
ನಾವೆಲ್ಲರೂ ೨೦೨೫ ನೇ ಇಸ್ವಿಯಲ್ಲಿ ಈ ಕೆಳಗಿನ ವಿಷಯಗಳ ಬಗ್ಗೆ ಯೋಚಿಸಬೇಕು ಮತ್ತು ಅವುಗಳನ್ನು ನಮ್ಮ ದಿನಚರಿಯಲ್ಲಿ ಅಳವಡಿಸಬೇಕು ಎಂದು ಹೇಳಬೇಕೆನಿಸುತ್ತದೆ.
೧. ಎಲ್ಲದಕ್ಕೂ ಮಾತ್ರೆಯ ಹಿಂದೆ ಬೀಳಬೇಡಿ, ‘ಪಿಲ್ ಪಾಪಿಂಗ್’ನ (ಮನಸ್ಸಿಗೆ ಬಂದಂತೆ ಔಷಧಿ ಸೇವಿಸುವುದು) ಅಭ್ಯಾಸವನ್ನು ಕಡಿಮೆ ಮಾಡುವುದು ಅಥವಾ ನಿಲ್ಲಿಸಿಬಿಡುವುದು, ದೇಹವು ಗುಣಮುಖವಾಗಲು ಅದಕ್ಕೆ ಪೂರ್ಣ ಸಮಯವನ್ನು ನೀಡುವುದು, ಚಿಕಿತ್ಸೆಗೆ ಹೆಚ್ಚೆಚ್ಚು ಪ್ರಾಶಸ್ತ್ಯ ನೀಡುವುದು ಮತ್ತು ‘ಆಂಟಿಬಯೋಟಿಕ್ಸ್’ ಮತ್ತು ‘ಸಿಂಥೆಟಿಕ್’ (ಕೃತಕ) ಔಷಧಿಗಳನ್ನು ಕಡಿಮೆಗೊಳಿಸುವುದು.
೨. ಒತ್ತಡಮಯ ಕೆಲಸ ಮತ್ತು ಮನೆ ಹೀಗೆ ಎರಡೂ ಜವಾಬ್ದಾರಿಗಳಿರುವಾಗ ತಮ್ಮ ಆದ್ಯತೆಯನ್ನು ಗಮನದಲ್ಲಿಡಬೇಕು ಮತ್ತು ಆರೋಗ್ಯಕರ ಸಮತೋಲನವನ್ನು ಕಾಯ್ದುಕೊಳ್ಳುವ ವಿಷಯದಲ್ಲಿ ನಿಮ್ಮ ಸಂಗಾತಿಯೊಂದಿಗೆ ಮಾತನಾಡುವುದು.
೩. ಬೆಳಗ್ಗೆ ಬೇಗ ಏಳುವುದು ಮತ್ತು ರಾತ್ರಿ ಜಾಗರಣೆ ಮಾಡದೇ ಬೇಗ ಮಲಗುವುದು. ಹೊರಗಿನ ಆಹಾರ ಸೇವಿಸುವ ಪ್ರಮೇಯ ಬಂದರೆ, ಇರುವುದಲ್ಲಿ ಉತ್ತಮ ಅಹಾರವನ್ನು ಆಯ್ಕೆ ಮಾಡಿ.
೪. ಆಹಾರವನ್ನು ಖರೀದಿಸಿ ಮನೆಗೆ ತರುವಾಗ, ಅದರಲ್ಲಿ ಬಳಸಿದ ಎಣ್ಣೆಯನ್ನು ಪರೀಕ್ಷಿಸುವುದು ಅತ್ಯಗತ್ಯ. ಬಣ್ಣಬಣ್ಣದ ಆಹಾರಗಳು, ಚೈನೀಸ್ (ಸೋಯಾ ಸಾಸ್, ಅಜಿನೊಮೊಟೊ) ಇವುಗಳ ಸಂಭಾವ್ಯ ಅಪಾಯವನ್ನು ಗಮನದಲ್ಲಿಟ್ಟು ಮಕ್ಕಳಿಗೆ ಕೇಕ್, ಸಿರಪ್‌ಗಳನ್ನು ನೀಡಬೇಡಿ, ಅದರ ಅಭ್ಯಾಸವಾಗದಿರಲಿ.
೫. ಯಾವುದಕ್ಕೂ ಅತಿರೇಕಕ್ಕೆ ಹೋಗಬೇಡಿ. ವ್ಯಾಯಾಮ, ಹೊರಗಿನ ಆಹಾರ ಸೇವನೆ, ಅಪಥ್ಯ, ತೂಕ ಇತ್ಯಾದಿಗಳನ್ನೆಲ್ಲವನ್ನು ನಿಯಂತ್ರಣದಲ್ಲಿಡಿ.
೬. ಯಾವುದೇ ಅನಾರೋಗ್ಯದ ಲಕ್ಷಣಗಳು ಕಾಣಿಸಿದಾಗ ನಮ್ಮಷ್ಟಕ್ಕೆ ಇರದೇ ತಕ್ಷಣ ವೈದ್ಯರ ಸಲಹೆ ಪಡೆಯಿರಿ. ಅದಕ್ಕೆ ತಕ್ಕಂತೆ ಚಿಕಿತ್ಸೆ ಆರಂಭಿಸಿ.
೭. ಉಪಾಹಾರಗೃಹಕ್ಕೆ ಹೋದಾಗ ಚೀಸ್, ಮೇಯೊನೇಸ್, ಮೈದಾ ಇವುಗಳನ್ನು ಬಿಟ್ಟು ಇತರ ಪದಾರ್ಥಗಳನ್ನು ತರಿಸಬೇಕು. ‘ಸಾಫ್ಟ್ ಡ್ರಿಂಕ್ಸ್’ (ಶೀತಪೇಯ)ಗಳ ಬದಲಿಗೆ ಇದ್ದುದರಲ್ಲಿ ಕನಿಷ್ಠ ಕಲಬೆರಕೆ ಇರುವ ಸೋಡಾ, ಮಜ್ಜಿಗೆಯಂತಹ ಪಾನೀಯಗಳನ್ನು ತೆಗೆದುಕೊಳ್ಳಬೇಕು.
೮. ಅಧಿಕ ತೂಕ, ಚಿಕ್ಕ ವಯಸ್ಸಿನಲ್ಲಿ ಥೈರಾಯ್ಡ್, ಕೊಲೆಸ್ಟ್ರಾಲ್, ಮಾಸಿಕ ಸರದಿಯ ಸಮಯದಲ್ಲಿ ಹೊಟ್ಟೆ ನೋವಾಗುವುದು, ಅನಿಯಮಿತ ಮಾಸಿಕ ಸರದಿ ಇವೆಲ್ಲ ‘ಹೊಸತು, ಸಾಮಾನ್ಯ’ ಎನ್ನದೇ ಈ ರೋಗಲಕ್ಷಣಗಳನ್ನು ಚಿಕಿತ್ಸೆಯಿಂದ ಉತ್ತಮವಾಗಿ ಹಿಡಿತದಲ್ಲಿರಿಸಬಹುದು. ಆದರೆ ನಮಗೆ ನಿಮ್ಮ ಇಚ್ಛೆ ಬೇಕು. ‘ಜಿಮ್’ನಲ್ಲಿ (ಆಧುನಿಕ ಸಲಕರಣೆಗಳ ವ್ಯಾಯಾಮ ಶಾಲೆ) ವ್ಯಾಯಾಮ ಮಾಡುತ್ತಿದ್ದರೆ, ಸರ್ವತೋಮುಖ ವ್ಯಾಯಾಮ ವಾಗುವ ಬಗ್ಗೆ ಸಂಪೂರ್ಣ ಗಮನವನ್ನು ನೀಡುವುದು.
೯. ಧೂಮಪಾನ, ಮದ್ಯಪಾನಗಳನ್ನು ಮನೋರಂಜನೆಯೆಂದು ಪ್ರಾರಂಭಿಸದಿರಿ. ‘ಮಕ್ಕಳಿಗೆ ಎಷ್ಟು ಚಿಕ್ಕ ವಯಸ್ಸಿನಲ್ಲಿ ಈ ವಿಷಯಗಳ ಮಾಹಿತಿ ತಿಳಿಯುತ್ತದೆಯೋ ಅಷ್ಟು ಅವರು ವ್ಯಸನಿಯಾಗುವ ಸಾಧ್ಯತೆ ಹೆಚ್ಚಿರುತ್ತದೆ’ ಎಂದು ಸಂಶೋಧನೆ ಹೇಳುತ್ತದೆ. ಕಡಿಮೆಪಕ್ಷ ಪೋಷಕರು ತಮ್ಮ ಮಕ್ಕಳ ಮುಂದೆ ಮದ್ಯಪಾನ ಮಾಡಬಾರದು ಮತ್ತು ಅದನ್ನು ಅವರ ತನಕ ತಲುಪಿಸಬಾರದು, ಎಂದೆನಿಸುತ್ತದೆ.
೧೦. ಇತರರ ತುಲನೆಯಲ್ಲಿ ತಾವು ಹಿಂದೆ ಬೀಳುವ ಭಯ, ಇತರರೊಂದಿಗೆ ತುಲನೆ, ಮತ್ಸರ ಮತ್ತು ಇವುಗಳಿಂದ ತಮಗೆ ತೊಂದರೆಯಾಗಲು ಬಿಡದಿರುವುದು, ಏಕೆಂದರೆ ಇವುಗಳಿಂದ ನಿಮ್ಮ ಮಾನಸಿಕ ಆರೋಗ್ಯಕ್ಕೆ ಹಾನಿಯಾಗುವುದು ಬಿಟ್ಟರೆ ಬೇರೇನೂ ಸಾಧ್ಯವಾಗದು. ಇತರರ ತಪ್ಪುಗಳನ್ನು ಕಂಡುಹಿಡಿಯುವಲ್ಲಿ ನಿಮ್ಮ ಸಮಯ ಮತ್ತು ನಿಮ್ಮ ಗಮನವನ್ನು ಖರ್ಚು ಮಾಡಿದರೆ, ನೀವು ಖಂಡಿತವಾಗಿಯೂ ರಚನಾತ್ಮಕವಾಗಿ ಏನನ್ನೂ ಮಾಡಲಾರಿರಿ.
ನಾವು ಸಮಾಜಕ್ಕಾಗಿ, ಕುಟುಂಬಕ್ಕಾಗಿ, ನಮ್ಮ ಪ್ರದೇಶಕ್ಕಾಗಿ ಏನು ಮಾಡಬಹುದು ಎಂದು ಯೋಚಿಸಿದರೆ, ನಾವು ಖಂಡಿತವಾಗಿಯೂ ಎಲ್ಲರನ್ನು ಒಟ್ಟಾಗಿ ಮುನ್ನಡೆಸಬಹುದು !
– ವೈದ್ಯೆ (ಸೌ.) ಸ್ವರಾಲಿ ಶೆಂಡ್ಯೆ, ಯಶಪ್ರಭಾ ಆಯುರ್ವೇದ, ಪುಣೆ. (೨೮.೧೨.೨೦೨೪)