ಸಂಸತ್ತಿನ ಮಳೆಗಾಲದ ಅಧಿವೇಶನದ ಮೊದಲ ದಿನವೇ ‘ಆಪರೇಷನ್ ಸಿಂದೂರ್’ ಕುರಿತು ಗದ್ದಲ

ನವದೆಹಲಿ – ಸಂಸತ್ತಿನ ಮಳೆಗಾಲದ ಅಧಿವೇಶನದ ಮೊದಲ ದಿನವೇ ‘ಆಪರೇಷನ್ ಸಿಂದೂರ್’ ಕುರಿತು ಗದ್ದಲ ಉಂಟಾಯಿತು. ಪಹಲ್ಗಾಮ್‌ ನಲ್ಲಿ ನಡೆದ ಭಯೋತ್ಪಾದಕ ದಾಳಿ ಮತ್ತು ‘ಆಪರೇಷನ್ ಸಿಂದೂರ್’ ಕುರಿತು ಚರ್ಚಿಸಬೇಕು ಎಂದು ವಿರೋಧ ಪಕ್ಷಗಳು ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಘೋಷಣೆಗಳನ್ನು ಕೂಗಿದವು. ಇದರಿಂದಾಗಿ ಎರಡೂ ಸದನಗಳ ಕಲಾಪಗಳನ್ನು ಮುಂದೂಡಲಾಯಿತು.

ಲೋಕಸಭೆಯ ಸ್ಪೀಕರ್ ಓಂ ಬಿರ್ಲಾ ಅವರು, “ಪ್ರಶ್ನೋತ್ತರ ಅವಧಿಯ ನಂತರ ನಾವು ‘ಆಪರೇಷನ್ ಸಿಂದೂರ್’ ಕುರಿತು ಚರ್ಚಿಸುತ್ತೇವೆ. ಸರಕಾರವು ಪ್ರತಿಯೊಂದು ಪ್ರಶ್ನೆಗೂ ಉತ್ತರಿಸುತ್ತದೆ. ಈ ವಿಧಾನ ಸರಿಯಲ್ಲ. ಮೊದಲ ದಿನವೇ ಈ ವರ್ತನೆ ಸರಿಯಲ್ಲ” ಎಂದರು.

ಸರಕಾರ ಉತ್ತರ ನೀಡಬೇಕು! – ಕಾಂಗ್ರೆಸ್

ರಾಜ್ಯಸಭೆಯಲ್ಲಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು, “ಪಹಲ್ಗಾಮ್ ದಾಳಿಯಲ್ಲಿ ಭಯೋತ್ಪಾದಕರನ್ನು ಇನ್ನೂ ಹಿಡಿದಿಲ್ಲ. ಅವರನ್ನು ಕೊಲ್ಲಲೂ ಇಲ್ಲ. ಜಮ್ಮು ಮತ್ತು ಕಾಶ್ಮೀರದಲ್ಲಿ ಗುಪ್ತಚರ ಸಂಸ್ಥೆಯ ವೈಫಲ್ಯವಿದೆ ಎಂದು ರಾಜ್ಯದ ಉಪರಾಜ್ಯಪಾಲರು ಹೇಳಿದ್ದಾರೆ. ಟ್ರಂಪ್ ಅವರು 24 ಬಾರಿ ‘ನಾವು ಭಾರತ-ಪಾಕ್ ನಡುವಿನ ಯುದ್ಧವನ್ನು ನಿಲ್ಲಿಸಿದ್ದೇವೆ’ ಎಂದು ಹೇಳಿದ್ದಾರೆ. ಈ ಎಲ್ಲದಕ್ಕೂ ಸರಕಾರ ಉತ್ತರ ನೀಡಬೇಕು” ಎಂದು ಆಗ್ರಹಿಸಿದರು.

‘ಆಪರೇಷನ್ ಸಿಂದೂರ್’ನ ಎಲ್ಲಾ ಸೂತ್ರಗಳನ್ನು ದೇಶದ ಮುಂದೆ ಇಡಲಾಗುವುದು! – ಕೇಂದ್ರ ಸರಕಾರ

ಕೇಂದ್ರ ಸಚಿವ ಜೆ.ಪಿ. ನಡ್ಡಾ ಈ ಸಂದರ್ಭದಲ್ಲಿ ಮಾತನಾಡಿ, “ಸರಕಾರ ಪಹಲ್ಗಾಮ್ ಮತ್ತು ‘ಆಪರೇಷನ್ ಸಿಂದೂರ್’ ಕುರಿತು ಚರ್ಚಿಸಲು ಬಯಸುತ್ತಿಲ್ಲ ಎಂಬ ಸಂದೇಶ ದೇಶಕ್ಕೆ ಹೋಗಬಾರದು ಎಂದು ನಾವು ಭಾವಿಸುತ್ತೇವೆ. ನಾವು ಚರ್ಚಿಸುತ್ತೇವೆ ಮತ್ತು ಅದನ್ನು ಎಲ್ಲ ಆಯಾಮಗಳಿಂದಲೂ ಮಾಡುತ್ತೇವೆ, ಎಂದು ಹೇಳಿದರು.

ಕರ್ಣಾವತಿ ವಿಮಾನ ಅಪಘಾತದ ಬಗ್ಗೆ ಕುಲಂಕುಶವಾಗಿ ಮತ್ತು ನಿಯಮಾನುಸಾರ ತನಿಖೆ! – ಕೇಂದ್ರ

ಕರ್ಣಾವತಿ ವಿಮಾನ ಅಪಘಾತದ ಕುರಿತು ನಾಗರಿಕ ವಿಮಾನಯಾನ ಸಚಿವ ರಾಮ ಮೋಹನ್ ನಾಯ್ಡು ಅವರು ರಾಜ್ಯಸಭೆಯಲ್ಲಿ, “ಪ್ರಸ್ತುತ ಅಪಘಾತದ ಸಂಪೂರ್ಣ ಸತ್ಯವು ತನಿಖೆಯ ಅಂತಿಮ ವರದಿ ಬಂದ ನಂತರವೇ ಹೊರಬೀಳಲಿದೆ. ಏರ್‌ ಕ್ರಾಫ್ಟ್ ಆಕ್ಸಿಡೆಂಟ್ ಇನ್ವೆಸ್ಟಿಗೇಷನ್ ಬ್ಯೂರೋ ಸಂಪೂರ್ಣವಾಗಿ ಕುಲಂಕುಶವಾಗಿ, ಪಾರದರ್ಶಕವಾಗಿ ಮತ್ತು ನಿಯಮಾನುಸಾರ ಕೆಲಸ ಮಾಡುತ್ತಿದೆ. ಕೆಲವು ಭಾರತೀಯ ಮತ್ತು ವಿದೇಶಿ ಮಾಧ್ಯಮಗಳು ಈ ಅಪಘಾತದ ಕುರಿತು ತಮ್ಮದೇ ಆದ ಕಥೆಗಳು ಮತ್ತು ಅಭಿಪ್ರಾಯಗಳನ್ನು ಪ್ರಸಾರ ಮಾಡುತ್ತಿವೆ; ಆದರೆ ಸರಕಾರವು ಸತ್ಯಕ್ಕೆ ಮಾತ್ರ ಬದ್ಧವಾಗಿರಲು ಬಯಸುತ್ತದೆ. ಈ ಪ್ರಕರಣವು ಪೈಲಟ್‌ ಗೆ, ಏರ್ ಇಂಡಿಯಾಗೆ ಅಥವಾ ಬೋಯಿಂಗ್ ಕಂಪನಿಗೆ ಸಂಬಂಧಿಸಿರಲಿ, ಸರಕಾರ ಯಾರ ಪರವೂ ನಿಲ್ಲುವುದಿಲ್ಲ. ತನಿಖೆ ಪೂರ್ಣಗೊಂಡ ನಂತರವೇ ಸತ್ಯ ಹೊರಬೀಳುತ್ತದೆ” ಎಂದು ತಿಳಿಸಿದರು.

32 ದಿನಗಳ ಮಳೆಗಾಲದ ಅಧಿವೇಶನ

ಸಂಸತ್ತಿನ ಮಳೆಗಾಲದ ಅಧಿವೇಶನವು ಜುಲೈ 21 ರಿಂದ ಆಗಸ್ಟ್ 21 ರವರೆಗೆ 32 ದಿನಗಳ ಕಾಲ ನಡೆಯಲಿದೆ. ಇದರಲ್ಲಿ ಒಟ್ಟು 18 ಸಭೆಗಳು ನಡೆಯಲಿವೆ ಮತ್ತು 15 ಕ್ಕೂ ಹೆಚ್ಚು ಮಸೂದೆಗಳನ್ನು ಮಂಡಿಸಲಾಗುವುದು. ಸ್ವಾತಂತ್ರ್ಯ ದಿನಾಚರಣೆಯ ಕಾರಣ ಆಗಸ್ಟ್ 13 ಮತ್ತು 14 ರಂದು ಸಂಸತ್ತಿನ ಕಲಾಪ ನಡೆಯುವುದಿಲ್ಲ.