ರಾಯಪುರ (ಛತ್ತೀಸ್‌ಗಢ) – ಮಹಾಸಮುಂದದಲ್ಲಿನ ಬಾಗ್‌ಬಹ್ರಾ ರೈಲು ನಿಲ್ದಾಣದ ಬಳಿ ಇದ್ದ ‘ವಂದೇ ಭಾರತ್ ಎಕ್ಸ್‌ಪ್ರೆಸ್’ ಮೇಲೆ ಕಲ್ಲು ತೂರಾಟ ನಡೆದಿದೆ. ಈ ಕಲ್ಲು ತೂರಾಟದಲ್ಲಿ ಮೂರು ಬೋಗಿಗಳ ಗಾಜು ಒಡೆದಿದೆ. ಈ ಬಗ್ಗೆ ಮಾಹಿತಿ ಪಡೆದ ರೈಲ್ವೆ ಪೊಲೀಸರು 5 ಮಂದಿಯನ್ನು ಬಂಧಿಸಿದ್ದಾರೆ. ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿ ರೈಲ್ವೆ ನ್ಯಾಯಾಲಯಕ್ಕೆ ಹಾಜರುಪಡಿಸಲಿದ್ದಾರೆ.
ರೈಲ್ವೆ ಭದ್ರತಾ ಪಡೆ ಅಧಿಕಾರಿ ಪರ್ವೀನ್ ಸಿಂಗ ಈ ಬಗ್ಗೆ ಮಾತನಾಡಿ ಮಹಾಸಮುಂದ್‌ನಿಂದ ಹೊರಟ ‘ವಂದೇ ಭಾರತ್ ಎಕ್ಸ್‌ಪ್ರೆಸ್’ 9ಗಂಟೆ ಸುಮಾರಿಗೆ ಬಾಗ್‌ಬಹ್ರಾ ತಲುಪಿದಾಗ ಕೆಲ ಕಿಡಿಗೇಡಿಗಳು ರೈಲಿನ ಮೇಲೆ ಕಲ್ಲು ತೂರಾಟ ನಡೆಸಿದರು ಎಂದು ತಿಳಿಸಿದರು. ಈ ಬಗ್ಗೆ ಮಾಹಿತಿ ಪಡೆದ ರೈಲ್ವೇ ಪೊಲೀಸರು ಸ್ಥಳಕ್ಕೆ ಧಾವಿಸಿ ಆರೋಪಿಗಳನ್ನು ಬಂಧಿಸಿದ್ದಾರೆ.
ಈ ಹಿಂದೆ ‘ವಂದೇ ಭಾರತ್’ ಎಕ್ಸ್‌ಪ್ರೆಸ್ ಮೇಲೆ ನಡೆದ ಕಲ್ಲು ತೂರಾಟದ ವಿವರ :
1. ‘ವಂದೇ ಭಾರತ್ ಎಕ್ಸ್‌ಪ್ರೆಸ್’ ಮೇಲೆ ಕಲ್ಲು ತೂರಾಟ ನಡೆದಿರುವುದು ಇದೇ ಮೊದಲಲ್ಲ. ಈ ಹಿಂದೆ ಹಲವು ನಗರಗಳಲ್ಲಿ ಈ ರೈಲಿನ ಮೇಲೆ ಕಲ್ಲು ತೂರಾಟ ನಡೆದಿದೆ. ಕೆಲ ದಿನಗಳ ಹಿಂದೆ ಲಕ್ಷ್ಮಣಪುರಿಯಿಂದ ಪಾಟಲಿಪುತ್ರಕ್ಕೆ ತೆರಳುತ್ತಿದ್ದ ‘ವಂದೇ ಭಾರತ್’ ಮೇಲೆ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿದ್ದರು.
2. ಜುಲೈ 2024 ರಂದು ಗೋರಖ್‌ಪುರದಿಂದ ಲಕ್ಷ್ಮಣಪುರಿಗೆ ಹೋಗುತ್ತಿದ್ದ ‘ವಂದೇ ಭಾರತ್’ ಮೇಲೆ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿದ್ದರು.
3. ಈ ಹಿಂದೆ ಗುಜರಾತ್, ಬಂಗಾಳ, ಬಿಹಾರ, ಆಂಧ್ರಪ್ರದೇಶ, ಕರ್ನಾಟಕ, ತಮಿಳುನಾಡು ಸೇರಿದಂತೆ ಹಲವು ರಾಜ್ಯಗಳಲ್ಲಿ ‘ವಂದೇ ಭಾರತ್’ ಮೇಲೆ ಕಲ್ಲು ತೂರಾಟದ ಘಟನೆಗಳು ವರದಿಯಾಗಿವೆ.
ಸಂಪಾದಕೀಯ ನಿಲುವುರಾಷ್ಟ್ರೀಯ ಸಂಪತ್ತಿಗೆ ಹಾನಿ ಮಾಡುವ ಕಿಡಿಗೇಡಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಸರಕಾರ ಕಠಿಣ ಕಾನೂನು ರೂಪಿಸಬೇಕು ! |