ವೈಷ್ಣೋ ದೇವಿ ದೇವಸ್ಥಾನದಲ್ಲಿ ಭಕ್ತರು ಅರ್ಪಿಸಿದ ‘ಬೆಳ್ಳಿ’ಯಲ್ಲಿ ಕಲಬೆರಕೆ ಪತ್ತೆ!

  • ೨೦ ಟನ್ ‘ಬೆಳ್ಳಿ’ಯಿಂದ ಕೇವಲ ೬ ಟನ್ ಅಸಲಿ ಬೆಳ್ಳಿ ಲಭ್ಯ!

  • ಬೆಳ್ಳಿಯಲ್ಲಿ ‘ಕ್ಯಾಡ್ಮಿಯಮ್’ ಎಂಬ ವಿಷಕಾರಿ ಲೋಹದ ಕಲಬೆರಕೆ ಬಯಲು

ಕಟ್ರಾ (ಜಮ್ಮು) – ಇತ್ತೀಚೆಗೆ ನಡೆದ ಪರಿಶೀಲನೆಯಲ್ಲಿ ಇಲ್ಲಿನ ಶ್ರೀ ವೈಷ್ಣೋ ದೇವಿ ದೇವಸ್ಥಾನಕ್ಕೆ ಅರ್ಪಿಸಲಾದ ಬೆಳ್ಳಿಯ ಬಹುಪಾಲು ಅಸಲಿ ಬೆಳ್ಳಿಯಲ್ಲ, ಬದಲಿಗೆ ಅದರಲ್ಲಿ ಅಗ್ಗದ ಲೋಹಗಳೊಂದಿಗೆ ವಿಷಕಾರಿ ಕ್ಯಾಡ್ಮಿಯಮ್ ಅನ್ನು ಬೆರೆಸಿರುವುದು ಬೆಳಕಿಗೆ ಬಂದಿದೆ.

‘ಶ್ರೀ ಮಾತಾ ವೈಷ್ಣೋ ದೇವಿ ಶ್ರೈನ್ ಬೋರ್ಡ್’ ದಾನವಾಗಿ ಬಂದ ಸುಮಾರು ೨೦ ಟನ್ ಲೋಹವನ್ನು ಕರಗಿಸಿ ಬೆಳ್ಳಿಯನ್ನು ಹೊರತೆಗೆಯಲು ಸರಕಾರಿ ಟಂಕಸಾಲೆಗೆ ಕಳುಹಿಸಿತ್ತು; ಆದರೆ ಪರಿಶೀಲನೆಯ ಫಲಿತಾಂಶಗಳು ಅತ್ಯಂತ ಆಘಾತಕಾರಿಯಾಗಿವೆ. ಪರೀಕ್ಷೆಯಲ್ಲಿ ಒಟ್ಟು ಲೋಹದಲ್ಲಿ ಕೇವಲ ಶೇ. ೫-೬ ರಷ್ಟು ಮಾತ್ರ ಅಸಲಿ ಬೆಳ್ಳಿ ಇರುವುದು ಕಂಡುಬಂದಿದೆ, ಉಳಿದ ಭಾಗವು ಕ್ಯಾಡ್ಮಿಯಮ್ ಮತ್ತು ಕಬ್ಬಿಣದಂತಹ ಅಗ್ಗದ ಲೋಹಗಳಿಂದ ಕೂಡಿದೆ. ಅಂದರೆ ಭಕ್ತರು ಶ್ರದ್ಧೆಯಿಂದ ಅರ್ಪಿಸುತ್ತಿದ್ದ ಬೆಳ್ಳಿಯು ವಾಸ್ತವದಲ್ಲಿ ಕಲಬೆರಕೆಯಾಗಿತ್ತು.

ಬೆಲೆಯಲ್ಲಿನ ಭಾರಿ ವ್ಯತ್ಯಾಸ

ಮಾರುಕಟ್ಟೆಯಲ್ಲಿ ಬೆಳ್ಳಿಯ ಬೆಲೆ ಪ್ರತಿ ಕೆಜಿಗೆ ಅಂದಾಜು ೨.೫ ಲಕ್ಷದಿಂದ ೨.೭೫ ಲಕ್ಷ ರೂಪಾಯಿಗಳಷ್ಟಿದೆ, ಆದರೆ ಕ್ಯಾಡ್ಮಿಯಮ್ ಬೆಲೆ ಪ್ರತಿ ಕೆಜಿಗೆ ಕೇವಲ ೫೦೦ ರೂಪಾಯಿಗಳ ಆಸುಪಾಸಿನಲ್ಲಿದೆ. ಈ ಕಾರಣದಿಂದಲೇ ಯಾವ ದಾನದ ಮೌಲ್ಯವನ್ನು ಮೊದಲು ನೂರಾರು ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿತ್ತೋ, ಅದು ಈಗ ಬಹಳ ಕಡಿಮೆಯಾಗಿದೆ. ಒಂದು ಉದಾಹರಣೆಯಲ್ಲಿ, ೭೦ ಕೆಜಿ ಲೋಹದಿಂದ ಕೇವಲ ೩ ಕೆಜಿ ಶುದ್ಧ ಬೆಳ್ಳಿ ಮಾತ್ರ ದೊರೆತಿದೆ. ಅಷ್ಟೇ ಅಲ್ಲದೆ, ಈ ಕಲಬೆರಕೆ ಲೋಹವನ್ನು ಪ್ರತ್ಯೇಕಿಸಲು ಅಧಿಕಾರಿಗಳಿಗೆ ಹಲವು ತಿಂಗಳುಗಳೇ ಬೇಕಾಯಿತು.

ಆರೋಗ್ಯಕ್ಕೆ ಅಪಾಯ

ಕ್ಯಾಡ್ಮಿಯಮ್ ಅತ್ಯಂತ ವಿಷಕಾರಿ ಲೋಹವಾಗಿದೆ. ಇದನ್ನು ಮುಖ್ಯವಾಗಿ ಕೈಗಾರಿಕಾ ಕೆಲಸಗಳಿಗಾಗಿ ಬಳಸಲಾಗುತ್ತದೆ. ದೈನಂದಿನ ಉತ್ಪನ್ನಗಳಲ್ಲಿ ಇದರ ಬಳಕೆಯ ಬಗ್ಗೆ ‘ಭಾರತೀಯ ಗುಣಮಟ್ಟ ಬ್ಯೂರೋ’ (BIS) ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೆ ತಂದಿದೆ. ತಜ್ಞರ ಪ್ರಕಾರ, ಕ್ಯಾಡ್ಮಿಯಮ್ ಅನ್ನು ಬಿಸಿ ಮಾಡಿದಾಗ (ಉದಾಹರಣೆಗೆ ಲೋಹವನ್ನು ಕರಗಿಸುವಾಗ), ಅದರಿಂದ ಬರುವ ಹೊಗೆಯು ಶ್ವಾಸಕೋಶಕ್ಕೆ ಹಾನಿ ಮಾಡುತ್ತದೆ, ಮೂತ್ರಪಿಂಡಗಳ ಮೇಲೆ ಪರಿಣಾಮ ಬೀರಬಹುದು ಮತ್ತು ದೀರ್ಘಕಾಲದ ಬಳಕೆಯಿಂದ ಕ್ಯಾನ್ಸರ್ ಅಪಾಯವನ್ನೂ ಹೆಚ್ಚಿಸಬಹುದು. ಈ ಕಾರಣಕ್ಕಾಗಿಯೇ ಟಂಕಸಾಲೆಯ ಅಧಿಕಾರಿಗಳು ಮೊದಲು ಈ ಲೋಹವನ್ನು ಸ್ವೀಕರಿಸಲು ಹಿಂಜರಿದಿದ್ದರು. ನಂತರ ವಿಶೇಷ ಭದ್ರತಾ ವ್ಯವಸ್ಥೆ ಮತ್ತು ಉಪಕರಣಗಳ ಸಹಾಯದಿಂದ ಈ ಪ್ರಕ್ರಿಯೆಯನ್ನು ಪೂರ್ಣಗೊಳಿಸಲಾಯಿತು.

ಪರಿಸರದ ಮೇಲೆ ಪರಿಣಾಮ

ಕ್ಯಾಡ್ಮಿಯಮ್‌ನಂತಹ ಲೋಹವನ್ನು ಸರಿಯಾದ ರೀತಿಯಲ್ಲಿ ವಿಲೇವಾರಿ ಮಾಡದಿದ್ದರೆ, ಅದು ಗಾಳಿ ಮತ್ತು ನೀರನ್ನು ಕಲುಷಿತಗೊಳಿಸಬಹುದು ಎಂದು ತಜ್ಞರು ಎಚ್ಚರಿಸಿದ್ದಾರೆ. ಇದು ಪರಿಸರದ ಮೇಲೆ ಗಂಭೀರ ಪರಿಣಾಮ ಬೀರಬಹುದು.

ಈ ಘಟನೆಯಿಂದ ಉದ್ಭವಿಸಿರುವ ದೊಡ್ಡ ಪ್ರಶ್ನೆಗಳು!

೧. ಭಕ್ತರಿಗೆ ಮಾಹಿತಿ ನೀಡದೆಯೇ ಕಲಬೆರಕೆ ಬೆಳ್ಳಿಯನ್ನು ಮಾರಾಟ ಮಾಡಲಾಗುತ್ತಿದೆಯೇ?

೨. ಕಟ್ರಾದಿಂದ ಭವನದವರೆಗೆ ನಾಣ್ಯಗಳು, ಆಭರಣಗಳು ಅಥವಾ ಪಾತ್ರೆಗಳ ರೂಪದಲ್ಲಿ ಮಾರಾಟವಾಗುವ ಬೆಳ್ಳಿಯಲ್ಲಿ ಕಲಬೆರಕೆ ಇದೆಯೇ?

೩. ಭಕ್ತರೇ ಅಗ್ಗದ (ಕಲಬೆರಕೆ) ಬೆಳ್ಳಿಯನ್ನು ಖರೀದಿ ಮಾಡಿ ಅರ್ಪಿಸುತ್ತಿದ್ದಾರೆಯೇ?

ಸಂಪಾದಕೀಯ ನಿಲುವು

  • ಇದರ ಅರ್ಥವೇನು? ಭಕ್ತರು ನಕಲಿ ಬೆಳ್ಳಿಯನ್ನು ಅರ್ಪಿಸಿದರೇ ಅಥವಾ ವ್ಯಾಪಾರಿಗಳು ಭಕ್ತರಿಗೆ ನಕಲಿ ಬೆಳ್ಳಿಯನ್ನು ಮಾರಾಟ ಮಾಡಿದರೇ?
  • ದೇಶದ ಇತರ ದೇವಸ್ಥಾನಗಳಲ್ಲಿ ಹಾಗೂ ವ್ಯಾಪಾರದಲ್ಲಿಯೂ ಹೀಗೆಯೇ ನಡೆಯುತ್ತಿರಬಹುದು. ಆದ್ದರಿಂದ ಇಡೀ ದೇಶದ ಬೆಳ್ಳಿ ವ್ಯವಹಾರದ ಬಗ್ಗೆ ಸಿಬಿಐ ತನಿಖೆ ನಡೆಸುವ ಅಗತ್ಯವಿದೆ!