ಕಳೆದ 6 ತಿಂಗಳಲ್ಲಿ ರಾಷ್ಟ್ರೀಯ ಹೆದ್ದಾರಿಗಳಲ್ಲಿ 27 ಸಾವಿರಕ್ಕೂ ಹೆಚ್ಚು ಜನರ ಸಾವು! – ಕೇಂದ್ರ ಸಚಿವ ನಿತಿನ್ ಗಡ್ಕರಿ

ನವದೆಹಲಿ – ಪ್ರಸಕ್ತ ವರ್ಷದ ಮೊದಲ 6 ತಿಂಗಳಲ್ಲಿ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸಂಭವಿಸಿದ ಅಪಘಾತಗಳಲ್ಲಿ 26 ಸಾವಿರ 770 ಜನರು ಮೃತಪಟ್ಟಿದ್ದಾರೆ ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ ಗಡ್ಕರಿ ಸಂಸತ್ತಿನಲ್ಲಿ ಮಾಹಿತಿ ನೀಡಿದ್ದಾರೆ.

ಗಡ್ಕರಿ ಅವರು ರಾಜ್ಯಸಭೆಗೆ ನೀಡಿದ ಮಾಹಿತಿಯ ಪ್ರಕಾರ, ಕಳೆದ ವರ್ಷ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸಂಭವಿಸಿದ ಅಪಘಾತಗಳಲ್ಲಿ ಸಾವನ್ನಪ್ಪಿದವರ ಸಂಖ್ಯೆ 52 ಸಾವಿರ 609 ಆಗಿತ್ತು. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ದೆಹಲಿ-ಮೀರತ್ ಎಕ್ಸ್‌ಪ್ರೆಸ್‌ ವೇ, ‘ಟ್ರಾನ್ಸ್-ಹರಿಯಾಣ’, ‘ಈಸ್ಟರ್ನ್ ಪೆರಿಫೆರಲ್ ಎಕ್ಸ್‌ಪ್ರೆಸ್‌ ವೇ’, ದೆಹಲಿ-ಮುಂಬೈ ಎಕ್ಸ್‌ಪ್ರೆಸ್‌ ವೇ ಮುಂತಾದ ಹೆಚ್ಚಿನ ಸಂಚಾರ ಇರುವ ರಾಷ್ಟ್ರೀಯ ಹೆದ್ದಾರಿಗಳು ಮತ್ತು ರಾಷ್ಟ್ರೀಯ ಎಕ್ಸ್‌ಪ್ರೆಸ್‌ ವೇಗಳಲ್ಲಿ ಸುಧಾರಿತ ಸಂಚಾರ ನಿರ್ವಹಣಾ ವ್ಯವಸ್ಥೆಗಳನ್ನು ಅಳವಡಿಸಿದೆ.

ಹಳೆಯ ವಾಹನಗಳ ಸ್ಕ್ರ್ಯಾಪಿಂಗ್(ಗುಜರಿಗೆ ಹಾಕುವ) ನಿರ್ಧಾರ ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯದ್ದು!

ರಾಷ್ಟ್ರೀಯ ರಾಜಧಾನಿ ಪ್ರದೇಶದಲ್ಲಿ ಅಂದರೆ ಹಳೆಯ ವಾಹನಗಳ ನ್ಯಾಶನಲ್ ಕ್ಯಾಪಿಟಲ್ ರಿಜನ(ಎನ್.ಸಿ.ಆರ್.)ನಲ್ಲಿ ಹಳೆಯ ವಾಹನಗಳ ನಿಷೇಧದ ನಿರ್ಧಾರವನ್ನು ಸರಕಾರವಲ್ಲ, ಬದಲಿಗೆ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ತೆಗೆದುಕೊಂಡಿದೆ ಎಂದು ಗಡ್ಕರಿ ಮತ್ತೊಂದು ಪ್ರಶ್ನೆಗೆ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ. ‘ಸರಕಾರದ ವಾಹನ ಸ್ಕ್ರ್ಯಾಪಿಂಗ್ (ಗುಜರಿಗೆ ಹಾಕುವ) ನೀತಿಯಲ್ಲಿ 15 ವರ್ಷ ಹಳೆಯ ವಾಹನಗಳ ಬಳಕೆಗೆ ನಿಷೇಧದ ನಿರ್ಧಾರವನ್ನು ಸೇರಿಸಲಾಗಿಲ್ಲ’ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಹಸಿರು ನ್ಯಾಯಮಂಡಳಿಯು 2015ರಲ್ಲಿ ನೀಡಿದ ಆದೇಶವನ್ನು ಪಾಲಿಸುವಂತೆ, ಎನ್‌.ಸಿ.ಆರ್‌. ನಲ್ಲಿ 10 ವರ್ಷಕ್ಕಿಂತ ಹಳೆಯ ಡೀಸೆಲ್ ವಾಹನಗಳು ಮತ್ತು 15 ವರ್ಷಕ್ಕಿಂತ ಹಳೆಯ ಪೆಟ್ರೋಲ್ ವಾಹನಗಳನ್ನು ಚಲಾಯಿಸಬಾರದು ಎಂದು ಸರ್ವೋಚ್ಚ ನ್ಯಾಯಾಲಯ ನಿರ್ದೇಶಿಸಿದೆ.