Space Mission Sudhanshu Shukla : ಭಾರತೀಯ ಗಗನಯಾತ್ರಿ ಶುಭಾಂಶು ಶುಕ್ಲಾ ಸೇರಿದಂತೆ 4 ಮಂದಿ ಬಾಹ್ಯಾಕಾಶಕ್ಕೆ ಪ್ರಯಾಣ

ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕಾಗಿ ‘ಆಕ್ಸಿಯೋಮ್-4’ ಮಿಷನ್

ಫ್ಲೋರಿಡಾ (ಅಮೆರಿಕ) – ಭಾರತೀಯ ಗಗನಯಾತ್ರಿ ಶುಭಾಂಶು ಶುಕ್ಲಾ ಅವರು ಜೂನ್ 25 ರಂದು ಇಲ್ಲಿನ ಅಮೆರಿಕದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ‘ನಾಸಾ’ದ ಕೆನಡಿ ಬಾಹ್ಯಾಕಾಶ ಕೇಂದ್ರದಿಂದ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಪ್ರಯಾಣ ಬೆಳೆಸಿದರು. ಎಲ್ಲಾ ಗಗನಯಾತ್ರಿಗಳು ‘ಸ್ಪೇಸ್ಎಕ್ಸ್’ ಸಂಸ್ಥೆಯ ‘ಫಾಲ್ಕನ್-9’ ರಾಕೆಟ್‌ಗೆ ಜೋಡಿಸಲಾದ ‘ಡ್ರ್ಯಾಗನ್ ಕ್ಯಾಪ್ಸೂಲ್’ ಮೂಲಕ ಉಡಾವಣೆಗೊಂಡರು. ಸುಮಾರು ಇಪ್ಪತ್ತೆಂಟೂವರೆ ಗಂಟೆಗಳ ಪ್ರಯಾಣದ ನಂತರ ಶುಭಾಂಶು ಶುಕ್ಲಾ ಮತ್ತು ಇತರ ಮೂವರು ಗಗನಯಾತ್ರಿಗಳು ಈ ಬಾಹ್ಯಾಕಾಶ ನಿಲ್ದಾಣವನ್ನು ತಲುಪಲಿದ್ದಾರೆ. ಈ ಮಿಷನ್‌ಗೆ ‘ಆಕ್ಸಿಯೋಮ್-4’ ಎಂದು ಹೆಸರಿಸಲಾಗಿದೆ. ಭಾರತ ಈ ಮಿಷನ್‌ಗಾಗಿ ಇಲ್ಲಿಯವರೆಗೆ ಸುಮಾರು 548 ಕೋಟಿ ರೂಪಾಯಿ ವೆಚ್ಚ ಮಾಡಿದೆ.

ಈ ಮಿಷನ್ ನಲ್ಲಿ ಶುಭಾಂಶು ಶುಕ್ಲಾ ಅವರೊಂದಿಗೆ ಕಮಾಂಡರ್ ಪೆಗಿ ವಿಟ್ಸನ್ (ಅಮೆರಿಕ), ‘ಮಿಷನ್ ಸ್ಪೆಷಲಿಸ್ಟ್’ ಸ್ಲಾವೋಸ್ ಉಜನಾನ್ಸ್ಕಿ (ಪೋಲೆಂಡ್) ಮತ್ತು ‘ಮಿಷನ್ ಸ್ಪೆಷಲಿಸ್ಟ್’ ಟಿಬೋರ ಕಾಪು (ಹಂಗೇರಿ) ಕೂಡ ಇದ್ದಾರೆ. ಈ ಮಿಷನ್ ಮೊದಲು ಜೂನ್ 8 ರಂದು ಪ್ರಾರಂಭವಾಗಬೇಕಿತ್ತು; ಆದರೆ ಪ್ರತಿಕೂಲ ಹವಾಮಾನದಿಂದಾಗಿ ಜೂನ್ 10 ರವರೆಗೆ ಮುಂದೂಡಲ್ಪಟ್ಟಿತ್ತು. ಅಂತಿಮವಾಗಿ ಜೂನ್ 25 ರಂದು ಇದು ಯಶಸ್ವಿಯಾಗಿ ನಡೆಯಿತು.

ನನ್ನ ಹೆಗಲ ಮೇಲೆ ನನ್ನ ತ್ರಿವರ್ಣ ಧ್ವಜವಿದೆ! – ಶುಭಾಂಶು ಶುಕ್ಲಾ

ಬಾಹ್ಯಾಕಾಶ ತಲುಪಿದ ನಂತರ ಶುಭಾಂಶು ಶುಕ್ಲಾ ಅವರು, “ನಮಸ್ಕಾರ, ನನ್ನ ಆತ್ಮೀಯ ದೇಶಬಾಂಧವರೇ! ಎಂಥಾ ಪಯಣ! 41 ವರ್ಷಗಳ ನಂತರ (1984 ರಲ್ಲಿ ರಾಕೇಶ್ ಶರ್ಮಾ ಅವರು ಭಾರತದ ಮೊದಲ ಗಗನಯಾತ್ರಿಯಾಗಿದ್ದರು, ಅವರು ಬಾಹ್ಯಾಕಾಶಕ್ಕೆ ತೆರಳಿದ್ದರು.) ನಾವು ಮತ್ತೊಮ್ಮೆ ಬಾಹ್ಯಾಕಾಶಕ್ಕೆ ಮರಳಿದ್ದೇವೆ. ಇದು ಒಂದು ಅದ್ಭುತ ಪಯಣವಾಗಿದೆ. ನಾವು ಪ್ರತಿ ಸೆಕೆಂಡಿಗೆ 7.5 ಕಿಲೋಮೀಟರ್ ವೇಗದಲ್ಲಿ ಭೂಮಿಯ ಸುತ್ತ ಪ್ರದಕ್ಷಿಣೆ ಹಾಕುತ್ತಿದ್ದೇವೆ. ನನ್ನ ಹೆಗಲ ಮೇಲೆ ನನ್ನ ತ್ರಿವರ್ಣ ಧ್ವಜ ಇದೆ, ಅದು ನಾನು ನಿಮ್ಮೆಲ್ಲರೊಂದಿಗಿದ್ದೇನೆ ಎಂದು ನನಗೆ ಹೇಳುತ್ತಿದೆ. ನನ್ನ ಈ ಪಯಣ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದ ಪಯಣದ ಆರಂಭವಲ್ಲ, ಬದಲಾಗಿ ಭಾರತದ ಮಾನವ ಬಾಹ್ಯಾಕಾಶ ಕಾರ್ಯಕ್ರಮದ ಆರಂಭವಾಗಿದೆ. ನೀವೆಲ್ಲರೂ ಈ ಪಯಣದ ಭಾಗವಾಗಬೇಕು ಎಂದು ನಾನು ಬಯಸುತ್ತೇನೆ. ನಿಮ್ಮ ಎದೆಯೂ ಹೆಮ್ಮೆಯಿಂದ ಉಬ್ಬಬೇಕು. ಬನ್ನಿ, ನಾವೆಲ್ಲರೂ ಒಟ್ಟಾಗಿ ಭಾರತದ ಮಾನವ ಬಾಹ್ಯಾಕಾಶ ಕಾರ್ಯಕ್ರಮವನ್ನು ಪ್ರಾರಂಭಿಸೋಣ. ಜೈ ಹಿಂದ್! ಜೈ ಭಾರತ!”, ಎಂದು ಹೇಳಿದ್ದಾರೆ.

ಮಿಷನ್ ನ ಉದ್ದೇಶಗಳು

‘ಆಕ್ಸಿಯೋಮ್-4’ ಮಿಷನ್ ನ ಮುಖ್ಯ ಉದ್ದೇಶ ಬಾಹ್ಯಾಕಾಶದಲ್ಲಿ ಸಂಶೋಧನೆ ಮಾಡುವುದು ಮತ್ತು ಹೊಸ ತಂತ್ರಜ್ಞಾನವನ್ನು ಪರೀಕ್ಷಿಸುವುದಾಗಿದೆ. ಈ ಅಭಿಯಾನವು ಖಾಸಗಿ ಬಾಹ್ಯಾಕಾಶ ಪ್ರಯಾಣವನ್ನು ಉತ್ತೇಜಿಸಲು ಸಹ ಉದ್ದೇಶಿಸಿದೆ. ಇದು ಭವಿಷ್ಯದಲ್ಲಿ ಒಂದು ವಾಣಿಜ್ಯ ಬಾಹ್ಯಾಕಾಶ ನಿಲ್ದಾಣವನ್ನು ನಿರ್ಮಿಸುವ ಯೋಜನೆಯ ಒಂದು ಭಾಗವಾಗಿದೆ.

ಮಿಷನ್ ಮೂಲಕ ನಡೆಯುವ ಪ್ರಯೋಗಗಳು

1. ಸೂಕ್ಷ್ಮ ಗುರುತ್ವಾಕರ್ಷಣೆಯಲ್ಲಿ ವಿವಿಧ ಪ್ರಯೋಗಗಳನ್ನು ಮಾಡುವುದು.

2. ಬಾಹ್ಯಾಕಾಶದಲ್ಲಿ ಹೊಸ ತಂತ್ರಜ್ಞಾನದ ಪರೀಕ್ಷೆ ಮತ್ತು ಅಭಿವೃದ್ಧಿ.

3. ವಿವಿಧ ದೇಶಗಳ ಗಗನಯಾತ್ರಿಗಳಿಗೆ ಒಂದು ವೇದಿಕೆಯನ್ನು ಒದಗಿಸುವುದು.

4. ಬಾಹ್ಯಾಕಾಶದಿಂದ ಭೂಮಿಯ ಮೇಲಿನ ಜನರಲ್ಲಿ ಸ್ಫೂರ್ತಿ ಮತ್ತು ಅರಿವನ್ನು ಮೂಡಿಸುವುದು.

ಶುಭಾಂಶು ಶುಕ್ಲಾ ಯಾರು?

ಶುಭಾಂಶು ಶುಕ್ಲಾ ಅವರು ಭಾರತೀಯ ವಾಯುಪಡೆಯಲ್ಲಿ ಗ್ರೂಪ್ ಕ್ಯಾಪ್ಟನ್ ಆಗಿದ್ದಾರೆ. ಅವರು ಲಕ್ಷಣಪುರಿಯ (ಉತ್ತರಪ್ರದೇಶ) ನಿವಾಸಿಯಾಗಿದ್ದಾರೆ. ಜೂನ್ 2006 ರಲ್ಲಿ ಅವರು ಭಾರತೀಯ ವಾಯುಪಡೆಯಲ್ಲಿ ಯುದ್ಧ ವಿಮಾನಗಳ ಪೈಲಟ್ ಆಗಿ ಸೇರಿಕೊಂಡರು. 2019 ರಲ್ಲಿ ಅವರಿಗೆ ವಿಂಗ್ ಕಮಾಂಡರ್ ಮತ್ತು ಮಾರ್ಚ್ 2024 ರಲ್ಲಿ ಗ್ರೂಪ್ ಕ್ಯಾಪ್ಟನ್ ಹುದ್ದೆಗೆ ಬಡ್ತಿ ದೊರೆತಿದೆ.