ಉತ್ತರಾಖಂಡದಲ್ಲಿ 9ನೇ ತರಗತಿಯ ವಿದ್ಯಾರ್ಥಿಯಿಂದ ಶಿಕ್ಷಕನ ಮೇಲೆ ಗುಂಡು ಹಾರಾಟ ! : Uttarakhand Student Firing

ಪ್ರಾತಿನಿಧಿಕ ಛಾಯಾಚಿತ್ರ

ಕಾಶೀಪುರ (ಉತ್ತರಾಖಂಡ) – ಉತ್ತರಾಖಂಡದ ಕಾಶೀಪುರದಲ್ಲಿ, 9ನೇ ತರಗತಿಯ ವಿದ್ಯಾರ್ಥಿಯೊಬ್ಬ ಶಾಲೆಯಲ್ಲಿ ತನ್ನ ಶಿಕ್ಷಕನ ಮೇಲೆ ಗುಂಡು ಹಾರಿಸಿದ್ದಾನೆ. ಈ ಗುಂಡಿನ ದಾಳಿಯಲ್ಲಿ ಶಿಕ್ಷಕ ಗಂಭೀರವಾಗಿ ಗಾಯಗೊಂಡಿದ್ದಾರೆ. ಆರೋಪಿ ವಿದ್ಯಾರ್ಥಿ ತನ್ನ ಊಟದ ಡಬ್ಬಿಯಲ್ಲಿ ಬಂದೂಕನ್ನು ಇಟ್ಟುಕೊಂಡು ಶಾಲೆಗೆ ಬಂದಿದ್ದನು. ಎರಡು ದಿನಗಳ ಹಿಂದೆ ತರಗತಿಯಲ್ಲಿ ಒಂದು ಪ್ರಶ್ನೆಗೆ ಉತ್ತರಿಸಲು ವಿಫಲವಾದ ಕಾರಣಕ್ಕೆ ಶಿಕ್ಷಕ ಕಪಾಳಮೋಕ್ಷ ಮಾಡಿ ಗದರಿಸಿದ್ದಕ್ಕೆ ಆ ವಿದ್ಯಾರ್ಥಿಗೆ ಸಿಟ್ಟು ಬಂದಿತ್ತು. ವಿದ್ಯಾರ್ಥಿಯ ವಿರುದ್ಧ ಪ್ರಕರಣ ದಾಖಲಿಸಲಾಗಿದ್ದು, ಆತನನ್ನು ಪೊಲೀಸ್ ವಶಕ್ಕೆ ಒಪ್ಪಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

1. ಈ ಘಟನೆ ಕುಂದೇಶ್ವರಿ ರಸ್ತೆಯಲ್ಲಿರುವ ‘ಶ್ರೀ ಗುರುನಾನಕ್ ಸೀನಿಯರ್ ಸೆಕೆಂಡರಿ ಸ್ಕೂಲ್’ನಲ್ಲಿ ನಡೆದಿದೆ. ಶಿಕ್ಷಕ ಗಂಗಾದೀಪ್ ಸಿಂಗ್ ಕೋಹ್ಲಿ ತಮ್ಮ ತರಗತಿ ಮುಗಿಸಿ ಹೊರಬರುತ್ತಿದ್ದಾಗ, ಆ ವಿದ್ಯಾರ್ಥಿ ದಿಢೀರನೇ ತನ್ನ ಊಟದ ಡಬ್ಬಿಯಿಂದ ನಾಡು ಪಿಸ್ತೂಲನ್ನು ತೆಗೆದು ಹಿಂದಿನಿಂದ ಗುಂಡು ಹಾರಿಸಿದ್ದಾನೆ. ಗುಂಡು ಶಿಕ್ಷಕರ ಬಲ ಭುಜಕ್ಕೆ ತಾಗಿದೆ. ಇದಾದ ನಂತರ ವಿದ್ಯಾರ್ಥಿ ಓಡಿ ಹೋಗಲು ಪ್ರಯತ್ನಿಸಿದಾಗ ಶಾಲೆಯ ಇತರ ಸಿಬ್ಬಂದಿ ಆತನನ್ನು ಹಿಡಿದಿದ್ದಾರೆ. ಗಾಯಗೊಂಡ ಶಿಕ್ಷಕರನ್ನು ತಕ್ಷಣ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

2. ಶಾಲೆಯಲ್ಲಿ ನಡೆದ ಈ ಗುಂಡಿನ ದಾಳಿಯಿಂದ ವಿದ್ಯಾರ್ಥಿಗಳು ಮತ್ತು ಶಿಕ್ಷಕರಲ್ಲಿ ಆತಂಕದ ವಾತಾವರಣ ಸೃಷ್ಟಿಯಾಗಿದೆ.

3. ಶಾಲಾ ಸಂಘಟನೆಯ ನಾಯಕರು ಈ ದಾಳಿಯನ್ನು ಖಂಡಿಸಿದ್ದಾರೆ ಮತ್ತು ಶಾಲೆಗಳಲ್ಲಿ ಭದ್ರತೆಯನ್ನು ಹೆಚ್ಚಿಸುವಂತೆ ಒತ್ತಾಯಿಸಿದ್ದಾರೆ.

ಸಂಪಾದಕೀಯ ನಿಲುವು

ಅಮೆರಿಕಾದಂತಹ ದೇಶಗಳಲ್ಲಿ ಇಂತಹ ಘಟನೆಗಳು ಆಗಾಗ ನಡೆಯುವುದನ್ನು ನಾವು ನೋಡುತ್ತೇವೆ. ಆದರೆ ಭಾರತದಲ್ಲಿ ಇಂತಹ ಘಟನೆಗಳು ನಡೆಯುತ್ತಿರುವುದು ಇಲ್ಲಿನ ಸಮಾಜದ ಮಟ್ಟ ಕುಸಿಯುತ್ತಿದೆ ಎಂಬುದನ್ನು ತೋರಿಸುತ್ತದೆ! ಸಮಾಜಕ್ಕೆ ಸಾಧನೆ ಕಲಿಸುವುದು ಏಕೆ ಮುಖ್ಯ ಎಂಬುದನ್ನು ಇಂತಹ ಘಟನೆಗಳು ಎತ್ತಿ ತೋರಿಸುತ್ತವೆ!