ಶ್ರೀರಾಮ ಮಂದಿರದ ಬಗ್ಗೆ ಅವಹೇಳನಕಾರಿ ಪೋಸ್ಟ್; ಹಾಸಿಂಸಾಬ ಕಾಜಿಗೆ 2 ತಿಂಗಳ ಜೈಲು ಶಿಕ್ಷೆ!

ಗದಗ – ಗದಗ ಜಿಲ್ಲೆಯ ನರಗುಂದ ನಿವಾಸಿ ಹಾಸಿಂಸಾಬ ಅಕ್ಷರಸಾಬ ಕಾಜಿಯು ರಾಮ ಮಂದಿರದ ಛಾಯಾಚಿತ್ರದ ಕುರಿತು ಅವಹೇಳನಕಾರಿ ಬರಹ ಬರೆದು ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರ ಮಾಡಿದ್ದನು. ಈ ಪ್ರಕರಣದಲ್ಲಿ ಹಾಸಿಂಸಾಬ ಕಾಜಿ ದೋಷಿ ಎಂದು ನ್ಯಾಯಾಲಯ ತೀರ್ಪು ನೀಡಿ 2 ತಿಂಗಳ ಜೈಲು ಶಿಕ್ಷೆ ಹಾಗೂ 5 ಸಾವಿರ ರೂಪಾಯಿ ದಂಡ ವಿಧಿಸಿದೆ. (ಭಾರತೀಯರ ಆರಾಧ್ಯ ದೈವವಾಗಿರುವ ಶ್ರೀರಾಮನ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡುವ ಧ್ಯೆರ್ಯ ಯಾರೂ ಮಾಡದಂತೆ ಹಿಂದೂಗಳು ಸಂಗಟನೆ ನಿರ್ಮಿಸಬೇಕು! – ಸಂಪಾದಕರು)

ಅಕ್ಟೋಬರ್ 26, 2018 ರಂದು, ಹಾಸಿಂಸಾಬ ಕಾಜಿಯು ರಾಮಮಂದಿರದ ಚಿತ್ರದ ಕುರಿತು ಹಿಂದಿ ಮತ್ತು ಇಂಗ್ಲಿಷ್‌ ಭಾಷೆಯಲ್ಲಿ ಆಕ್ಷೇಪಾರ್ಹ ಬರಹವನ್ನು ಬರೆದು ಸಾಮಾಜಿಕ ಮಾಧ್ಯಮದಲ್ಲಿ ‘ಪೋಸ್ಟ್’ ಮಾಡಿದನು. ಇದನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ಆರೋಪಿಯ ವಿರುದ್ಧ ಭಾರತೀಯ ದಂಡ ಸಂಹಿತೆಯ ಕಲಂ 295ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ನ್ಯಾಯಾಲಯದಲ್ಲಿ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ವಾದ-ಪ್ರತಿವಾದಗಳನ್ನು ಆಲಿಸಿದ ನಂತರ ನ್ಯಾಯಾಧೀಶ ಜಿನ್ನಪ್ಪ ಚೌಗಲಾ ಫೆಬ್ರವರಿ 18 ರಂದು ಆರೋಪಿಗೆ ಶಿಕ್ಷೆ ವಿಧಿಸಿ ತೀರ್ಪು ನೀಡಿದರು.