Dwarka Shivling Theft : ಮಗಳಿಗೆ ಬಿದ್ದ ಕನಸಿನಿಂದಾಗಿ ಕುಟುಂಬದ 8 ಮಂದಿಯಿಂದ ಶಿವಲಿಂಗದ ಕಳ್ಳತನ !

`ದೇವಸ್ಥಾನದಲ್ಲಿದ್ದ ಶಿವಲಿಂಗವನ್ನು ಮನೆಯಲ್ಲಿ ಸ್ಥಾಪಿಸಿದರೆ ಸಮೃದ್ಧಿ’, ಎಂದು ಕನಸು ಬಿದ್ದಿತ್ತು !

ದ್ವಾರಕಾ (ಗುಜರಾತ) – ಇಲ್ಲಿ ಫೆಬ್ರವರಿ 25 ರ ಮಧ್ಯರಾತ್ರಿ ಭೀಡಭಂಜನ ಮಹಾದೇವ ದೇವಸ್ಥಾನದ ಶಿವಲಿಂಗ ಕಳ್ಳತನವಾಗಿರುವ ಘಟನೆ ನಡೆದಿತ್ತು. ಈ ಘಟನೆಯ ತನಿಖೆ ನಡೆಸಿದ ಪೊಲೀಸರು ದ್ವಾರಕಾದಿಂದ 500 ಕಿ.ಮೀ ದೂರದಲ್ಲಿರುವ ಸಾಬರಕಂಠಾ ಜಿಲ್ಲೆಯ ಹಿಮ್ಮತನಗರದಿಂದ ಒಂದೇ ಕುಟುಂಬದ 8 ಜನರನ್ನು ಬಂಧಿಸಿದ್ದಾರೆ. ಕಳ್ಳತನದ ಕಾರಣ ಬಹಿರಂಗವಾದಾಗ ಎಲ್ಲರಿಗೂ ಆಘಾತಾ ಕಾದಿತ್ತು. ಈ ಕುಟುಂಬದ ಚಿಕ್ಕ ಮಗಳಿಗೆ, ದ್ವಾರಕಾದ ಭೀಡಭಂಜನ ಮಹಾದೇವ ದೇವಸ್ಥಾನದ ಶಿವಲಿಂಗವನ್ನು ಮನೆಯಲ್ಲಿ ಸ್ಥಾಪಿಸಿದರೆ ಸಮೃದ್ಧಿ ನೆಲೆಸುತ್ತದೆ, ಎಂದು ಕನಸು ಬಿದ್ದಿತ್ತು. ಅದರಂತೆ ಹುಡುಗಿಯ ಕುಟುಂಬದವರು ಎರಡು ಕಾರುಗಳನ್ನು ತೆಗೆದುಕೊಂಡು ದ್ವಾರಕಾ ತಲುಪಿ ಫೆಬ್ರವರಿ 25ರ ಮಧ್ಯರಾತ್ರಿ 3 ರಿಂದ 5ರ ಸಮಯದಲ್ಲಿ ಶಿವಪಿಂಡವನ್ನು ಕದ್ದೊಯ್ದು ತಮ್ಮ ಮನೆಯಲ್ಲಿ ಸ್ಥಾಪಿಸಿದರು.

1. ಫೆಬ್ರವರಿ 26ರ ಮಹಾಶಿವರಾತ್ರಿಯ ದಿನ ಶಿವಭಕ್ತರು ಭೀಡಭಂಜನ ಮಹಾದೇವ ದೇವಸ್ಥಾನಕ್ಕೆ ಬಂದಾಗ ಶಿವಪಿಂಡ ಇಲ್ಲದಿರುವುದನ್ನು ಕಂಡು ಆಕ್ರೋಶಗೊಂಡರು.

2. ಪ್ರಾರಂಭದಲ್ಲಿ ಶಿವಲಿಂಗವನ್ನು ಅರಬ್ಬೀ ಸಮುದ್ರಕ್ಕೆ ಎಸೆಯಲಾಗಿದೆ ಎಂಬ ಅನುಮಾನದಿಂದ ಪೊಲೀಸರು ‘ಸ್ಕೂಬಾ ಡೈವಿಂಗ್’ (ಸಮುದ್ರದಲ್ಲಿ ಆಳಕ್ಕೆ ಹೋಗುವ ವ್ಯವಸ್ಥೆ) ತಂಡದ ಸಹಾಯದಿಂದ ಸಮುದ್ರದಲ್ಲಿ ಶೋಧ ಕಾರ್ಯ ನಡೆಸಿದರು. ಅಲ್ಲಿ ಏನೂ ಸಿಗದಿದ್ದಾಗ ಹೆಚ್ಚಿನ ತನಿಖೆ ನಡೆಸಿದಾಗ ಸತ್ಯ ಹೊರಬಂದಿತು ಮತ್ತು ಎಲ್ಲರಿಗೂ ಆಘಾತವಾಯಿತು.

3. ಶಿವಲಿಂಗದ ಕಳವು ಸಂಪತ್ತಿನ ಆಸೆಯಿಂದ ಮಾಡಿರಲಿಲ್ಲ. ವಿಶೇಷವೆಂದರೆ ಕೇವಲ ಶಿವಲಿಂಗ ಮಾತ್ರ ಕಳುವಾಗಿತ್ತು. ಅಲ್ಲಿದ್ದ ದೇವತೆಗಳ ಮೂರ್ತಿಗಳಿಗೆ ಹಾಕಿದ್ದ ಬೆಲೆಬಾಳುವ ಆಭರಣಗಳು ಹಾಗೆಯೇ ಇದ್ದವು.