ಆರೋಗ್ಯ ಮತ್ತು ಉಪವಾಸ

ಚಿಕಿತ್ಸಕರು ಮತ್ತು ಆರೋಗ್ಯತಜ್ಞರ ಹೇಳಿಕೆಗನುಸಾರ, ಯೋಗ್ಯ ರೀತಿಯಲ್ಲಿ ಉಪವಾಸ ಮಾಡುವುದು ಆರೋಗ್ಯಕ್ಕೆ ಬಹಳ ಲಾಭದಾಯಕವಾಗಿದೆ. ದೇಹದಲ್ಲಿರುವ ವಿಷಕಾರಿ ತತ್ತ್ವಗಳನ್ನು ನಿವಾರಣೆ ಮಾಡಿ ದೇಹವನ್ನು ನಿರೋಗಿಯನ್ನಾಗಿಸುವುದು ಉಪವಾಸದ ಮೂಲ ಉದ್ದೇಶ ವಾಗಿದೆ. ‘ಆಹಾರಂ ಪಚತಿ ಶಿಖಿ ದೋಷಾನ್‌ ಆಹಾರವರ್ಜಿತಃ |’, ಅಂದರೆ ‘ಹೊಟ್ಟೆಯಲ್ಲಿನ ಅಗ್ನಿಯು ಆಹಾರ ಜೀರ್ಣಿಸುವ ಕಾರ್ಯ ಮಾಡುತ್ತದೆ ಮತ್ತು ಉಪವಾಸವು ಆಹಾರದಲ್ಲಿರುವ ದೋಷವನ್ನು ಜೀರ್ಣಿಸುತ್ತದೆ.’ ಉಪವಾಸದಿಂದ ಜೀರ್ಣಶಕ್ತಿ ಹೆಚ್ಚಾಗುತ್ತದೆ. ಉಪವಾಸ ಮಾಡುವಾಗ ದೇಹದಲ್ಲಿ ಹೊಸ ಮಲದ ಉತ್ಪತ್ತಿಯಾಗುವುದಿಲ್ಲ ಮತ್ತು ಜೀವಶಕ್ತಿಗೆ ಹಳೆಯ ಸಂಗ್ರಹವಾದ ಮಲವನ್ನು ಹೊರಗೆ ಹಾಕುವ ಅವಕಾಶ ಸಿಗುತ್ತದೆ. ಮಲ-ಮೂತ್ರ ವಿಸರ್ಜನೆ ಯೋಗ್ಯ ರೀತಿಯಲ್ಲಾಗತೊಡಗುತ್ತದೆ. ಅದರಿಂದ ದೇಹದಲ್ಲಿ ಹಗುರತನ ಬರು ತ್ತದೆ. ಆಯುರ್ವೇದದ ದೃಷ್ಟಿಯಿಂದ ಶಾರೀರಿಕ ಮತ್ತು ಮಾನಸಿಕ ರೋಗಗಳಿಗೆ ಉಪವಾಸ ಮಾಡುವುದು ಹಿತಕರ ಎಂದು ನಂಬಲಾಗಿದೆ.

೧. ಶಾರೀರಿಕ ರೋಗಗಳು

ಅಜೀರ್ಣ, ವಾಂತಿ, ಮಂದಾಗ್ನಿ, ಜಡತ್ವ, ಸ್ಥೂಲಕಾಯ, ಮಲಬದ್ಧತೆ, ಬಾಯಿ ಹುಣ್ಣು ಆಗುವುದು ಇತ್ಯಾದಿ ಕಾಯಿಲೆಗಳಾದಾಗ ಚಿಕ್ಕ ಅಥವಾ ದೊಡ್ಡ ರೀತಿಯಲ್ಲಿ ರೋಗಕ್ಕನುಸಾರ ಉಪವಾಸ ಮಾಡುವುದು ಲಾಭದಾಯಕವಾಗಿದೆ. ಅದರಿಂದ ಜೀರ್ಣಾಂಗವ್ಯೂಹಕ್ಕೆ ವಿಶ್ರಾಂತಿ ಸಿಗುತ್ತದೆ.

೨. ಮಾನಸಿಕ ರೋಗ

ಉಪವಾಸ ಮನಸ್ಸಿನ ಮೇಲೆಯೂ ಪರಿಣಾಮ ಬೀರುತ್ತದೆ. ಆದುದರಿಂದ ಚಿತ್ತವೃತ್ತಿಯು ಶಾಂತವಾಗುತ್ತದೆ. ಉಪವಾಸದಿಂದ ಸಾತ್ತ್ವಿಕ ಭಾವವು ಹೆಚ್ಚಾಗುತ್ತದೆ. ರಜ-ತಮವು ನಾಶವಾಗ ತೊಡಗುತ್ತದೆ, ಹಾಗೆಯೇ ಮನೋಬಲ ಮತ್ತು ಆತ್ಮಬಲದಲ್ಲಿ ಹೆಚ್ಚಳವಾಗುತ್ತದೆ.

೩. ಸಾಮಾನ್ಯವಾಗಿ ಉಪವಾಸದ ವಿಧಗಳು ಮುಂದಿನ ರೀತಿಯಲ್ಲಿವೆ

ಅ. ನಿರಾಹಾರ : ನಿರಾಹಾರ ವ್ರತದಲ್ಲಿ ಭೋಜನ ಅಥವಾ ವ್ರತಕ್ಕೆ ಸಂಬಂಧಿಸಿದ ಆಹಾರವನ್ನು ಸೇವಿಸುವುದಿಲ್ಲ. ನಿರಾಹಾರ ವ್ರತವು ಇದು ನಿರ್ಜಲ ಮತ್ತು ಸಜಲ ಉಪವಾಸ ಹೀಗೆ ೨ ವಿಧ ಗಳದ್ದಾಗಿರುತ್ತವೆ. ನಿರ್ಜಲ ವ್ರತದಲ್ಲಿ ನೀರು ಸಹ ಕುಡಿಯುವುದಿಲ್ಲ. ಸಜಲ ವ್ರತದಲ್ಲಿ ಬೆಚ್ಚಗಿನ ನೀರು ಅಥವಾ ಬೆಚ್ಚಗಿನ ನೀರಿನಲ್ಲಿ ನಿಂಬೆಹಣ್ಣಿನ ರಸವನ್ನು ಸೇರಿಸಿ ಸೇವಿಸಬಹುದು. ಅದರಿಂದ ಹೊಟ್ಟೆಯಲ್ಲಿ ವಾಯು(ಗ್ಯಾಸ್) ಆಗುವುದಿಲ್ಲ.

ಆ. ಫಲಾಹಾರ ಮತ್ತು ದುಗ್ಧಾಹಾರ : ಇದರಲ್ಲಿ ಹಣ್ಣುಗಳು ಮತ್ತು ಕೇವಲ ಹಣ್ಣುಗಳ ರಸವನ್ನೇ ಸೇವಿಸಲಾಗುತ್ತದೆ. ಉಪವಾಸಕ್ಕಾಗಿ ದಾಳಿಂಬೆ, ದ್ರಾಕ್ಷಿ, ಸೇಬು, ಪಪ್ಪಾಯಿ ಇವುಗಳು ಯೋಗ್ಯವೆಂದು ನಂಬಲಾಗುತ್ತದೆ. ಇದರೊಂದಿಗೆ ಬೆಚ್ಚಗಿನ ನೀರಿನಲ್ಲಿ ನಿಂಬೆರಸವನ್ನು ಸೇರಿಸಿ ಸೇವಿಸಬಹುದು. ನಿಂಬೆಯಿಂದ ಜೀರ್ಣವ್ಯವಸ್ಥೆ ಚೆನ್ನಾಗಿ ಆಗಲು ಸಹಾಯವಾಗುತ್ತದೆ. ಉಪವಾಸದ ದಿನದಂದು ೩ ರಿಂದ ೫ ಬಾರಿ ಕೆನೆ ತೆಗೆದ ಹಾಲು ಸೇವಿಸುವುದು, ಇದನ್ನು ಉತ್ತಮ ಆಹಾರವೆಂದು ನಂಬಲಾಗಿದೆ.

ಇ. ಅಭ್ಯಾಸಕ್ಕನುಸಾರ ಉಪವಾಸ : ೨೪ ಗಂಟೆಗಳಲ್ಲಿ ಒಂದು ಬಾರಿ ಸಾಮಾನ್ಯ ಮತ್ತು ಹಗುರ ಭೋಜನವನ್ನು ಸೇವಿಸಬೇಕು. ಈ ಒಂದು ಸಮಯದ ಭೋಜನದ ಹೊರತಾಗಿ ಯಾವುದೇ ಪದಾರ್ಥವನ್ನು ಸೇವಿಸಬಾರದು. ಕೇವಲ ನೀರು ಅಥವಾ ಬೆಚ್ಚಗಿನ ನೀರಿನಲ್ಲಿ ನಿಂಬೆರಸವನ್ನು ತೆಗೆದುಕೊಳ್ಳಬಹುದು.

೪. ತೆಗೆದುಕೊಳ್ಳಬೇಕಾದ ಕಾಳಜಿ

ಉಪವಾಸವು ಜೀರ್ಣಾಂಗ ವ್ಯವಸ್ಥೆಯನ್ನು ಸಡಿಲಗೊಳಿಸುತ್ತದೆ; ಆದುದರಿಂದ ಎಷ್ಟು ದಿನ ಉಪವಾಸ ಮಾಡುವಿರೋ, ಅಷ್ಟು ದಿನ ಹೆಸರುಕಾಳು ಬೇಯಿಸಿದ ನೀರನ್ನು ಸೇವಿಸಬೇಕು. ನಂತರ ಹೆಸರು ಬೇಳೆ, ಅನಂತರ ಹೆಸರುಬೇಳೆಯ ಕಿಚಡಿ, ಅನ್ನ ಇತ್ಯಾದಿ ಮತ್ತು ಕೊನೆಗೆ ಸಾಮಾನ್ಯ ಭೋಜನ ಮಾಡಬೇಕು. ಈ ರೀತಿ ಭೋಜನ ಮಾಡುವುದರಿಂದ ಜೀರ್ಣಾಂಗ ವ್ಯವಸ್ಥೆಯ ಮೇಲೆ ಒಮ್ಮೆಲೆ ಒತ್ತಡವಾಗುವುದಿಲ್ಲ. ಉಪವಾಸದ ಹೆಸರಿನಲ್ಲಿ ಆಲೂಗಡ್ಡೆ, ಕೆಸುವು, ಬಾಳೆಹಣ್ಣು, ಸಮೋಸಾ, ಪಾಯಸ ಇತ್ಯಾದಿ ಪದಾರ್ಥಗಳನ್ನು ಮತ್ತು ಜೀರ್ಣಿಸಲು ಜಡವಾಗಿರುವ  ಆಹಾರವನ್ನು ಹೊಟ್ಟೆತುಂಬ ತಿನ್ನುವುದರಿಂದ ದೇಹದಲ್ಲಿ ರೋಗ ಬೆಳೆಯ ಬಹುದು. ಯಾವುದೇ ಆತ್ಮಿಕ ಮತ್ತು ಶಾರೀರಿಕ ಲಾಭವಾಗುವುದಿಲ್ಲ.

ಉಪವಾಸಕ್ಕೆ ಇಷ್ಟು ಮಹತ್ವ ಇರುವುದರಿಂದ ಅದಕ್ಕೆ ಧಾರ್ಮಿಕ ಮಹತ್ವವನ್ನು ನೀಡಲಾಗಿದೆ. ಹಾಗೆ ನೋಡಿದರೆ ಪರಮಾತ್ಮನ ಧ್ಯಾನ ಮಾಡಬೇಕಿದ್ದರೆ, ಉಪವಾಸ ಇರುವುದರಿಂದ ದೇಹದಲ್ಲಿ ಮಲ-ಮೂತ್ರವಿಸರ್ಜನೆ ಮತ್ತು ಹೆಚ್ಚು ಬಾಯಾರಿಕೆಯಂತಹ ಕೃತಿಗಳ ವೇಗವು ಬರುವುದಿಲ್ಲ, ಇದರಿಂದ ಈಶ್ವರನ ಭಕ್ತಿಯಲ್ಲಿ ಏಕಾಗ್ರತೆ ಹೆಚ್ಚಾಗುತ್ತದೆ.’

– ಪಂಡಿತ ವೇದಪ್ರಕಾಶ ಶಾಸ್ತ್ರಿ

(ಆಧಾರ : ಮಾಸಿಕ ‘ಗೀತಾ ಸ್ವಾಧ್ಯಾಯ’, ವರ್ಷ ೧೨)