US Army Day Celebrations : ಅಮೆರಿಕಾದ ‘ಸೈನ್ಯ ದಿನ’ದ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಪಾಕ್ ಸೇನಾ ಮುಖ್ಯಸ್ಥ ಸೈಯದ್ ಅಸೀಮ್ ಮುನೀರ್ ಗೆ ಆಹ್ವಾನ!

ಅಮೆರಿಕದಿಂದ ಭಾರತದ ಗಾಯದ ಮೇಲೆ ಉಪ್ಪು ಸವರುವ ಪ್ರಕಾರ

ಅಮೆರಿಕ ಸೇನಾ ಜನರಲ್ ಮೈಕೆಲ್ ಕುರಿಲಾ ಮತ್ತು ಪಾಕಿಸ್ತಾನ ಸೇನಾ ಮುಖ್ಯಸ್ಥ ಸೈಯದ್ ಅಸಿಮ್ ಮುನೀರ್

ನವದೆಹಲಿ – ಅಮೆರಿಕಾದ ರಾಜಧಾನಿ ವಾಷಿಂಗ್ಟನ್ ಡಿ.ಸಿ.ಯಲ್ಲಿ ಜೂನ್ 14 ರಂದು ನಡೆಯಲಿರುವ 250ನೇ ‘ಸೈನ್ಯ ದಿನ’ದ ಕಾರ್ಯಕ್ರಮಕ್ಕೆ ಪಾಕಿಸ್ತಾನದ ಸೇನಾ ಮುಖ್ಯಸ್ಥ ಸೈಯದ್ ಅಸೀಮ್ ಮುನೀರ್ ಅವರನ್ನು ಮುಖ್ಯ ಅತಿಥಿಯಾಗಿ ಆಹ್ವಾನಿಸಲಾಗಿದೆ ಎಂಬುದು ಬಹಿರಂಗವಾಗಿದೆ. ಅಮೆರಿಕಾದ ಆಹ್ವಾನದ ಮೇರೆಗೆ ಮುನೀರ್ ಅವರು ಜೂನ್ 13 ರಂದೇ ಕಾರ್ಯಕ್ರಮಕ್ಕಾಗಿ ಅಮೆರಿಕಾಕ್ಕೆ ತಲುಪಲಿದ್ದಾರೆ ಎಂದು ಪಾಕಿಸ್ತಾನಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಅಮೆರಿಕಾದ ಸೇನೆಯ ಜನರಲ್ ಮೈಕಲ್ ಕುರಿಲ್ಲಾ ಅವರು, ‘ನಮ್ಮ ಭಾರತದೊಂದಿಗೆ ಸೌಹಾರ್ದ ಸಂಬಂಧಗಳಿದ್ದರೂ, ನಾವು ಪಾಕಿಸ್ತಾನದೊಂದಿಗೆ ಸಂಬಂಧವನ್ನು ಕಡಿದುಕೊಳ್ಳಲು ಸಾಧ್ಯವಿಲ್ಲ. ಭಯೋತ್ಪಾದನಾ ವಿರೋಧಿ ಕಾರ್ಯಾಚರಣೆಯಲ್ಲಿ ಪಾಕಿಸ್ತಾನ ಸಕ್ರಿಯವಾಗಿ ಸಹಕರಿಸುತ್ತಿದೆ,’ ಎಂದು ಸ್ಪಷ್ಟಪಡಿಸಿದ್ದಾರೆ.

ಪಹಲ್ಗಾಮ್ ಮೇಲಿನ ಭಯೋತ್ಪಾದಕ ದಾಳಿಯ ನಂತರ, ಭಾರತವು ಜಗತ್ತಿನಾದ್ಯಂತ ನಿಯೋಗಗಳನ್ನು ಕಳುಹಿಸಿ ಪಾಕಿಸ್ತಾನದ ನೈಜ ಬಣ್ಣವನ್ನು ಬಹಿರಂಗಪಡಿಸುತ್ತಿರುವಾಗ, ಅಮೆರಿಕಾದ ಈ ಕೃತಿಯು ಭಾರತದ ಗಾಯದ ಮೇಲೆ ಉಪ್ಪು ಸವರಿದಂತಿದೆ ಎಂಬ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.

ಇದು ಭಾರತಕ್ಕೆ ಮತ್ತೊಂದು ದೊಡ್ಡ ರಾಜತಾಂತ್ರಿಕ ಹಿನ್ನಡೆ! – ಕಾಂಗ್ರೆಸ್

ಈ ವಿಷಯದಲ್ಲಿ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ ಅವರು ಕೇಂದ್ರ ಸರಕಾರದ ವಿರುದ್ಧ ಹೌಹಾರುತ್ತಾ,

‘ಪಹಲ್ಗಾಮ್ ದಾಳಿಯ ಮೊದಲು, ಈ ವ್ಯಕ್ತಿ (ಮುನೀರ್) ಅತ್ಯಂತ ಕೆರಳಿಸುವ ಭಾಷೆಯನ್ನು ಬಳಸಿದ್ದರು. ಅಂತಿಮವಾಗಿ, ಅಮೆರಿಕಾದ ಮನಸ್ಸಿನಲ್ಲಿ ಏನಿದೆ? ಅಮೆರಿಕಾದ ಈ ಕೃತಿಯು ಭಾರತಕ್ಕೆ ಮತ್ತೊಂದು ದೊಡ್ಡ ರಾಜತಾಂತ್ರಿಕ ಹಿನ್ನಡೆಯಲ್ಲವೇ?’’ಎಂದು ಹೇಳಿದ್ದಾರೆ.

ಮುನೀರ್ ವಿರುದ್ಧ ಇಮ್ರಾನ್ ಖಾನ್ ಪಕ್ಷ ಅಮೆರಿಕಾದಲ್ಲಿ ಪ್ರತಿಭಟನೆ ನಡೆಸಲಿದೆ

ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರ ತೆಹ್ರೀಕ್-ಎ-ಇನ್ಸಾಫ್ ಪಕ್ಷವು ಮುನೀರ್ ಅವರ ಅಮೆರಿಕಾ ಭೇಟಿಯ ಸಮಯದಲ್ಲಿ ಅಲ್ಲಿ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದೆ.

ಪಕ್ಷದ ವಿದೇಶಾಂಗ ವ್ಯವಹಾರಗಳ ಕಾರ್ಯದರ್ಶಿ ಸಜ್ಜಾದ್ ಬುರ್ಕಿ ಅವರು ವಾಷಿಂಗ್ಟನ್‌ನಲ್ಲಿರುವ ಪಾಕಿಸ್ತಾನ ರಾಯಭಾರ ಕಚೇರಿಯ ಹೊರಗೆ ಪ್ರತಿಭಟನೆ ನಡೆಸುವಂತೆ ಕರೆ ನೀಡಿದ್ದಾರೆ. ಅವರು ಎಕ್ಸ್ ನಲ್ಲಿ ‘ವೈಟ್ ಹೌಸ್ ಗೆ ತಿಳಿಸಿ, ಪಾಕಿಸ್ತಾನದ ಜನರು ಈ ಸರಕಾರದೊಂದಿಗೆ ಮಾಡಿಕೊಂಡ ಯಾವುದೇ ರಾಜಿ ಒಪ್ಪಂದವನ್ನು ಸ್ವೀಕರಿಸುವುದಿಲ್ಲ.’ ಎಂದು ಬರೆದಿದ್ದಾರೆ.

ಮುನೀರ್ ಆಹ್ವಾನದ ಹಿಂದೆ ಅಮೆರಿಕಾದ ತಂತ್ರಗಾರಿಕೆ!

1. ಮುನೀರ್ ಅವರಿಗೆ ಆಹ್ವಾನ ನೀಡಲು ಚೀನಾ ಕಾರಣವಾಗಿರಬಹುದು ಎಂಬ ಚರ್ಚೆ ನಡೆಯುತ್ತಿದೆ. ಇತ್ತೀಚಿನ ದಿನಗಳಲ್ಲಿ ಪಾಕಿಸ್ತಾನ ಮತ್ತು ಚೀನಾ ಹತ್ತಿರವಾಗಿವೆ. ಮುನೀರ್ ಅವರನ್ನು ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಮಾಡುವ ಮೂಲಕ ಅಮೆರಿಕಾ ಚೀನಾದ ಪ್ರಭಾವವನ್ನು ಕಡಿಮೆ ಮಾಡಲು ಪ್ರಯತ್ನಿಸಬಹುದು.

2. ಪಾಕಿಸ್ತಾನದಲ್ಲಿ ಲಿಥಿಯಂ, ತಾಮ್ರ, ಚಿನ್ನ ಮತ್ತು ಅಪರೂಪದ ಖನಿಜಗಳ ನಿಕ್ಷೇಪಗಳಿವೆ; ಆದರೆ, ಅದಕ್ಕೆ ಅಗತ್ಯವಿರುವ ತಂತ್ರಜ್ಞಾನ ಮತ್ತು ವೆಚ್ಚದ ಕೊರತೆ ಪಾಕಿಸ್ತಾನಕ್ಕಿದೆ. ಇಂತಹ ಪರಿಸ್ಥಿತಿಯಲ್ಲಿ ಅಮೆರಿಕಾಕ್ಕೆ ಪಾಕಿಸ್ತಾನದಲ್ಲಿ ಹೂಡಿಕೆ ಮಾಡುವ ಅವಕಾಶ ಸಿಗಬಹುದು.

3. ಮೂರನೇ ಅಂಶವು ಇರಾನ್ ಎಂದು ಹೇಳಲಾಗುತ್ತದೆ. ಇರಾನ್ ಅಮೆರಿಕಾದ ಶತ್ರು. ಅದರ ಮೇಲೆ ನಿಯಂತ್ರಣ ಸಾಧಿಸಲು ಅಮೆರಿಕಾಕ್ಕೆ ಪಾಕಿಸ್ತಾನದ ಅವಶ್ಯಕತೆಯಿದೆ. ಪಾಕಿಸ್ತಾನದ ನೆಲವನ್ನು ಬಳಸಿ ಅಮೆರಿಕಾ ಇರಾನ್ ಮೇಲೆ ನಿಗಾ ಇಡಬಹುದು ಎಂದು ಹೇಳಲಾಗುತ್ತದೆ.

ಸಂಪಾದಕೀಯ ನಿಲುವು

  • ಭಾರತ ಈಗ ಪಾಕಿಸ್ತಾನದಂತೆ ಅಮೆರಿಕಾದ ನೈಜ ಬಣ್ಣವನ್ನು ಜಗತ್ತಿನೆದುರು ಬಹಿರಂಗಪಡಿಸಬೇಕು. ಅಮೆರಿಕಾ ಎಂದಿಗೂ ನಮ್ಮ ಮಿತ್ರ ರಾಷ್ಟ್ರವಾಗಿರಲಿಲ್ಲ ಮತ್ತು ಆಗುವುದಿಲ್ಲ ಎಂಬುದನ್ನು ಸರಕಾರ ಈಗಲಾದರೂ ಅರಿತುಕೊಂಡು, ಅದರಂತೆ ಅಮೆರಿಕಾದೊಂದಿಗೆ ವ್ಯವಹರಿಸಬೇಕು!
  • ಪಾಕಿಸ್ತಾನವನ್ನು ನಾಶಮಾಡುವ ಮೊದಲು, ಅಮೆರಿಕಾಕ್ಕೂ ಪಾಠ ಕಲಿಸುವುದು ಭಾರತಕ್ಕೆ ಅವಶ್ಯಕವಾಗಿದೆ. ಭಾರತದಲ್ಲಿನ ಭಯೋತ್ಪಾದನೆಗೆ ಒಂದು ರೀತಿಯಲ್ಲಿ ಅಮೆರಿಕಾ ಕೂಡಾ ಕಾರಣವಾಗಿದೆ ಎಂಬುದನ್ನು ಈಗ ಭಾರತೀಯರೊಂದಿಗೆ ಜಗತ್ತಿಗೆ ತಿಳಿಸುವುದು ಅಗತ್ಯವಾಗಿದೆ!