ಭಾರತದಲ್ಲಿನ ರೋಹಿಂಗ್ಯಾಗಳು ನಿರಾಶ್ರಿತರೇ ಅಥವಾ ಒಳನುಸುಳುಕೋರರೇ? ಎಂಬುದು ಮೊದಲು ಸ್ಪಷ್ಟಪಡಿಸಿ! – ಸುಪ್ರಿಂ ಕೋರ್ಟ್

ನವಿ ದೆಹಲಿ – ಸರ್ವೋಚ್ಚ ನ್ಯಾಯಾಲಯವು ರೋಹಿಂಗ್ಯಾಗಳಿಗೆ ಸಂಬಂಧಿಸಿದ ಅರ್ಜಿಗಳ ವಿಚಾರಣೆ ನಡೆಸುವಾಗ “ಭಾರತದಲ್ಲಿನ ರೋಹಿಂಗ್ಯಾಗಳು ನಿರಾಶ್ರಿತರೇ ಅಥವಾ ಒಳನುಸುಳುಕೋರರೇ?” ಎಂದು ಪ್ರಶ್ನಿಸಿದೆ. “ಒಮ್ಮೆ ಈ ವಿಷಯ ಸ್ಪಷ್ಟವಾದರೆ, ಉಳಿದ ಪ್ರಶ್ನೆಗಳು ತಾನಾಗಿಯೇ ಬಗೆಹರಿಯುತ್ತವೆ” ಎಂದು ನ್ಯಾಯಾಲಯ ಹೇಳಿದೆ.

ನ್ಯಾಯಾಲಯ ಎತ್ತಿದ ಪ್ರಶ್ನೆಗಳು

1. ರೋಹಿಂಗ್ಯಾಗಳನ್ನು ‘ನಿರಾಶ್ರಿತರು’ ಎಂದು ಘೋಷಿಸಲು ಕಾನೂನುಬದ್ಧ ಹಕ್ಕು ಇದೆಯೇ? ಹಾಗಿದ್ದಲ್ಲಿ, ಅವರಿಗೆ ಯಾವ ರೀತಿಯ ರಕ್ಷಣೆ, ವಿಶೇಷಾಧಿಕಾರಗಳು ಅಥವಾ ಹಕ್ಕುಗಳು ದೊರೆಯಬಹುದು?

2. ಅವರು ನಿರಾಶ್ರಿತರಲ್ಲದಿದ್ದರೆ ಮತ್ತು ನುಸುಳುಕೋರರಾಗಿದ್ದರೆ, ಅವರನ್ನು ಗಡಿಪಾರು ಮಾಡುವುದು ಸರಿಯೇ?

3. ರೋಹಿಂಗ್ಯಾಗಳನ್ನು ‘ನುಸುಳುಕೋರರು’ ಎಂದು ಘೋಷಿಸಿದರೆ, ಅವರನ್ನು ಎಷ್ಟು ಸಮಯದವರೆಗೆ ವಶದಲ್ಲಿ ಇಡಬಹುದು? ಅಥವಾ ನ್ಯಾಯಾಲಯವು ನಿರ್ಧರಿಸಿದ ಷರತ್ತುಗಳ ಮೇಲೆ ಅವರಿಗೆ ಜಾಮೀನು ಸಿಗಬಹುದೇ?

4. ಪ್ರಸ್ತುತ ಬಂಧನದಲ್ಲಿ ಇಲ್ಲದ ಮತ್ತು ನಿರಾಶ್ರಿತರ ಶಿಬಿರಗಳಲ್ಲಿ ವಾಸಿಸುತ್ತಿರುವ ರೋಹಿಂಗ್ಯಾಗಳಿಗೆ ಕುಡಿಯುವ ನೀರು, ನೈರ್ಮಲ್ಯ ಮತ್ತು ಶಿಕ್ಷಣದಂತಹ ಸೌಲಭ್ಯಗಳು ದೊರೆಯುತ್ತಿವೆಯೇ?

5. ಕಾನೂನುಬಾಹಿರವಾಗಿ ಭಾರತಕ್ಕೆ ಬಂದಿರುವ ಜನರನ್ನು ವಾಪಸ್ ಕಳುಹಿಸುವ ಹೊಣೆಗಾರಿಕೆ ಕೇಂದ್ರ ಮತ್ತು ರಾಜ್ಯ ಸರಕಾರಗಳ ಮೇಲಿದೆ.

ಈ ಹಿಂದೆ, ಅಂದರೆ ಮೇ 16ರಂದು, ನ್ಯಾಯಾಲಯವು ಕೆಲವು ಅರ್ಜಿದಾರರನ್ನು ತರಾಟೆಗೆ ತೆಗೆದುಕೊಂಡಿತ್ತು. 43 ರೋಹಿಂಗ್ಯಾಗಳನ್ನು ಅಂಡಮಾನ್ ಸಮುದ್ರದಲ್ಲಿ ಬಿಡಲಾಗಿದೆ ಎಂದು ಆರೋಪಿಸಿದಾಗ, ನ್ಯಾಯಾಲಯವು ಆ ಅರ್ಜಿಯ ಬಗ್ಗೆ ಪ್ರಶ್ನಿಸಿತ್ತು.

ಮೇ 8ರಂದು ನಡೆದ ವಿಚಾರಣೆಯ ಸಮಯದಲ್ಲಿ, ಸರ್ವೋಚ್ಚ ನ್ಯಾಯಾಲಯವು ರೋಹಿಂಗ್ಯಾಗಳು ಭಾರತೀಯ ಕಾನೂನಿನ ಪ್ರಕಾರ ವಿದೇಶಿಯರು; ಆದ್ದರಿಂದ ಅವರನ್ನು ವಾಪಸ್ ಕಳುಹಿಸಲಾಗುತ್ತದೆ ಎಂದು ಸ್ಪಷ್ಟಪಡಿಸಿತ್ತು.

‘ಸಂಯುಕ್ತ ರಾಷ್ಟ್ರಗಳ ನಿರಾಶ್ರಿತರಿಗಾಗಿ ಉಚ್ಚಾಯುಕ್ತರು’ (U.N.H.C.R.) ನೀಡಿರುವ ಗುರುತಿನ ಚೀಟಿ ಅವರಿಗೆ ರಕ್ಷಣೆ ನೀಡಲಾರದು.