ಪುತ್ತೂರು: ಆರ್ಷ ವಿದ್ಯಾ ಸಮಾಜದ ಈ ಕಾರ್ಯವನ್ನು ಗುರುತಿಸಿ ಶೃಂಗೇರಿ ಜಗದ್ಗುರುಗಳಾದ ಶ್ರೀ ಶ್ರೀ ವಿಧುಶೇಖರ ಭಾರತೀ ಸನ್ನಿಧಾನಂಗಳವರು ಆರ್ಷ ವಿದ್ಯಾ ಸಮಾಜದ ಹಿಂದೂ ಹಿತರಕ್ಷಣಾ ಕಾರ್ಯಕ್ಕೆ ಬೆಂಬಲವಾಗಿ ೫೦ ಲಕ್ಷ ರೂಪಾಯಿಗಳನ್ನು ನೀಡಿದ್ದಾರೆ. ಆರ್ಷ ವಿದ್ಯಾ ಸಮಾಜದ ಪರವಾಗಿ ಶೃತಿ ಭಟ್ ಅವರು ದೇಣಿಗೆ ಸ್ವೀಕರಿಸಿದ್ದಾರೆ. ಮುಂದಿನ ತನ್ನೆಲ್ಲಾ ಕಾರ್ಯಚಟುವಟಿಕೆಗಳನ್ನು ಶೃಂಗೇರಿ ಪೀಠದ ಆಶೀರ್ವಾದದೊಂದಿಗೇ ಮುಂದುವರೆಸುವುದಾಗಿ ಆರ್ಷ ವಿದ್ಯಾ ಸಮಾಜ ಘೋಷಿಸಿದೆ.
ಆರ್ಷ ವಿದ್ಯಾ ಸಮಾಜದ ಕಾರ್ಯ
ತಿರುವನಂತಪುರದ ಆರ್ಷ ವಿದ್ಯಾ ಸಮಾಜವು ‘ಮತಾಂತರಗೊಂಡು, ಶೋಷಣೆಗೊಳಗಾದ ಹಿಂದೂ ಯುವತಿಯರನ್ನು ಮರಳಿ ಮಾತೃಧರ್ಮಕ್ಕೆ ಕರೆತರುವ ಕಾರ್ಯಕ್ಕೆ ತನ್ನನ್ನು ತಾನು ಸಮರ್ಪಿಸಿಕೊಂಡಿದ್ದು ಇದುವರೆಗೆ ಸುಮಾರು ಎಂಟು ಸಾವಿರ ಮಂದಿ ಹಿಂದೂ ಯುವತಿಯರನ್ನು ಪುನಃ ಮಾತೃಧರ್ಮಕ್ಕೆ ಮರಳಿಸಿದೆ.
ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರಾದ ಸುಬ್ರಹ್ಮಣ್ಯ ನಟ್ಟೋಜರು ಆರ್ಷ ವಿದ್ಯಾ ಸಮಾಜದ ಕಾರ್ಯಗಳ ಬಗ್ಗೆ ತಿಳಿದ ನಂತರ ಆರ್ಷ ವಿದ್ಯಾ ಸಮಾಜದ ಮುಖ್ಯಸ್ಥರಾದ ಆಚಾರ್ಯ ಮನೋಜ್ ಜಿ ಅವರನ್ನು ಶೃಂಗೇರಿ ಜಗದ್ಗುರುಗಳಾದ ಶ್ರೀ ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿಗಳ ಭೇಟಿ ಮಾಡಿಸಿದರು. ಆಗ ಶೃಂಗೇರಿ ಜಗದ್ಗುರುಗಳು ಸುಮಾರು ಎರಡೂವರೆ ಗಂಟೆಗಳ ಕಾಲ ಆರ್ಷ ವಿದ್ಯಾ ಸಮಾಜದ ಕಾರ್ಯ ಚಟುವಟಿಕೆಗಳ ವಿವರಗಳನ್ನು ಪಡೆದುಕೊಂಡರು. ಆಚಾರ್ಯ ಮನೋಜ್ ಜಿಯವರ ಭೇಟಿಯ ನಾಲ್ಕು ತಿಂಗಳ ತರುವಾಯ ಇದೀಗ ಶೃಂಗೇರಿ ಜಗದ್ಗುರುಗಳು ಆರ್ಷ ವಿದ್ಯಾ ಸಮಾಜಕ್ಕೆ ೫೦ ಲಕ್ಷ ರೂಪಾಯಿಗಳ ಆಶೀರ್ವಾದಪೂರ್ವಕ ದೇಣಿಗೆಯನ್ನು ನೀಡಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಪ್ರಚಾರ
ಇದೀಗ ದೊಡ್ಡ ಮೊತ್ತವೊಂದನ್ನು ಹಿಂದೂ ಧರ್ಮದ ರಕ್ಷಣೆಗಾಗಿ ಶೃಂಗೇರಿ ಪೀಠ ನೀಡಿರುವುದು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಪ್ರಚಾರ ಪಡೆಯುತ್ತಿದೆ. ಎಲ್ಲರೂ ಹಿಂದೂ ಹಿತರಕ್ಷಣೆಯ ನೆಲೆಯಲ್ಲಿ ಶೃಂಗೇರಿ ಗುರುಗಳ ಈ ಕಾರ್ಯವನ್ನು ಶ್ಲಾಘಿಸುತ್ತಿದ್ದಾರೆ. ಧರ್ಮ ಪೀಠಗಳು ಇಂತರ ಕಾರ್ಯದಲ್ಲಿ ತೊಡಗಿದಾಗಲಷ್ಟೇ ಧರ್ಮದ ಉಳಿವು ಸಾಧ್ಯ ಎಂದು ಸಂತಸ ವ್ಯಕ್ತಪಡಿಸುತ್ತಿದ್ದಾರೆ. ದೇಣಿಗೆಯ ಸಂದರ್ಭದಲ್ಲಿ ಸುಬ್ರಹ್ಮಣ್ಯ ನಟ್ಟೋಜ ಹಾಗೂ ರಾಜಶ್ರೀ ನಟ್ಟೋಜ ದಂಪತಿಗಳು ಹಾಜರಿದ್ದರು.