ಟೆಲಿಗ್ರಾಮ್ ಸಂಸ್ಥಾಪಕನ ಬಂಧನ; ಫ್ರಾನ್ಸ್ ನ 80 ರಫೇಲ್ ಯುದ್ಧ ವಿಮಾನಗಳನ್ನು ಖರೀದಿಸುವ ಒಪ್ಪಂದ ರದ್ದು

ಟೆಲಿಗ್ರಾಮ್ ಸಂಸ್ಥಾಪಕ ಡುರೊವ್ ಬಂಧನದಿಂದ ಅಸಮಾಧಾನಗೊಂಡ ಯುಎಇ

ಅಬುಧಾಬಿ (ಯುನೈಟೆಡ್ ಅರಬ್ ಎಮಿರೇಟ್ಸ್) – ಟೆಲಿಗ್ರಾಮ್ ಸಿಇಒ ಪಾವೆಲ್ ಡುರೊವ್ ಅವರನ್ನು ಫ್ರಾನ್ಸ್‌ನಲ್ಲಿ ಬಂಧಿಸಿದ ನಂತರ ಯುನೈಟೆಡ್ ಅರಬ್ ಎಮಿರೇಟ್ಸ್ ಫ್ರಾನ್ಸ್‌ನಿಂದ 80 ರಫೇಲ್ ಯುದ್ಧ ವಿಮಾನಗಳನ್ನು ಖರೀದಿಸುವ ಒಪ್ಪಂದವನ್ನು ರದ್ದುಗೊಳಿಸಿದೆ. ಯುನೈಟೆಡ್ ಅರಬ್ ಎಮಿರೇಟ್ಸ್ 80 ರಫೇಲ್ ವಿಮಾನಗಳನ್ನು ಖರೀದಿಸಲು 2021 ರಲ್ಲಿ ಫ್ರೆಂಚ್ ಸಂಸ್ಥೆ ‘ಡಸಾಲ್ಟ್‌’ ಜೊತೆ ಒಪ್ಪಂದ ಮಾಡಿಕೊಂಡಿತ್ತು. ಈ ವಿಮಾನಗಳನ್ನು 2027 ರ ವರೆಗೆ ಯುಎಇಗೆ ತಲುಪಿಸಬೇಕಿತ್ತು. ಡುರೊವ್ ಅವರ ಬಂಧನದಿಂದಾಗಿ, ಯುನೈಟೆಡ್ ಅರಬ್ ಎಮಿರೇಟ್ಸ್ ಈಗ ಫ್ರಾನ್ಸ್‌ನೊಂದಿಗಿನ ತನ್ನ ಎಲ್ಲಾ ಮಿಲಿಟರಿ ಮತ್ತು ತಾಂತ್ರಿಕ ಸಹಕಾರವನ್ನು ಕೊನೆಗೊಳಿಸುವ ವಿಚಾರ ಮಾಡುತ್ತಿದೆ. ಡುರೊವ್ ರಷ್ಯಾದಲ್ಲಿ ಜನಿಸಿದ್ದು ಅವರ ಬಳಿ ಫ್ರಾನ್ಸ್ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್‌ ಈ ಎರಡು ದೇಶಗಳ ಪೌರತ್ವವಿದೆ. ಡುರೊವ್ ಅವರು ಮಕ್ಕಳ ಲೈಂಗಿಕ ನಿಂದನೆಯ ಮಾಹಿತಿಯ ವಿನಿಮಯ, ಮಾದಕವಸ್ತು ಕಳ್ಳಸಾಗಣೆ ಮತ್ತು ಸಂಘಟಿತ ಅಪರಾಧವನ್ನು ಉತ್ತೇಜಿಸಲು ಟೆಲಿಗ್ರಾಮ್ ಅನ್ನು ಬಳಸುತ್ತಿದ್ದಾರೆ ಎಂಬ ಆರೋಪವಿದೆ.

1. ಯುಎಇ ವಿದೇಶಾಂಗ ಸಚಿವಾಲಯವು ಡುರೊವ್‌ಗೆ ಕಾನೂನು ನೆರವು ನೀಡಲು ಫ್ರೆಂಚ್ ಅಧಿಕಾರಿಗಳನ್ನು ಸಂಪರ್ಕಿಸಿದೆ. ನಾವು ಡುರೊವ್ ಪ್ರಕರಣವನ್ನು ಸೂಕ್ಷ್ಮವಾಗಿ ಅಧ್ಯಯನ ಮಾಡುತ್ತಿದ್ದೇವೆ ಎಂದು ಯುಎಇ ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಿಳಿಸಿದೆ. ನಮ್ಮ ನಾಗರಿಕರ ಸುರಕ್ಷತೆ ಮತ್ತು ಹಿತಾಸಕ್ತಿಗಳನ್ನು ರಕ್ಷಿಸುವುದು ನಮಗೆ ಅತ್ಯಂತ ಮಹತ್ವದ್ದಾಗಿದೆ ಎಂದು ಸಚಿವಾಲಯ ಹೇಳಿದೆ.

2. ಡುರೊವ್ ಬಂಧನದ ನಂತರ ರಷ್ಯಾ ಮತ್ತು ಫ್ರಾನ್ಸ್ ನಡುವಿನ ಸಂಬಂಧಗಳು ಸಾರ್ವಕಾಲಿಕ ಕನಿಷ್ಠ ಮಟ್ಟವನ್ನು ತಲುಪಿವೆ ಎಂದು ರಷ್ಯಾದ ವಿದೇಶಾಂಗ ಸಚಿವ ಸೆರ್ಗೆಯ್ ಲಾವ್ರೊವ್ ಪ್ರತಿಕ್ರಿಯಿಸಿದ್ದಾರೆ. ಫ್ರಾನ್ಸ್ ಅತ್ಯಂತ ಗಂಭೀರವಾದ ಆರೋಪಗಳನ್ನು ಮಾಡಿದೆ, ಅವುಗಳನ್ನು ಸಾಬೀತುಪಡಿಸಲು ಸಮಾನವಾದ ಸಮರ್ಥ ಪುರಾವೆಗಳು ಬೇಕಾಗುತ್ತವೆ ಎಂದು ಹೇಳಿದೆ.