ಸೈನಿಕರೊಂದಿಗೆ ದುರ್ವರ್ತನೆ ತೋರಿದ್ದಕ್ಕಾಗಿ ಟೋಲ್ ಪ್ಲಾಜಾ ನಿರ್ವಹಿಸುತ್ತಿದ್ದ ಸಂಸ್ಥೆಯ ಒಪ್ಪಂದ ರದ್ದು- Toll Plaza Contract Cancelled

  • ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಕ್ರಮ

  • 20 ಲಕ್ಷ ರೂಪಾಯಿ ದಂಡ

ನವದೆಹಲಿ – ಆಗಸ್ಟ್ 17 ರಂದು ರಾಷ್ಟ್ರೀಯ ಹೆದ್ದಾರಿ ‘709 ಅ’ನಲ್ಲಿರುವ ಮೀರತ್-ಕರ್ನಾಲ್ ವಿಭಾಗದ ಭುನಿ ಟೋಲ್ ಪ್ಲಾಜಾದಲ್ಲಿ ಸಿಬ್ಬಂದಿಯು ಸೈನಿಕರೊಂದಿಗೆ ಅನುಚಿತವಾಗಿ ವರ್ತಿಸಿದ್ದರು. ಈ ಸಮಯದಲ್ಲಿ ಸೈನಿಕರ ಮೇಲೆ ಹಲ್ಲೆ ಕೂಡ ನಡೆದಿತ್ತು. ಈ ಘಟನೆಗೆ ಸಂಬಂಧಿಸಿದಂತೆ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಈಗ ಕಠಿಣ ಕ್ರಮ ಕೈಗೊಂಡಿದೆ. ಭುನಿ ಟೋಲ್ ಪ್ಲಾಜಾ ನಿರ್ವಹಿಸುತ್ತಿದ್ದ ಸಂಸ್ಥೆಯ ಒಪ್ಪಂದವನ್ನು ರದ್ದುಪಡಿಸಿದ್ದು, ಒಂದು ವರ್ಷದವರೆಗೆ ಯಾವುದೇ ಹರಾಜಿನಲ್ಲಿ ಭಾಗವಹಿಸುವುದನ್ನು ನಿಷೇಧಿಸಿದೆ. ಇದರ ಜೊತೆಗೆ, ಸಂಸ್ಥೆಗೆ 20 ಲಕ್ಷ ರೂಪಾಯಿ ದಂಡ ವಿಧಿಸಲಾಗಿದೆ. ಅಲ್ಲದೆ, ಭುನಿ ಟೋಲ್ ಪ್ಲಾಜಾದಲ್ಲಿ ಹಾಳಾದ ಉಪಕರಣಗಳು ಮತ್ತು ಮೂಲಸೌಕರ್ಯಗಳ ದುರಸ್ತಿ ವೆಚ್ಚವನ್ನು ಸಹ ವಸೂಲಿ ಮಾಡಲಾಗುವುದು ಎಂದು ಹೇಳಲಾಗಿದೆ.

ಭವಿಷ್ಯದಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ತಡೆಯಲು, ಪ್ರಾಧಿಕಾರವು ಎಲ್ಲಾ ಟೋಲ್ ಪ್ಲಾಜಾ ಸಂಸ್ಥೆಗಳಿಗೆ ಸಾರ್ವಜನಿಕರು ಮತ್ತು ಜನಪ್ರತಿನಿಧಿಗಳೊಂದಿಗೆ ಅನುಚಿತವಾಗಿ ವರ್ತಿಸುವ ಸಿಬ್ಬಂದಿಯ ಮೇಲೆ ಕಠಿಣ ಕ್ರಮ ತೆಗೆದುಕೊಳ್ಳುವಂತೆ ನಿರ್ದೇಶನ ನೀಡಿದೆ. ಅಲ್ಲದೆ, ಸಿಬ್ಬಂದಿಯೊಂದಿಗೆ ಉತ್ತಮವಾಗಿ ವರ್ತಿಸಲು ತರಬೇತಿ ನೀಡುವಂತೆಯೂ ಸೂಚಿಸಲಾಗಿದೆ.