ಗಾಯಕ ಕಿಶೋರ್ ಕುಮಾರ್ ಅವರಿಗೆ ರಾಷ್ಟ್ರೀಯ ಪ್ರಶಸ್ತಿ ನಾಮನಿರ್ದೇಶನಕ್ಕಾಗಿ ಕೇಂದ್ರದ ಅಧಿಕಾರಿಗಳು ಲಂಚ ಕೇಳಿದ್ದರು!

ನವದೆಹಲಿ – 1964ರಲ್ಲಿ ಬಿಡುಗಡೆಯಾದ ‘ದೂರ್ ಗಗನ್ ಕಿ ಛಾಂವ್ ಮೇ’ ಚಿತ್ರಕ್ಕಾಗಿ, ಪ್ರಸಿದ್ಧ ಗಾಯಕ ಮತ್ತು ನಟ ಕಿಶೋರ್ ಕುಮಾರ್ ಅವರನ್ನು ರಾಷ್ಟ್ರೀಯ ಪ್ರಶಸ್ತಿಗೆ ನಾಮನಿರ್ದೇಶನ ಮಾಡಬೇಕಿತ್ತು; ಆದರೆ, ಅದಕ್ಕಾಗಿ ಸಂಬಂಧಿತ ಅಧಿಕಾರಿಗಳು ಲಂಚ ಕೇಳಿದ್ದರು. ಕಿಶೋರ್ ಕುಮಾರ್ ಅವರು ಲಂಚ ನೀಡಲು ನಿರಾಕರಿಸಿದ ಕಾರಣ, ಅವರ ಚಿತ್ರಕ್ಕೆ ಪ್ರಶಸ್ತಿ ಸಿಗಲಿಲ್ಲ ಎಂದು ಕಿಶೋರ್ ಕುಮಾರ್ ಅವರ ಪುತ್ರ ಅಮಿತ ಕುಮಾರ್ ಅವರು ವಿಕಿ ಲಾಲ್ವಾನಿ ಅವರೊಂದಿಗಿನ ಸಂಭಾಷಣೆಯಲ್ಲಿ ತಿಳಿಸಿದ್ದಾರೆ. ಈ ಚಿತ್ರದಲ್ಲಿ ಕಿಶೋರ್ ಕುಮಾರ್ ಅವರು ಅಮಿತ್ ಕುಮಾರ್ ಅವರೊಂದಿಗೆ ನಟಿಸಿದ್ದರು ಮತ್ತು ಈ ಚಿತ್ರ 25 ವಾರಗಳ ಕಾಲ ಚಿತ್ರಮಂದಿರಗಳಲ್ಲಿ ಪ್ರದರ್ಶನಗೊಂಡಿತ್ತು.

ಅಮಿತ ಕುಮಾರ್ ಮಾತು ಮುಂದುವರೆಸಿ, “ದೆಹಲಿಯ ಕೇಂದ್ರ ಸಚಿವಾಲಯದ ಒಬ್ಬ ಅಧಿಕಾರಿಯಿಂದ ನನ್ನ ತಂದೆಗೆ (ಕಿಶೋರ್ ಕುಮಾರ್ ಅವರಿಗೆ) ದೂರವಾಣಿ ಕರೆ ಬಂದಿತ್ತು. ಆ ಸಮಯದಲ್ಲಿ ‘ಹಕೀಕತ್’, ‘ದೋಸ್ತಿ’ ಮತ್ತು ‘ದೂರ್ ಗಗನ್ ಕಿ ಛಾಂವ್ ಮೇ’ ಚಿತ್ರಗಳನ್ನು ರಾಷ್ಟ್ರೀಯ ಪ್ರಶಸ್ತಿಗಾಗಿ ಪರಿಗಣಿಸಲಾಗುತ್ತಿತ್ತು. ಆ ಅಧಿಕಾರಿ ನನ್ನ ತಂದೆಗೆ, ‘ನೀವು ಏನಾದರೂ ಮಾಡಿದರೆ, ಏನಾದರೂ ಕೊಟ್ಟರೆ, ನಾವು ನಿಮಗೆ ನಾಮನಿರ್ದೇಶನ ನೀಡಬಹುದು’ ಎಂದು ಹೇಳಿದರು. ಇದಕ್ಕೆ ನನ್ನ ತಂದೆ, ‘ನೀವು ನನ್ನ ಜೀವಕ್ಕೆ ಯಾಕೆ ಬಿದ್ದಿದ್ದೀರಿ? ನನ್ನ ಸಿನಿಮಾ ಯಶಸ್ವಿಯಾಗಿದೆ (ಹಿಟ್) ಅಲ್ಲವೇ?’ ಎಂದು ಉತ್ತರಿಸಿದರು.”

ವಿಶೇಷವೆಂದರೆ, ಕಿಶೋರ ಕುಮಾರ್ ಅವರಿಗೆ ತಮ್ಮ ಜೀವನದಲ್ಲಿ ಎಂದಿಗೂ ರಾಷ್ಟ್ರೀಯ ಪ್ರಶಸ್ತಿ ಸಿಗಲಿಲ್ಲ.

ಸಂಪಾದಕೀಯ ನಿಲುವು

  • 1964ರಲ್ಲಿ ಕೇವಲ ನಾಮನಿರ್ದೇಶನಕ್ಕಾಗಿ ಲಂಚ ಕೇಳಿದ ಅಧಿಕಾರಿಗಳು, ಪ್ರಶಸ್ತಿಯನ್ನೂ ಲಂಚ ಪಡೆದೇ ಘೋಷಿಸುತ್ತಿದ್ದರೇ? ಮತ್ತು ಈಗ 60 ವರ್ಷಗಳ ನಂತರ ಪರಿಸ್ಥಿತಿ ಹೇಗಿರಬಹುದು ಎಂದು ಊಹಿಸಲೂ ಸಾಧ್ಯವಿಲ್ಲ!
  • ದೇಶದಲ್ಲಿ ಭ್ರಷ್ಟಾಚಾರ ರಹಿತ ಒಂದು ಇಲಾಖೆಯಾದರೂ ಇದೆಯೇ?