ಮುಂಬಯಿಯ 2006ರ ಸರಣಿ ಬಾಂಬ್ ಸ್ಫೋಟ ಪ್ರಕರಣ ಉಚ್ಚ ನ್ಯಾಯಾಲಯದಿಂದ 11 ದೋಷಿಗಳ ಖುಲಾಸೆ !

  • ಅಪೂರ್ಣ ವಾದ, ಸರಿಯಾದ ಪುರಾವೆಗಳ ಕೊರತೆಯೇ ಈ ತೀರ್ಪಿಗೆ ಕಾರಣ

  • ಬಾಂಬ್ ಸ್ಫೋಟದಲ್ಲಿ 209 ಜನರ ಸಾವು, 800ಕ್ಕೂ ಹೆಚ್ಚು ಜನರಿಗೆ ಗಾಯ

ಮುಂಬಯಿ – 2006ರಲ್ಲಿ ಮುಂಬಯಿಯಲ್ಲಿ ನಡೆದ ಬಹುಚರ್ಚಿತ ಬಾಂಬ್ ಸ್ಫೋಟ ಪ್ರಕರಣದಲ್ಲಿ ಮುಂಬಯಿ ಉಚ್ಚ ನ್ಯಾಯಾಲಯ ಜುಲೈ 21ರಂದು ನಡೆದ ವಿಚಾರಣೆಯಲ್ಲಿ ಎಲ್ಲಾ 12 ದೋಷಿಗಳನ್ನು ಖುಲಾಸೆ ಮಾಡಿದೆ. ಈ ಅವಧಿಯಲ್ಲಿ ಒಬ್ಬ ದೋಷಿ ಮೃತಪಟ್ಟಿದ್ದು, 11 ಜನರು ಬಿಡುಗಡೆಗೊಳ್ಳಲಿದ್ದಾರೆ. ನ್ಯಾಯಮೂರ್ತಿ ಅನಿಲ್ ಕಿಲೋರ್ ಮತ್ತು ನ್ಯಾಯಮೂರ್ತಿ ಎಸ್. ಚಾಂಡಕ್ ಅವರ ಪೀಠವು ಈ ತೀರ್ಪು ನೀಡಿದೆ. ಈ ಹಿಂದೆ ಕೆಳ ನ್ಯಾಯಾಲಯವು ಫೈಸಲ್ ಶೇಖ್, ಆಸಿಫ್ ಖಾನ್, ಕಮಲ್ ಅನ್ಸಾರಿ, ಎಹತೇಶಾಂ ಸಿದ್ದಿಕಿ, ನವೀದ್ ಖಾನ್ ಅವರಿಗೆ ಮರಣದಂಡನೆ ಶಿಕ್ಷೆ ಮತ್ತು ಉಳಿದ 7 ಆರೋಪಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿತ್ತು; ಆದರೆ ಮುಂಬಯಿ ಉಚ್ಚ ನ್ಯಾಯಾಲಯ ಈ ತೀರ್ಪನ್ನು ರದ್ದುಗೊಳಿಸಿ 11 ಆರೋಪಿಗಳನ್ನು ನಿರ್ದೋಷಿ ಎಂದು ಬಿಡುಗಡೆ ಮಾಡಿದೆ.

1. ಸರಣಿ ಬಾಂಬ್ ಸ್ಫೋಟಗಳಲ್ಲಿ 209 ಜನರು ಸಾವನ್ನಪ್ಪಿದ್ದರು ಮತ್ತು 800 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು. ಮುಂಬಯಿಯ ಲೋಕಲ್ ರೈಲುಗಳಲ್ಲಿ 11 ನಿಮಿಷಗಳಲ್ಲಿ 7 ಸ್ಥಳಗಳಲ್ಲಿ ಸ್ಫೋಟಗಳು ಸಂಭವಿಸಿದ್ದವು. ಚರ್ಚ್‌ಗೇಟ್‌ ನಿಂದ ಬೋರಿವಲಿ ನಿಲ್ದಾಣಗಳ ನಡುವೆ ಈ ಸ್ಫೋಟಗಳು ನಡೆದಿದ್ದವು.

2. ಈ ಸ್ಫೋಟಗಳಿಗೆ ‘ಕುಕ್ಕರ್ ಬಾಂಬ್‌’ ಗಳನ್ನು ಅಂದರೆ ಕುಕ್ಕರ್‌ ಗಳಲ್ಲಿ ಆಧುನಿಕ ಸ್ಫೋಟಕಗಳನ್ನು ಇರಿಸಿ ಸ್ಫೋಟಗಳನ್ನು ನಡೆಸಲಾಗಿತ್ತು. ಮುಂಬಯಿ ಲೋಕಲ್ ರೈಲುಗಳಲ್ಲಿ ಸಂಜೆ ವೇಳೆ ಜನದಟ್ಟಣೆ ಹೆಚ್ಚಾಗಿರುವುದರಿಂದ ಗರಿಷ್ಠ ಪ್ರಾಣಹಾನಿಯ ಉದ್ದೇಶದಿಂದಲೇ ಈ ಬಾಂಬ್ ಸ್ಫೋಟಗಳನ್ನು ನಡೆಸಲಾಗಿತ್ತು.

3. ತನಿಖೆಯ ನಂತರ, ಈ ಸ್ಫೋಟಗಳನ್ನು ಲಷ್ಕರ್-ಎ-ತೋಯ್ಬಾ ಮತ್ತು ಸಿಮಿ ಭಯೋತ್ಪಾದಕ ಸಂಘಟನೆಗಳು ನಡೆಸಿವೆ ಎಂದು ತೀರ್ಮಾನಿಸಲಾಗಿತ್ತು.

4.ಉಚ್ಚ ನ್ಯಾಯಾಲಯಕ್ಕೆ ಬಹುತೇಕ ಎಲ್ಲಾ ಸರಕಾರಿ ನ್ಯಾಯವಾದಿಗಳ ವಾದಗಳು ಅಪೂರ್ಣವೆಂದು ಕಂಡುಬಂದಿವೆ. ಪೊಲೀಸರು ಮತ್ತು ತನಿಖಾ ಸಂಸ್ಥೆಗಳು ಈ ಪ್ರಕರಣದಲ್ಲಿ ನ್ಯಾಯಾಲಯಕ್ಕೆ ಸರಿಯಾದ ಪುರಾವೆಗಳನ್ನು ಸಲ್ಲಿಸಲು ವಿಫಲವಾದ ಕಾರಣ 11 ಆರೋಪಿಗಳನ್ನು ನಿರ್ದೋಷಿ ಎಂದು ಬಿಡುಗಡೆ ಮಾಡಲಾಗಿದೆ.

5. ಉಚ್ಚ ನ್ಯಾಯಾಲಯ ದಲ್ಲಿ ವಿಚಾರಣೆ ನಡೆಯುತ್ತಿದ್ದಾಗ ಎಲ್ಲಾ 12 ರಲ್ಲಿ 11 ಆರೋಪಿಗಳು ಯೆರವಾಡ, ನಾಸಿಕ್, ಅಮರಾವತಿ ಮತ್ತು ನಾಗ್ಪುರ ಕಾರಾಗೃಹಗಳಿಂದ ವಿಡಿಯೋ ಕಾನ್ಫರೆನ್ಸ್ ಮೂಲಕ ಹಾಜರಿದ್ದರು. 19 ವರ್ಷಗಳ ಸುದೀರ್ಘ ನ್ಯಾಯಾಲಯದ ವಿಚಾರಣೆಯ ನಂತರ ಕೋರ್ಟ್ ಈ ತೀರ್ಪನ್ನು ನೀಡಿದೆ.

6. ಮುಂಬಯಿ ಪೊಲೀಸರ ತನಿಖೆಯ ಬಗ್ಗೆ ನ್ಯಾಯಾಲಯವು ಪ್ರಶ್ನಾರ್ಥಕ ಚಿಹ್ನೆಗಳನ್ನು ಎತ್ತಿದೆ.

  • ಭಯೋತ್ಪಾದಕರಿಗೆ ಗಲ್ಲು ಶಿಕ್ಷೆಯಾಗಲೇ ಬೇಕು, ಮುಂಬಯಿ ಜನರಿಗೆ ನ್ಯಾಯ ಸಿಗಲೇಬೇಕು!

  • ಕಿರಿಟ್ ಸೋಮಯ್ಯ ಅವರಿಂದ ಮುಖ್ಯಮಂತ್ರಿಗಳಿಗೆ ಬೇಡಿಕೆ!

ಭಾಜಪ ನಾಯಕ ಮತ್ತು ಮಾಜಿ ಸಂಸದ ಕಿರಿಟ್ ಸೋಮಯ್ಯ ಈ ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಿದ್ದು, “ಮುಂಬಯಿ ಉಚ್ಚ ನ್ಯಾಯಾಲಯದ ಈ ತೀರ್ಪಿನಿಂದ ತೀವ್ರ ಆಘಾತವಾಗಿದೆ. ಖಂಡಿತವಾಗಿಯೂ 2006ರ ತನಿಖೆ, ನಂತರ ನ್ಯಾಯಾಲಯದಲ್ಲಿನ ಪ್ರಾತಿನಿಧ್ಯ ಮತ್ತು ನ್ಯಾಯಾಲಯದ ಪ್ರಸ್ತುತಿಯಲ್ಲಿ ನ್ಯೂನತೆಗಳು ಉಳಿದಿರಬಹುದು; ಆದರೆ ಮುಂಬಯಿ ಜನರಿಗೆ ನ್ಯಾಯ ಬೇಕಿದೆ. ಭಯೋತ್ಪಾದಕರು ಗಲ್ಲು ಶಿಕ್ಷೆಗೆ ಒಳಗಾಗಲೇಬೇಕು. ನಾನು ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್‌ ಅವರಿಗೆ ತನಿಖಾ ಸಂಸ್ಥೆ ಮತ್ತು ಕಾನೂನು ತಂಡವನ್ನು ರಚಿಸಿ, ಸರ್ವೋಚ್ಚ ನ್ಯಾಯಾಲಯಕ್ಕೆ ಹೋಗುವಂತೆ ಮನವಿ ಮಾಡಿದ್ದೇನೆ. ಮುಂಬಯಿ ಜನರಿಗೆ ನ್ಯಾಯ ಸಿಗಲೇಬೇಕು” ಎಂದವರು ಆಗ್ರಹಿಸಿದರು.

ಮುಂಬಯಿ ಉಚ್ಚ ನ್ಯಾಯಾಲಯದ ತೀರ್ಪಿನ ಮೌಲ್ಯಮಾಪನ ಮಾಡಬೇಕಾಗುತ್ತದೆ! – ಉಜ್ವಲ್ ನಿಕಮ್, ಹಿರಿಯ ನ್ಯಾಯವಾದಿ ಮತ್ತು ಭಾಜಪ ಸಂಸದ

ಹಿರಿಯ ನ್ಯಾಯವಾದಿ ಮತ್ತು ಭಾಜಪ ಸಂಸದ ಉಜ್ವಲ್ ನಿಕಮ್ ಅವರು, “ಮುಂಬಯಿ ಲೋಕಲ್ ಬಾಂಬ್ ಸ್ಫೋಟದಲ್ಲಿ ಎಲ್ಲಾ ಆರೋಪಿಗಳು ನಿರ್ದೋಷಿ ಎಂದು ಬಿಡುಗಡೆಯಾಗಿರುವುದು ಒಬ್ಬ ನಾಗರಿಕನಾಗಿ ನನಗೆ ದುಃಖ ತಂದಿದೆ ಮತ್ತು ಇದು ಎಲ್ಲರಿಗೂ ದುಃಖವಾಗಿರುತ್ತದೆ ಎಂಬುದರಲ್ಲಿ ಸಂದೇಹವಿಲ್ಲ. ಪ್ರಶ್ನೆಯೆಂದರೆ, ಸರಕಾರವು ಈಗ ಈ ತೀರ್ಪನ್ನು ಮತ್ತೊಮ್ಮೆ ಪರಿಶೀಲಿಸಿ ಸರ್ವೋಚ್ಚ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಬೇಕಾಗುತ್ತದೆ; ಆದರೆ ಮುಂಬಯಿ ಉಚ್ಚ ನ್ಯಾಯಾಲಯದಲ್ಲಿ ಈ ತೀರ್ಪಿಗೆ ತಡೆ ನೀಡಲು ಮನವಿ ಮಾಡಿದ್ದರೆ, ಆರೋಪಿಗಳಿಗೆ ತಕ್ಷಣವೇ ಬಿಡುಗಡೆಯಾಗುವುದಿಲ್ಲ; ಆದರೆ ಈ ರೀತಿ ಏನೂ ಮಾಡದಿದ್ದರೆ, ಸರಕಾರವು ಈ ಬಗ್ಗೆ ಅಂತರ್ಮುಖತೆಯಿಂದ ಯೋಚಿಸಬೇಕಾಗುತ್ತದೆ. ಹಾಗೆಯೇ, ನಿರ್ದೋಷಮುಕ್ತ ಬಿಡುಗಡೆ ವಿರುದ್ಧದ ಮೇಲ್ಮನವಿ ಮತ್ತು ಶಿಕ್ಷೆ ವಿರುದ್ಧದ ಮೇಲ್ಮನವಿಯನ್ನು ತಕ್ಷಣವೇ ನಡೆಸಬೇಕಾಗುತ್ತದೆ. ಕೆಲವು ಪ್ರಕರಣಗಳಲ್ಲಿ ಆರೋಪಿಗಳು ಸೆಷನ್ಸ್ ನ್ಯಾಯಾಲಯದಲ್ಲಿ ನಿರ್ದೋಷಿ ಎಂದು ಬಿಡುಗಡೆಯಾಗುತ್ತಾರೆ, ಅವರ ವಿರುದ್ಧ ಸರಕಾರ ಮೇಲ್ಮನವಿ ಸಲ್ಲಿಸುತ್ತದೆ; ಆದರೆ ಅದರ ವಿಚಾರಣೆ ಹಲವು ವರ್ಷಗಳ ಕಾಲ ನಡೆಯುವುದಿಲ್ಲ ಮತ್ತು ಆ ತೀರ್ಪು ಬದಲಾದಾಗ ಆಘಾತವಾಗಬಹುದು. ಆರೋಪಿಗಳಿಗೆ ಶಿಕ್ಷೆಯಾದ ಅಪರಾಧಗಳಲ್ಲಿ, ಮೇಲ್ಮನವಿ ತಕ್ಷಣವೇ ನಡೆಯಬೇಕು. ಪರಿಣಾಮವಾಗಿ, ಸರಕಾರವು ತಕ್ಷಣವೇ ಸರ್ವೋಚ್ಚ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಬೇಕು ಮತ್ತು ಮುಂಬಯಿ ಉಚ್ಚನ್ಯಾಯಾಲಯದ ತೀರ್ಪನ್ನು ಮೌಲ್ಯಮಾಪನ ಮಾಡಬೇಕಾಗುತ್ತದೆ” ಎಂದು ಹೇಳಿದ್ದಾರೆ.

ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್‌ನಲ್ಲಿ ತೀರ್ಪನ್ನು ಪ್ರಶ್ನಿಸಬೇಕು!

ಮುಂಬಯಿ – 2006 ರಲ್ಲಿ ಮಹಾರಾಷ್ಟ್ರ ಭಯೋತ್ಪಾದನಾ ನಿಗ್ರಹ ದಳದ ಮುಖ್ಯಸ್ಥರಾಗಿದ್ದ ಕೆ.ಪಿ.ರಘುವಂಶಿ ಅವರು ಮುಂಬೈ ಲೋಕಲ್ ಬಾಂಬ್ ಸ್ಫೋಟಗಳ ತೀರ್ಪಿನ ಬಗ್ಗೆ ಪ್ರತಿಕ್ರಿಯಿಸುತ್ತಾ, ಮಹಾರಾಷ್ಟ್ರ ಸರ್ಕಾರವು ಮುಂಬೈ ಹೈಕೋರ್ಟ್ ತೀರ್ಪಿನ ವಿರುದ್ಧ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಬೇಕು ಎಂದು ಹೇಳಿದರು.

ನಾವು ಅತ್ಯಂತ ಬಲವಾದ ಪ್ರಕರಣವನ್ನು ಸಿದ್ಧಪಡಿಸಿದ್ದೆವು, ಅದರ ಆಧಾರದ ಮೇಲೆ ವಿಶೇಷ ನ್ಯಾಯಾಲಯವು ಆರೋಪಿಗಳನ್ನು ದೋಷಿ ಎಂದು ಘೋಷಿಸಿತ್ತು ಎಂದು ರಘುವಂಶಿ ಹೇಳಿದರು. ಈಗ ಭಯೋತ್ಪಾದನಾ ನಿಗ್ರಹ ದಳವು ಈ ತೀರ್ಪನ್ನು ಅಧ್ಯಯನ ಮಾಡಿ, ಸರ್ಕಾರಿ ವಕೀಲರು ಮತ್ತು ಇತರ ಕಾನೂನು ತಜ್ಞರ ಸಲಹೆಯೊಂದಿಗೆ ಮೇಲ್ಮನವಿ ಬಗ್ಗೆ ನಿರ್ಧರಿಸುತ್ತದೆ. ನನ್ನ ಪ್ರಕಾರ, ಸರ್ಕಾರ ಖಂಡಿತವಾಗಿಯೂ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಬೇಕು. ನಾವು ಉತ್ತಮ ತನಿಖೆ ನಡೆಸಿದ್ದೆವು ಮತ್ತು ಸಾಕಷ್ಟು ಪುರಾವೆಗಳನ್ನು ಸಂಗ್ರಹಿಸಿದ್ದೆವು. ಇದರಿಂದಾಗಿಯೇ ವಿಶೇಷ ನ್ಯಾಯಾಲಯವು ಆ ಆರೋಪಿಗಳನ್ನು ದೋಷಿ ಎಂದು ಘೋಷಿಸಿತ್ತು. ನಾನು ಈ ತಂಡದಿಂದ ನಿವೃತ್ತನಾಗಿ 10 ವರ್ಷಗಳಿಗಿಂತ ಹೆಚ್ಚು ಸಮಯ ಕಳೆದಿದೆ. ಈಗ ಪ್ರಸ್ತುತ ತಂಡದ ಮುಖ್ಯಸ್ಥರು ಮತ್ತು ಅವರ ಅಧಿಕಾರಿಗಳು ಈ ತೀರ್ಪನ್ನು ವಿವರವಾಗಿ ಅಧ್ಯಯನ ಮಾಡಿ ಮುಂದಿನ ನಿರ್ಧಾರ ತೆಗೆದುಕೊಳ್ಳುತ್ತಾರೆ; ಆದರೆ ನಾನು ದೃಢವಾಗಿ ಹೇಳುತ್ತೇನೆ, ಸರ್ಕಾರ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಲೇಬೇಕು ಎಂದು ರಘುವಂಶಿ ಅವರು ಆಗ್ರಹಿಸಿದರು.

ಓದಿರಿ – ವಿಶೇಷ ಸಂಪಾದಕೀಯ : ಜನತೆಗೆ ‘ನ್ಯಾಯ’ ಸಿಗುವುದೇ?