‘ಸನಾತನ ರಾಷ್ಟ್ರ ಶಂಖನಾದ’ ಮಹೋತ್ಸವಕ್ಕೆ 20 ಸಾವಿರ ಭಕ್ತರ ಉಪಸ್ಥಿತಿ!

ಫೋಂಡಾ, ಗೋವಾ (ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆನಗರ) – ಸ್ವತಃ ಸಾಧನೆ ಮಾಡುವುದು ವ್ಯಷ್ಟಿ ಸಾಧನೆ, ಆದರೆ ಸಮಾಜವನ್ನು ಸಾಧನೆಗೆ ಹಚ್ಚುವುದು ಸಮಷ್ಟಿ ಸಾಧನೆಯಾಗಿದೆ. ಸನಾತನ ಸಂಸ್ಥೆಯು ಸಮಷ್ಟಿ ಸಾಧನೆಯನ್ನು ಕಲಿಸುತ್ತದೆ. ಅದಕ್ಕಾಗಿಯೇ ಇಂದು ಸನಾತನದ 131 ಸಾಧಕರು ಸಂತ ಪದವಿಯಲ್ಲಿ ವಿರಾಜಮಾನರಾಗಿದ್ದಾರೆ ಮತ್ತು ಮುಂದಿನ 10 ವರ್ಷಗಳಲ್ಲಿ 1 ಸಾವಿರ ಸಾಧಕರು ಸಂತರಾಗಲಿದ್ದಾರೆ. ಸಮಾಜವೆಲ್ಲವೂ ಸಾತ್ವಿಕವಾದರೆ, ಹಿಂದೂ ರಾಷ್ಟ್ರದ ಸ್ಥಾಪನೆ ಶೀಘ್ರದಲ್ಲೇ ಆಗುತ್ತದೆ. ಹಿಂದೂ ರಾಷ್ಟ್ರದ ಸ್ಥಾಪನೆಯು ಸಮಷ್ಟಿ ಸಾಧನೆಯಾಗಿದೆ, ಅದಕ್ಕಾಗಿ ಎಲ್ಲರೂ ಸಾಧನೆ ಮಾಡುವಂತೆ ಸಮಾಜದಲ್ಲಿ ಹೋಗಿ ತಿಳಿಸಿ ಹೇಳಬೇಕು ಎಂದು ಸನಾತನ ಸಂಸ್ಥೆಯ ಸಂಸ್ಥಾಪಕರಾದ ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಬಾಳಾಜಿ ಆಠವಲೆ ಅವರು ಮಾರ್ಗದರ್ಶನ ನೀಡಿದರು. ಅವರು ಗೋವಾ ಇಂಜಿನಿಯರಿಂಗ್ ಕಾಲೇಜಿನ ಮೈದಾನದಲ್ಲಿ ‘ಸನಾತನ ರಾಷ್ಟ್ರ ಶಂಖನಾದ ಮಹೋತ್ಸವ’ದಲ್ಲಿ ಮಾರ್ಗದರ್ಶನ ಮಾಡುತ್ತಿದ್ದರು. ಈ ಸಂದರ್ಭದಲ್ಲಿ 20 ಸಾವಿರಕ್ಕೂ ಹೆಚ್ಚು ಸಾಧಕರು ಮತ್ತು ಹಿಂದೂಗಳು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಅವರ ಪತ್ನಿ ಡಾ. (ಸೌ.) ಕುಂದಾ ಜಯಂತ ಆಠವಲೆ, ಅವರ ಹಿರಿಯ ಸಹೋದರ ಪೂ. ಡಾ. ಅನಂತ ಬಾಳಾಜಿ ಆಠವಲೆ, ಅತ್ತಿಗೆ (ಪೂ. ಅನಂತ ಬಾಳಾಜಿ ಆಠವಲೆ ಅವರ ಪತ್ನಿ) ಸೌ. ಸುನೀತಿ ಆಠವಲೆ ಹಾಗೂ ದೇಶ-ವಿದೇಶಗಳ ಸಾಧಕರು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಡಾ. (ಸೌ.) ಕುಂದಾ ಜಯಂತ ಆಠವಲೆ ಅವರನ್ನು ಸನಾತನದ ಸಾಧಕಿ ಸೌ. ಜ್ಯೋತಿ ನಿರಂಜನ ದಾತೆ ಅವರು ಸತ್ಕರಿಸಿದರು. ಪೂ. ಅನಂತ ಆಠವಲೆ ಹಾಗೂ ಸೌ. ಸುನೀತಿ ಆಠವಲೆ ಅವರನ್ನು ಪೂ. ಪ್ರದೀಪ ಖೇಮಕಾ ಮತ್ತು ಪೂ.(ಸೌ.) ಸುನೀತಾ ಖೇಮಕಾ ಅವರು ಸತ್ಕಾರ ಮಾಡಿದರು.

ಸಮಾಜದಲ್ಲಿ ಹೆಚ್ಚು ಹೆಚ್ಚು ಜನರು ಸಾತ್ವಿಕ ಮನೋಭಾವದವರಾದಾಗ ಹಿಂದೂ ರಾಷ್ಟ್ರ ನಿಶ್ಚಿತ
ಸಮಾಜದ ವೈದ್ಯರು ಕೇವಲ ದೈಹಿಕ ಮತ್ತು ಮಾನಸಿಕ ಕಾಯಿಲೆಗಳಿಗೆ ಔಷಧಿ ನೀಡುತ್ತಾರೆ; ಆದರೆ ದುಷ್ಟ ಶಕ್ತಿಗಳ ತೊಂದರೆ ಸೇರಿದಂತೆ ಅನೇಕ ರೋಗಗಳು ಸ್ವಭಾವದೋಷ, ಪ್ರಾರಬ್ಧ, ಪೂರ್ವಜರ ತೊಂದರೆಗಳಿಂದ ಉಂಟಾಗುತ್ತವೆ. ಇದು ಅವರಿಗೆ ತಿಳಿದಿರುವುದಿಲ್ಲ. ಆದ್ದರಿಂದ ಈ ತೊಂದರೆಗಳಿಗೆ ಅವರ ಬಳಿ ಯಾವುದೇ ಪರಿಹಾರವಿರುವುದಿಲ್ಲ. ಪರಿಣಾಮವಾಗಿ ದುಷ್ಟ ಶಕ್ತಿಗಳ ತೊಂದರೆಯನ್ನು ದೂರ ಮಾಡಲು ನಾಮಜಪ ಅಂದರೆ ಸಾಧನೆಯನ್ನು ಮಾಡಬೇಕಾಗುತ್ತದೆ. ‘ಹಿಂದೂ’ ಎಂಬ ಶಬ್ದದ ಅರ್ಥ ‘ಹಿನಾನಿ ಗುಣಾನಿ ದುಷಯತಿ ಇತಿ ಹಿಂದೂ’ ಅಂದರೆ ಯಾರು ತನ್ನೊಳಗಿನ ದೋಷಗಳನ್ನು ದೂರ ಮಾಡುತ್ತಾನೋ ಅವನೇ ಹಿಂದೂ ಆಗಿದ್ದಾನೆ. ಸಮಾಜದಲ್ಲಿ ಹೆಚ್ಚು ಹೆಚ್ಚು ಜನರು ಸಾತ್ವಿಕ ಮನೋಭಾವದವರಾದಾಗ, ಹಿಂದೂ ರಾಷ್ಟ್ರ ಖಂಡಿತವಾಗಿಯೂ ಬರುತ್ತದೆ. ಈಗ ಆಪತ್ಕಾಲ, ಮೂರನೇ ಮಹಾಯುದ್ಧವಾಗಲಿದೆ, ಇದಕ್ಕಾಗಿ ನಾವು ನಮ್ಮನ್ನು ಸಿದ್ಧಪಡಿಸಿಕೊಳ್ಳಬೇಕಾಗಿದೆ. ಆಪತ್ಕಾಲದಲ್ಲಿ ಉಂಟಾಗುವ ಯುದ್ಧದಂತಹ ಪರಿಸ್ಥಿತಿಯಲ್ಲಿ ನಾಗರಿಕರು ವಿವಿಧ ತೊಂದರೆಗಳನ್ನು ಎದುರಿಸಬೇಕಾಗುತ್ತದೆ. ಆ ಸಂದರ್ಭದಲ್ಲಿ ನಾವು ಅವರಿಗೆ ಸಹಾಯ ಮಾಡಬೇಕಾಗುತ್ತದೆ. ಅದರ ಸಿದ್ಧತೆಯನ್ನು ನಾವು ಈಗಿನಿಂದಲೇ ಮಾಡಿಕೊಳ್ಳಬೇಕು. ಈ ಸಿದ್ಧತೆಯೇ ಸಮಷ್ಟಿ ಸಾಧನೆಯಾಗಿದೆ. ಸನಾತನ ರಾಷ್ಟ್ರದ ಸ್ಥಾಪನೆಯೇ ಹಿಂದೂ ರಾಷ್ಟ್ರದ ಸ್ಥಾಪನೆ ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ‘ಅನಂತಕೋಟಿ ಬ್ರಹ್ಮಾಂಡನಾಯಕ ರಾಜಾಧಿರಾಜ……ಶ್ರೀ ಗುರುಕೃಪಾಧಿಪತಿ ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆಜೀ ಕೀ ಜಯ್’ ಎಂಬ ವಿಸ್ತಾರವಾದ ಬಿರುದಾವಳಿಯನ್ನು ವಾಚಿಸಲಾಯಿತು. ಈ ಸಂದರ್ಭದಲ್ಲಿ ಡಾ. (ಸೌ.) ಕುಂದಾ ಜಯಂತ ಆಠವಲೆ ಅವರು ತಮ್ಮ ಮನೋಗತ ವ್ಯಕ್ತಪಡಿಸಿದರು ಹಾಗೂ ಪೂ. ಅನಂತ ಆಠವಲೆ ಅವರ ಮನೋಗತವನ್ನು ಓದಿ ತೋರಿಸಲಾಯಿತು.