕತ್ವವನ್ನು ರದ್ದುಪಡಿಸಿ ಅವರನ್ನು ಜೈಲಿಗೆ ಹಾಕಬೇಕು!
  • ಈ ವಿಷಯದಲ್ಲಿ ಮಹಿಳಾ ಆಯೋಗ ಏಕೆ ಮೌನವಾಗಿದೆ? ಅದು ಕಾಂಗ್ರೆಸ್ ಶಾಸಕರ ವಿರುದ್ಧ ಕ್ರಮ ಕೈಗೊಳ್ಳುವುದೇ?