ಯೋಗಿ ಆದಿತ್ಯನಾಥ್ ಅವರ ಕುರಿತು ತಯಾರಿಸಲಾದ ಚಲನಚಿತ್ರಕ್ಕೆ ‘ಪ್ರದರ್ಶನ’ ಪ್ರಮಾಣಪತ್ರ ನೀಡಲು ಮುಂಬಯಿ ಉಚ್ಚ ನ್ಯಾಯಾಲಯದ ಆದೇಶ!- Film Yogi Adityanath Mumbai High Court

ಪ್ರಮಾಣಪತ್ರ ನೀಡಲು ಕೇಂದ್ರೀಯ ಚಲನಚಿತ್ರ ಪ್ರಮಾಣೀಕರಣ ಮಂಡಳಿಯಿಂದ ಮೀನಾಮೇಷ

ಮುಂಬಯಿ – ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಜೀವನವನ್ನು ಆಧರಿಸಿರುವ  ‘ಅಜೇಯ: ದ ಅನ್‌ಟೋಲ್ಡ್ ಸ್ಟೋರಿ ಆಫ್ ಎ ಯೋಗಿ’ ಎಂಬ ಚಲನಚಿತ್ರಕ್ಕೆ ಪ್ರದರ್ಶನ ಪ್ರಮಾಣಪತ್ರ ನೀಡುತ್ತಿರಲಿಲ್ಲ. ಈ ಪ್ರಕರಣದ ವಿಚಾರಣೆ ನ್ಯಾಯಾಲಯದಲ್ಲಿ ನಡೆದಾಗ, “ನಾವು ಈ ಚಲನಚಿತ್ರವನ್ನು ನೋಡಿದ್ದು, ಅದರಲ್ಲಿ ಯಾವುದೇ ಆಕ್ಷೇಪಾರ್ಹ ವಿಷಯ ಕಂಡುಬಂದಿಲ್ಲ. ಆದ್ದರಿಂದ, ಯಾವುದೇ ಬದಲಾವಣೆಗಳಿಲ್ಲದೆ ಅದನ್ನು ಪ್ರದರ್ಶಿಸಬಹುದು” ಎಂದು ನ್ಯಾಯಪೀಠ ಹೇಳಿದೆ. ಹಾಗೆಯೇ, ಚಲನಚಿತ್ರದ ಕೆಲವು ದೃಶ್ಯಗಳನ್ನು ಕತ್ತರಿಸಲು ಶಿಫಾರಸು ಮಾಡಿದ್ದ ಕೇಂದ್ರೀಯ ಚಲನಚಿತ್ರ ಪ್ರಮಾಣೀಕರಣ ಮಂಡಳಿಯ ಆದೇಶವನ್ನು ನ್ಯಾಯಪೀಠ ರದ್ದುಗೊಳಿಸಿದ್ದು, ಚಲನಚಿತ್ರಕ್ಕೆ ಪ್ರದರ್ಶನ ಪ್ರಮಾಣಪತ್ರ ನೀಡುವಂತೆ ಉಚ್ಚ ನ್ಯಾಯಾಲಯವು ಮಂಡಳಿಗೆ ಆದೇಶಿಸಿದೆ.

1. ಯೋಗಿ ಆದಿತ್ಯನಾಥ್ ಅವರ ಜೀವನವನ್ನು ಆಧರಿಸಿದ ‘ದ ಮಂಕ್ ಹೂ ಬಿಕೇಮ್ ಚೀಫ್ ಮಿನಿಸ್ಟರ್’ ಎಂಬ ಪುಸ್ತಕವನ್ನು ಆಧರಿಸಿದ ಈ ಚಲನಚಿತ್ರವು ಆಗಸ್ಟ್ 1ರಂದು ಚಿತ್ರಮಂದಿರಗಳಲ್ಲಿ ಪ್ರದರ್ಶನಗೊಳ್ಳಬೇಕಿತ್ತು. ಆದರೆ, ಚಲನಚಿತ್ರದ ದೃಶ್ಯಗಳು ಮತ್ತು ಹಾಡುಗಳಿಗೆ ಪ್ರಮಾಣಪತ್ರ ನೀಡುವಲ್ಲಿ ಮಂಡಳಿ ವಿಳಂಬ ಮಾಡಿದ ಕಾರಣ, ಪ್ರದರ್ಶನ ಮುಂದೂಡಲಾಯಿತು. ಮಂಡಳಿಯ ಈ ನಡೆ ಏಕಪಕ್ಷೀಯವಾಗಿದೆ ಎಂದು ಹೇಳಿ ಚಿತ್ರ ನಿರ್ಮಾಪಕರಾದ ‘ಸಮ್ರಾಟ್ ಸಿನಿಮ್ಯಾಟಿಕ್ಸ್’ ಉಚ್ಚ ನ್ಯಾಯಾಲಯದ ಮೊರೆ ಹೋಗಿದ್ದರು. ಕಾನೂನಿನಲ್ಲಿ ಯಾವುದೇ ಅವಕಾಶ ಇಲ್ಲದಿದ್ದರೂ ಉತ್ತರ ಪ್ರದೇಶದ ಮುಖ್ಯಮಂತ್ರಿ ಕಚೇರಿಯಿಂದ ನಿರಾಪೇಕ್ಷಣಿ  ಪ್ರಮಾಣಪತ್ರವನ್ನು ಕೇಳಲಾಗಿದೆ ಎಂದು ನಿರ್ಮಾಪಕರು ಅರ್ಜಿಯಲ್ಲಿ ಹೇಳಿಕೊಂಡಿದ್ದರು.

2. ನಿರ್ಮಾಪಕರ ಅರ್ಜಿಯ ಕುರಿತು ತೀರ್ಮಾನ ಕೈಗೊಳ್ಳಲು ನ್ಯಾಯಮೂರ್ತಿ ರೇವತಿ ಮೋಹಿತೆ-ಡೆರೆ ಮತ್ತು ನ್ಯಾಯಮೂರ್ತಿ ನೀಲಾ ಗೋಖಲೆ ಅವರ ನ್ಯಾಯಪೀಠವು ಸ್ವತಃ ಚಲನಚಿತ್ರವನ್ನು ವೀಕ್ಷಿಸಿ ಈ ನಿರ್ಧಾರವನ್ನು ಪ್ರಕಟಿಸಿದೆ. “ಈ ಚಲನಚಿತ್ರ ಕಾಲ್ಪನಿಕವಾಗಿದ್ದು, ನಿಜವಾದ ಘಟನೆಗಳಿಂದ ಪ್ರೇರಿತವಾಗಿದೆ” ಎಂದು ಹೇಳುವ ಮೂರು ಸಾಲುಗಳ ಪ್ರಕಟಣೆಯನ್ನು ಚಲನಚಿತ್ರದ ಆರಂಭದಲ್ಲಿ ಸೇರಿಸಲಾಗಿದೆ ಎಂದು ನಿರ್ಮಾಪಕರು ನ್ಯಾಯಾಲಯಕ್ಕೆ ತಿಳಿಸಿದ್ದಾರೆ.