ಕೃತಕ ಬುದ್ಧಿಮತ್ತೆಯ ಉಪಯೋಗ ಬೇಡ, ಶಿಕ್ಷಕರೇ ಬೇಕು ! 

ನಾವೀಗ ೨೧ ನೇ ಶತಮಾನದಲ್ಲಿ ವಿಹರಿಸುತ್ತಿದ್ದೇವೆ. ವಿಜ್ಞಾನದ ಸಹಾಯದಿಂದ ಮನುಷ್ಯನ ಜೀವನ ಅತ್ಯಂತ ಸುಖದಾಯಕವಾಗಿದೆ. ಅದರಲ್ಲಿಯೂ ಈಗ ಕೃತಕ ಬುದ್ಧಿಮತ್ತೆಯ ಉಪಯೋಗ, ಅಂದರೆ ‘ಆರ್ಟಿಫಿಶಿಯಲ್‌ ಇಂಟಲಿಜನ್ಸ್‌’ನ ಆಗಮನವಾಗಿದೆ. ಭಾರತದ ವಿತ್ತಸಚಿವೆ ನಿರ್ಮಲಾ ಸೀತಾರಾಮನ್‌ ಇವರು ಇತ್ತೀಚೆಗಷ್ಟೆ ದೇಶದ ಅರ್ಥಸಂಕಲ್ಪವನ್ನು (ಆಯವ್ಯಯ ಪಟ್ಟಿಯನ್ನು) ಸಂಸತ್ತಿ ನಲ್ಲಿ ಮಂಡಿಸಿದರು. ಇದರಲ್ಲಿ ಅವರು ವೈದ್ಯಕೀಯ ಕ್ಷೇತ್ರದ ಜೊತೆಗೆ ಶಿಕ್ಷಣಕ್ಷೇತ್ರದಲ್ಲಿ ಕೃತಕ ಬುದ್ಧಿಮತ್ತೆಯನ್ನು ಉಪಯೋಗಿಸುವ ಬಗ್ಗೆ ಘೋಷಣೆ ಮಾಡಿದರು. ಆದರೆ ಶಿಕ್ಷಣಕ್ಷೇತ್ರದಲ್ಲಿ ಕೃತಕ ಬುದ್ಧಿಮತ್ತೆಯ ಉಪಯೋಗದಿಂದ ಅಪಾಯವುಂಟಾಗಬಹುದು’, ಎಂಬುದು ತಜ್ಞರ ಅಭಿಪ್ರಾಯವಾಗಿದೆ.

ಶಿಕ್ಷಣದಲ್ಲಿ ತಾತ್ತ್ವಿಕ ಅಂಗ ಹಾಗೂ ಪ್ರಾಯೋಗಿಕ ಅಂಗ, ಹೀಗೆ ಎರಡು ಅಂಗಗಳಿವೆ. ಪ್ರಾಥಮಿಕ ಅಂಗದಲ್ಲಿ ಕೇವಲ ಪುಸ್ತಕದ ಜ್ಞಾನವನ್ನು ನೀಡಲಾಗುತ್ತದೆ; ಆದರೆ ಈ ಪುಸ್ತಕದ ಜ್ಞಾನವನ್ನು ಹೇಗೆ ಉಪಯೋಗಿಸುವುದು ? ಎಂಬುದನ್ನು ಪ್ರಾಯೋಗಿಕ ಅಂಗದಲ್ಲಿ ಕಲಿಸಲಾಗುತ್ತದೆ. ಕೃತಕ ಬುದ್ಧಿಮತ್ತೆಯನ್ನು ಉಪಯೋಗಿಸಿ ಮಕ್ಕಳಿಗೆ ಕೇವಲ ಪುಸ್ತಕದ ಜ್ಞಾನವನ್ನು ಕಲಿಸಲಾಗುವುದು, ಎಂದು ಜ್ಞಾನಿಗಳು ಭಯ ವ್ಯಕ್ತಪಡಿಸುತ್ತಿದ್ದಾರೆ. ಮೊದಲೇ ಸಾಮಾಜಿಕ ಮಾಧ್ಯಮಗಳು ಮತ್ತು ಮಿತಿಮೀರಿದ ಸಂಚಾರಿವಾಣಿಯ ಉಪಯೋಗದಿಂದ ಮಕ್ಕಳು ಇತರರೊಂದಿಗೆ ಬೆರೆಯುವ ಪ್ರಮಾಣ ಕಡಿಮೆಯಾಗಿದೆ. ಸಮಾಜದಲ್ಲಿ ಘಟಿಸುವ ವಿವಿಧ ಘಟನೆಗಳ ಮೂಲಕ ನಮಗೆ ಇದರ ದುಷ್ಪರಿಣಾಮ ಕಾಣಿಸುತ್ತಿದೆ. ದಿನ ಕಳೆದಂತೆ ಸಮಾಜದಲ್ಲಿ ವೃದ್ಧಾಶ್ರಮಗಳ ಸಂಖ್ಯೆ ಹೆಚ್ಚುತ್ತಿದೆ. ಅಪಘಾತ ಅಥವಾ ಆಪತ್ಕಾಲದಲ್ಲಿ ಪರಸ್ಪರರಿಗೆ ಸಹಾಯ ಮಾಡುವ ಸಮಾಜದ ಮಾನಸಿಕತೆ ಇಲ್ಲವಾಗುತ್ತಿದೆ. ಯುವ ಭಾರತವನ್ನು ನಿರ್ಮಾಣ ಮಾಡುವಾಗ ವಿದ್ಯಾರ್ಥಿಗಳನ್ನು ಸಕಾರಾತ್ಮಕರನ್ನಾಗಿ ಮಾಡುವುದು, ಇದು ಶಿಕ್ಷಕರ ಹೊಣೆಯಾಗಿದೆ; ಆದರೆ ಶಿಕ್ಷಕರ ಹೊಣೆ ಯನ್ನು ಕೃತಕ ಬುದ್ಧಿಮತ್ತೆ ತೆಗೆದುಕೊಂಡರೆ ಮಕ್ಕಳಿಗೆ ಆಧುನಿಕ ಜ್ಞಾನ ಸಿಗಬಹುದು; ಆದರೆ ಅವರಿಗೆ ಅಪೇಕ್ಷಿತ ಸಂಸ್ಕಾರವಾಗಲಿಕ್ಕಿಲ್ಲ. ಕೃತಕ ಬುದ್ಧಿಮತ್ತೆಯಿಂದ ಆಧುನಿಕ ವಿಷಯಗಳು ಮತ್ತು ಅಭ್ಯಾಸ ಮಕ್ಕಳಿಗೆ ತಲುಪಬಹುದು ನಿಜ, ಆದರೂ ಮಕ್ಕಳಲ್ಲಿನ ವಿಚಾರಶಕ್ತಿ, ಕಲ್ಪನಾಶಕ್ತಿ, ಸೃಜನಶಕ್ತಿಯ ಪ್ರಮಾಣ ಮಾತ್ರ ಕಡಿಮೆಯಾಗಬಹುದು. ಕೃತಕ ಬುದ್ಧಿಮತ್ತೆಯೊಂದಿಗೆ ಕೆಲಸ ಮಾಡುವಾಗ ಅದನ್ನು ಎಷ್ಟು ಪ್ರಮಾಣದಲ್ಲಿ ಉಪಯೋಗಿಸುವರು, ಹೇಗೆ ಉಪಯೋಗಿಸುವರು ? ಎಂಬುದರ ಯೋಗ್ಯ ಹಾಗೂ ಅಯೋಗ್ಯ ಪರಿಣಾಮ ಹೇಗಿರಬಹುದು ? ಎಂಬುದರ ಸಂಪೂರ್ಣ ವಿಚಾರ ಮಾಡಿಯೆ ಈ ಪದ್ಧತಿಯನ್ನು ಅಳವಡಿಸಿಕೊಳ್ಳಬೇಕು. ಕೃತಕ ಬುದ್ಧಿಮತ್ತೆ ಯನ್ನು ಪ್ರಯೋಗವೆಂದು ಹೊಸ ಪೀಳಿಗೆಯ ಮೇಲೆ ಉಪಯೋಗಿಸಿದಾಗ ಅದು ವಿಫಲವಾದರೆ ಅದರಿಂದ ಮುಂದಿನ ಅನೇಕ ಪೀಳಿಗೆಗಳಿಗೆ ಎಂದಿಗೂ ಭರಿಸ ಲಾರದಷ್ಟು ಹಾನಿಯಾಗಬಹುದು. ಸಕ್ಷಮ ಹಾಗೂ ಸುದೃಢ ಭಾರತ ನಿರ್ಮಾಣ ಮಾಡಲು ಕೃತಕ ಬುದ್ಧಿಮತ್ತೆಯ ಅವಶ್ಯಕತೆಯಿದ್ದರೂ, ಸಂಸ್ಕಾರ ಮತ್ತು ಬಯಲಾಟ ಇವು ಕೂಡ ಅಷ್ಟೇ ಆವಶ್ಯಕವಾಗಿವೆ. ಮಕ್ಕಳಿಗೆ ಕೇವಲ ಕೃತಕ ಬುದ್ಧಿಮತ್ತೆಯಿಂದ ಅನಾಯಾಸ ವಾಗಿ ಮಾಹಿತಿ ಸಿಗಬಾರದು, ಅವರಿಗೆ ಅವರ ಹಾಗೂ ಇತರರ ಅನುಭವದಿಂದ ಬಂದಿರುವ ಜ್ಞಾನವನ್ನೂ ಕಲಿಯಲಿಕ್ಕಿದೆ. ನಿಜವಾದ ಶಿಕ್ಷಣ ಶಾಲೆಗೆ ಹೋಗಿ, ಮಿತ್ರರ ಜೊತೆಯಲ್ಲಿದ್ದು ಶಿಕ್ಷಕರ ಮಾರ್ಗದರ್ಶನದಲ್ಲಿ ಪಡೆದರೆ ಮಾತ್ರ ಅದು ಮಕ್ಕಳ ಜೀವನದಲ್ಲಿ ಉಪಯೋಗವಾಗಬಹುದು, ಎಂಬುದು ಖಚಿತ !

– ಶ್ರೀ. ರಾಹುಲ ದೇವೀದಾಸ ಕೊಲ್ಹಾಪುರೆ, ಸಾತಾರಾ