ಇಸ್ರೇಲ್ ಶೀಘ್ರದಲ್ಲೇ ಗಾಜಾಕ್ಕೆ ವಿದ್ಯುತ್ ಪೂರೈಕೆ ಸ್ಥಗಿತಗೊಳಿಸಲಿದೆ!

ಟೆಲ್ ಅವಿವ್ – ಇಸ್ರೇಲ್ ಗಾಜಾಗೆ ವಿದ್ಯುತ್ ಪೂರೈಕೆ ನಿಲ್ಲಿಸುವುದಾಗಿ ಘೋಷಿಸಿದೆ. ಇದು ಯಾವಾಗ ಜಾರಿಗೆ ಬರುತ್ತದೆ, ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಈ ನಿರ್ಧಾರವು ಗಾಜಾದಲ್ಲಿ ಕುಡಿಯುವ ನೀರು ಉತ್ಪಾದನಾ ಯೋಜನೆಗಳ ಮೇಲೆ ಪರಿಣಾಮ ಬೀರಬಹುದು; ಏಕೆಂದರೆ ಈ ಯೋಜನೆಗಳಿಗೆ ಇಸ್ರೇಲ್‌ನಿಂದ ಮಾತ್ರ ವಿದ್ಯುತ್ ಸರಬರಾಜು ಮಾಡಲಾಗುತ್ತಿದೆ. ಒಂದು ವಾರದ ಹಿಂದೆ ಇಸ್ರೇಲ್, ಗಾಜಾದಲ್ಲಿ ಇಪ್ಪತ್ತು ಲಕ್ಷಕ್ಕೂ ಅಧಿಕ ಜನರಿಗೆ ಎಲ್ಲಾ ವಸ್ತುಗಳ ಸರಬರಾಜುಗಳನ್ನು ನಿಲ್ಲಿಸಿತ್ತು. ಇಸ್ರೇಲ್ ಕಳೆದ ವಾರದಲ್ಲಿ ಕೊನೆಗೊಂಡ ಮೊದಲ ಹಂತದ ಕದನ ವಿರಾಮವನ್ನು ವಿಸ್ತರಿಸಲು ಹಮಾಸ್ ಮೇಲೆ ಒತ್ತಡ ಹೇರುವ ಉದ್ದೇಶವನ್ನು ಹೊಂದಿದೆ. ಅದೇ ಸಮಯದಲ್ಲಿ, ಹಮಾಸ್ ಎರಡನೇ ಹಂತದ ಕದನ ವಿರಾಮದ ಮಾತುಕತೆಗೆ ಒತ್ತಡ ತರುತ್ತಿದೆ, ಇದು ಹೆಚ್ಚು ಜಟಿಲವಾಗಿದೆ.

ಇಸ್ರೇಲಿ ಸೈನ್ಯವು ಮೊದಲ ಬಾರಿಗೆ ‘ಬಫರ್ ವಲಯ’ದಿಂದ ಹಿಂದೆ ಸರಿದಿದೆ. ಯುದ್ಧ ಪ್ರಾರಂಭವಾದ ನಂತರ ಮೊದಲ ಬಾರಿಗೆ ಸಾವಿರಾರು ಸ್ಥಳಾಂತರಗೊಂಡ ಪ್ಯಾಲೆಸ್ಟೀನಿಯನ್ನರು ಉತ್ತರ ಗಾಜಾಗೆ ಮರಳಿದ್ದಾರೆ. ಇಸ್ರೇಲ್ ಸರಕುಗಳ ಸರಬರಾಜನ್ನು ಸ್ಥಗಿತಗೊಳಿಸುವವರೆಗೂ ಪ್ರತಿದಿನ ನೂರಾರು ಟ್ರಕ್‌ಗಳ ಸಹಾಯವನ್ನು ಗಾಜಾಗೆ ಕಳುಹಿಸಲಾಗುತ್ತಿತ್ತು. ಇಸ್ರೇಲ್-ಹಮಾಸ್ ಯುದ್ಧದಲ್ಲಿ ಇದುವರೆಗೆ 1 ಸಾವಿರದ200 ಕ್ಕೂ ಹೆಚ್ಚು ಇಸ್ರೇಲಿಗಳು ಮತ್ತು 45 ಸಾವಿರಕ್ಕೂ ಹೆಚ್ಚು ಪ್ಯಾಲೆಸ್ಟೀನಿಯನ್ನರು ಸಾವನ್ನಪ್ಪಿದ್ದಾರೆ.