ಗೋಮಾತೆಯನ್ನು ಜಾನುವಾರು ಪಟ್ಟಿಯಿಂದ ತೆಗೆದುಹಾಕಿ ! – ಶಂಕರಾಚಾರ್ಯ ಅವಿಮುಕ್ತೇಶ್ವರಾನಂದ ಸರಸ್ವತಿ

ಶಂಕರಾಚಾರ್ಯ ಅವಿಮುಕ್ತೇಶ್ವರಾನಂದರಿಂದ ಕೇಂದ್ರ ಸರಕಾರಕ್ಕೆ ಆಗ್ರಹ

ಭುವನೇಶ್ವರ (ಒಡಿಶಾ) – ಕೇಂದ್ರ ಸರಕಾರದ ಪಟ್ಟಿಯಲ್ಲಿ ಹಸುವನ್ನು ಪ್ರಾಣಿಗಳ ಶ್ರೇಣಿಯಲ್ಲಿಡಲಾಗಿದೆ; ಆದರೆ ಭಾರತೀಯ ಸಂಸ್ಕೃತಿಯಲ್ಲಿ ಹಸುವನ್ನು `ದೇವಿ’ ಎನ್ನಲಾಗಿದೆ. ಹಸುವನ್ನು ‘ಮಾತೆ’ ಎನ್ನುತ್ತಾ ಅವಳ ಮಹತ್ವವನ್ನು ಹೇಳಲಾಗಿದೆ. ಸನಾತನ ಧರ್ಮವನ್ನು ಒಪ್ಪುವವರು ಹಸುವನ್ನು ಮಾತೆ ಎನ್ನುತ್ತಾರೆ. ಆದುದರಿಂದ ಹಸುವನ್ನು ಪ್ರಾಣಿಯೆಂದು ಹೇಳುವುದು ಸನಾತನ ಧರ್ಮಕ್ಕೆ ಮತ್ತು ಸನಾತನ ಧರ್ಮವನ್ನು ಪಾಲಿಸುವವರ ಅಪಮಾನವಾಗಿದೆ. ನಮ್ಮ ಪರಂಪರೆಯನ್ನು ನಾವು ಮುಂದುವರಿಸಬೇಕಾಗಿದೆ. ಅದರದೇ ಒಂದು ಭಾಗವೆಂದು ಕೇಂದ್ರ ಸರಕಾರವು ಪ್ರಸಾರ ಮಾಡಿರುವ ಪ್ರಾಣಿಗಳ ಪಟ್ಟಿಯಿಂದ ಹಸುವನ್ನು ಕೈಬಿಡಬೇಕು ಎಂದು ಉತ್ತರಾಖಂಡದ ಬದ್ರಿನಾಥ ಜ್ಯೊತಿಷ ಪೀಠದ ಶಂಕರಾಚಾರ್ಯ ಸ್ವಾಮಿ ಅವಿಮುಕ್ತೇಶ್ವರಾನಂದ ಸರಸ್ವತಿಯವರು ಕೇಂದ್ರ ಸರಕಾರಕ್ಕೆ ಆಗ್ರಹಿಸಿದ್ದಾರೆ. ಶಂಕರಾಚಾರ್ಯ ಅವಿಮುಕ್ತೇಶ್ವರಾನಂದರು `ಗೋ ಪ್ರತಿಷ್ಠಾ ಧ್ವಜ ಪ್ರತಿಷ್ಠಾಪನೆ ಯಾತ್ರೆ’ಯ ಆಯೋಜನೆ ಮಾಡಿದ್ದಾರೆ. ಈ ಯಾತ್ರೆ ಇತ್ತೀಚೆಗೆ ಓಡಿಸ್ಸಾ ತಲುಪಿದೆ. ಈ ಸಂದರ್ಭದಲ್ಲಿ ಅವರು ಪತ್ರಕರ್ತರೊಂದಿಗೆ ಮಾತನಾಡುವಾಗ ಮೇಲಿನಂತೆ ಆಗ್ರಹಿಸಿದರು.

ಗೋವುಗಳ ರಕ್ಷಣೆ ಮತ್ತು ಸಂವರ್ಧನೆಗಾಗಿ ಸರಕಾರ ಕಾನೂನು ರೂಪಿಸಬೇಕು !

ಶಂಕರಾಚಾರ್ಯರು ಮಾತು ಮುಂದುವರೆಸಿ, ಗೋವುಗಳಿಗೆ ರಕ್ಷಣೆ ನೀಡುವುದು ಹಾಗೂ ಗೋವುಗಳ ಸೇವೆ ಮಾಡುವುದು ಈ ಯಾತ್ರೆಯ ಉದ್ದೇಶವಾಗಿದೆ. ನಾನು ಇಲ್ಲಿಗೆ ಗೋ ಪ್ರತಿಷ್ಠಾ ಧ್ವಜ ಪ್ರತಿಷ್ಠಾಪನೆ ಯಾತ್ರೆಗಾಗಿ ಬಂದಿದ್ದೇನೆ. ಗೋಮಾತೆಯ ಸಂರಕ್ಷಣೆ ಮತ್ತು ಸಂವರ್ಧನೆಗಾಗಿ ಸರಕಾರವು ಕಾನೂನು ರೂಪಿಸಬೇಕು ಎಂಬುದು ನಮ್ಮ ಈ ಯಾತ್ರೆಯ ಪ್ರಮುಖ ಬೇಡಿಕೆಯಾಗಿದೆ. ಕಾನೂನು ಜಾರಿಯಾದ ನಂತರ ಜನರಿಗೂ ಅದರ ಮತ್ತು ಸನಾತನ ಧರ್ಮದ ಗಾಂಭೀರ್ಯತೆ ತಿಳಿಯುವುದು. ಇದರಿಂದ ಜನರ ವಿಚಾರ ಮಾಡುವ ಪದ್ಧತಿ, ಗೋವುಗಳನ್ನು ನೋಡುವ ದೃಷ್ಟಿಕೋನ ಕೂಡ ಬದಲಾಗುವುದು. ಕೇಂದ್ರ ಸರಕಾರವು ಕಾನೂನು ರೂಪಿಸುವವರೆಗೂ ಈ ಕೆಲಸವನ್ನು ಮಾಡುತ್ತಲೇ ಇರುತ್ತೇನೆ ಎಂದೂ ಅವರು ಸ್ಪಷ್ಟಪಡಿಸಿದರು.

ಸಂಪಾದಕೀಯ ನಿಲುವು

ಶಂಕರಾಚಾರ್ಯರಿಗೆ ಏಕೆ ಹೀಗೆ ಆಗ್ರಹಿಸಬೇಕಾಗುತ್ತದೆ ? ಸರಕಾರಕ್ಕೆ ಇದು ಅರ್ಥವಾಗುವುದಿಲ್ಲವೇ? ಈಗಲಾದರೂ ಸರಕಾರ ಕೂಡಲೇ ಬೇಡಿಕೆಯನ್ನು ಒಪ್ಪಿಕೊಳ್ಳುವುದೇ ?