ಆಗಸ್ಟ್ ೫ ರಂದು ನ್ಯಾಷನಲ್ ಕಾನ್ಫರೆನ್ಸ್, ಪಿಡಿಪಿ ಮತ್ತು ಕಾಂಗ್ರೆಸ್ ‘ಕರಾಳ ದಿನ’ ಆಚರಿಸಿದವು!

ಆಗಸ್ಟ್ ೫, ೨೦೧೯ ರಂದು ಕಲಂ ೩೭೦ ರದ್ದುಗೊಂಡಿತ್ತು!

ಶ್ರೀನಗರ – ಆಗಸ್ಟ್ ೫ರಂದು ಕಲಂ ೩೭೦ ರದ್ದುಗೊಂಡು ೬ ವರ್ಷಗಳು ತುಂಬಿವೆ. ಈ ಸಂದರ್ಭದಲ್ಲಿ ಕಾಶ್ಮೀರದ ಮತಾಂಧ ಮುಸ್ಲಿಂ ನಾಯಕರು ಹಳೆಯ ಮಾತುಗಳನ್ನೇ ಪುನರುಚ್ಚರಿಸುತ್ತಿದ್ದಾರೆ. ಅಧಿಕಾರದಲ್ಲಿರುವ ನ್ಯಾಷನಲ್ ಕಾನ್ಫರೆನ್ಸ್ ಅಧ್ಯಕ್ಷ ಮತ್ತು ೩ ಬಾರಿ ಮುಖ್ಯಮಂತ್ರಿಯಾಗಿದ್ದ ಫಾರೂಕ್ ಅಬ್ದುಲ್ಲಾ ಅವರು ೬ ವರ್ಷಗಳ ಹಿಂದಿನ ಈ ನಿರ್ಧಾರವನ್ನು ‘ಏಕಪಕ್ಷೀಯ’ ಮತ್ತು ‘ಅಸಂವಿಧಾನಿಕ ಕೃತ್ಯ’ ಎಂದು ಕರೆದರು. ಅವರು, ನಮ್ಮ ಪಕ್ಷಕ್ಕೆ ಈ ನಿರ್ಧಾರಕ್ಕೆ ಇನ್ನೂ ತೀವ್ರ ವಿರೋಧವಿದೆ ಮತ್ತು ಜಮ್ಮು ಮತ್ತು ಕಾಶ್ಮೀರದ ಜನರಿಗೆ ಇದು ಇನ್ನೂ ಸ್ವೀಕಾರಾರ್ಹವಲ್ಲ ಎಂದು ಹೇಳಿದರು.

‘ಪಿಡಿಪಿ’ಯ (‘ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ’ಯ) ಮುಖ್ಯಸ್ಥೆ ಮತ್ತು ಮಾಜಿ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಅವರು ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿ, ಆಗಸ್ಟ್ ೫ ಜಮ್ಮು ಮತ್ತು ಕಾಶ್ಮೀರಕ್ಕೆ ಮಾತ್ರವಲ್ಲ, ಇಡೀ ದೇಶಕ್ಕೆ ಕರಾಳ ದಿನವಾಗಿದೆ ಎಂದು ಹೇಳಿದರು. ಈ ದಿನ ವಿದೇಶಿ ಶಕ್ತಿಗಳಿಂದಲ್ಲ, ಬದಲಾಗಿ ಆಂತರಿಕ ಶಕ್ತಿಗಳಿಂದ ಕ್ರೂರ ಬಹುಮತದಿಂದ ಸಂವಿಧಾನವನ್ನು ಉರುಳಿಸಲಾಯಿತು. ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸಿದ್ದು ಕೊನೆಯಲ್ಲ, ಅದು ಸಾಂವಿಧಾನಿಕ ಮೌಲ್ಯಗಳ ಮೇಲೆ ವ್ಯಾಪಕ ಆಕ್ರಮಣದ ಆರಂಭವಾಗಿತ್ತು ಎಂದು ಹೇಳಿದರು. (ಮೆಹಬೂಬಾ ಅವರ ಈ ಆವಿಷ್ಕಾರಕ್ಕೆ ಅವರಿಗೆ ಪ್ರಶಸ್ತಿಯನ್ನು ನೀಡಬೇಕು! – ಸಂಪಾದಕರು)

ಮೆಹಬೂಬಾ ಮಾತು ಮುಂದುವರಿಸಿ, ಜಮ್ಮು ಮತ್ತು ಕಾಶ್ಮೀರವನ್ನು ಪ್ರಯೋಗಾಲಯವಾಗಿ ಪರಿವರ್ತಿಸಲಾಯಿತು, ಅಲ್ಲಿನ ಜನರನ್ನು ಹಕ್ಕುಗಳಿಂದ ವಂಚಿತಗೊಳಿಸಲಾಯಿತು, ಅವರ ಭೂಮಿಯನ್ನು ಕಸಿದುಕೊಳ್ಳಲಾಯಿತು, ಅವರ ಜನಸಂಖ್ಯೆಯನ್ನು ಗುರಿಪಡಿಸಲಾಯಿತು ಎಂದು ಹೇಳಿದರು. (ಇದು ನಿಜವಾಗಿದ್ದರೆ, ೨೦೧೯ ಕ್ಕಿಂತ ಮೊದಲು ದಶಕಗಳಿಂದ ಜಮ್ಮು ಮತ್ತು ಕಾಶ್ಮೀರದಲ್ಲಿ ಯಾವುದೇ ಅಭಿವೃದ್ಧಿ ಏಕೆ ಆಗಲಿಲ್ಲ, ಎಂಬುದರ ಬಗ್ಗೆ ಮೆಹಬೂಬಾ ಮೊದಲು ಪ್ರತಿಕ್ರಿಯಿಸಬೇಕು! – ಸಂಪಾದಕರು) ಇದನ್ನು ಅನೇಕರು ಸ್ಥಳೀಯ ಸಮಸ್ಯೆ ಎಂದು ನೋಡಿದರು, ಅದು ಎಲ್ಲರಿಗೂ ಒಂದು ಎಚ್ಚರಿಕೆಯಾಗಿತ್ತು.

ಕಾಂಗ್ರೆಸ್ ಈ ದಿನವನ್ನು ರಾಜ್ಯದ ಎಲ್ಲಾ ೨೦ ಜಿಲ್ಲೆಗಳಲ್ಲಿ ‘ಕರಾಳ ದಿನ’ವಾಗಿ ಆಚರಿಸಿತು!

ಜಮ್ಮು ಮತ್ತು ಕಾಶ್ಮೀರ ಕಾಂಗ್ರೆಸ್ ಮುಖ್ಯಸ್ಥ ತಾರಿಕ್ ಹಮೀದ್ ಕರ್ರಾ ಅವರು, ರಾಜ್ಯದ ಪುನಃಸ್ಥಾಪನೆಗಾಗಿ ಹೋರಾಟವನ್ನು ತೀವ್ರಗೊಳಿಸಲು ಪಕ್ಷವು ಆಗಸ್ಟ್ ೫ ಅನ್ನು ರಾಜ್ಯದ ಎಲ್ಲಾ ೨೦ ಜಿಲ್ಲೆಗಳಲ್ಲಿ ‘ಕರಾಳ ದಿನ’ವಾಗಿ ಆಚರಿಸಲಿದೆ ಎಂದು ಹೇಳಿದರು.

ಆಮ್ ಆದ್ಮಿ ಪಕ್ಷದ ಶಾಸಕ ಮೆಹ್ರಾಜ್ ಮಲಿಕ್ ಅವರು ಕೂಡ ಆಗಸ್ಟ್ ೫, ೨೦೧೯ ರ ದಿನವನ್ನು ‘ಜಮ್ಮು ಮತ್ತು ಕಾಶ್ಮೀರದ ಇತಿಹಾಸದ ಅತ್ಯಂತ ಕರಾಳ ದಿನ’ ಎಂದು ಬಣ್ಣಿಸಿದರು. (ಯಾವ ಪಕ್ಷವು ಈಗ ಇತಿಹಾಸವಾಗುವ ಹಾದಿಯಲ್ಲಿದೆಯೋ, ಅದು ತನ್ನ ಅಸ್ತಿತ್ವವನ್ನು ತೋರಿಸಲು ಮಾಡಿದ ಈ ಪ್ರಯತ್ನ! – ಸಂಪಾದಕರು)

ಪೀಪಲ್ಸ್ ಕಾನ್ಫರೆನ್ಸ್ ಅಧ್ಯಕ್ಷ ಮತ್ತು ಮಾಜಿ ಸಚಿವ ಸಜ್ಜಾದ್ ಗನಿ ಲೋನ್ ಅವರು, ಆಗಸ್ಟ್ ೫ ರ ದಿನವು ಯಾವಾಗಲೂ ‘ಪ್ರಜಾಪ್ರಭುತ್ವವನ್ನು ದುರ್ಬಲಗೊಳಿಸಿದ ಕ್ರೂರ ನೆನಪು ಮತ್ತು ಆಯ್ದ ಸಮೂಹವನ್ನು ಗುರಿಪಡಿಸಿದ ಅಸಹ್ಯಕರ ಉದಾಹರಣೆ’ಯಾಗಿ ನೆನಪಿನಲ್ಲಿ ಉಳಿಯುತ್ತದೆ ಎಂದು ಹೇಳಿದರು.

ಆಗಸ್ಟ್ ೫, ೨೦೧೯ ರಂದು ಏನಾಗಿತ್ತು?

ಈ ದಿನ ಕೇಂದ್ರ ಸರಕಾರವು ಜಮ್ಮು ಮತ್ತು ಕಾಶ್ಮೀರದ ನಿವಾಸಿಗಳಿಗೆ ವಿಶೇಷ ಸ್ಥಾನಮಾನ ಮತ್ತು ವಿಶೇಷಾಧಿಕಾರಗಳನ್ನು ನೀಡುತ್ತಿದ್ದ ಕಲಂ ೩೭೦ ಮತ್ತು ೩೫ಎ ಅನ್ನು ರದ್ದುಗೊಳಿಸಿತ್ತು. ಆ ಸಮಯದಲ್ಲಿ, ಹಿಂದಿನ ಜಮ್ಮು ಮತ್ತು ಕಾಶ್ಮೀರ ರಾಜ್ಯವನ್ನು ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಂಗಡಿಸಲಾಯಿತು – ಜಮ್ಮು ಮತ್ತು ಕಾಶ್ಮೀರ (ವಿಧಾನಸಭೆಯೊಂದಿಗೆ) ಮತ್ತು ಲಡಾಖ್ (ವಿಧಾನಸಭೆ ಇಲ್ಲದೆ).

ಸಂಪಾದಕೀಯ ನಿಲುವು

ದಶಕಗಳಿಂದ ಮುಸಲ್ಮಾನರ ತುಷ್ಟೀಕರಣ ಮಾಡುತ್ತಾ ಬಂದಿರುವ ಈ ಪಕ್ಷಗಳು ಆಗಸ್ಟ್ ೫ ಅನ್ನು ಕರಾಳ ದಿನವನ್ನಾಗಿ ಆಚರಿಸುವುದು ಕೇವಲ ಒಂದು ಔಪಚಾರಿಕತೆಯಾಗಿದೆ ಮತ್ತು ಇದು ಆ ಪಕ್ಷಗಳಿಗೂ ತಿಳಿದಿದೆ. ಇದಕ್ಕಿಂತ ದೊಡ್ಡ ಹಾಸ್ಯ ಮತ್ತೊಂದಿದೆಯೇ?