ಜೋಧಪುರ (ರಾಜಸ್ಥಾನ) – ನಗರದ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಇತ್ತೀಚಿಗೆ ಓರ್ವ ೧೪ ವರ್ಷದ ಅಪ್ರಾಪ್ತ ಹುಡುಗಿಯ ಮೇಲೆ ಸಾಮೂಹಿಕ ಬಲಾತ್ಕಾರದ ಘಟನೆ ನಡೆದಿದೆ. ಪೊಲೀಸರು ಈ ಪ್ರಕರಣದಲ್ಲಿ ಇಬ್ಬರು ಆರೋಪಿಗಳನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಈ ಆರೋಪಿಗಳು ಆಸ್ಪತ್ರೆಯಲ್ಲಿ ಒಪ್ಪಂದದ ಮೇಲೆ ಸ್ವಚ್ಛತಾ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಕೋಲಕಾತಾದಲ್ಲಿನ ರಾಧಾ ಗೋವಿಂದ (ಆರ್.ಜಿ) ಕರ್ ವೈದ್ಯಕೀಯ ಮಹಾವಿದ್ಯಾಲಯದ ಆಸ್ಪತ್ರೆಯಲ್ಲಿ ಡಾಕ್ಟರ್ ಯುವತಿಯ ಮೇಲೆ ನಡೆದಿರುವ ಬಲಾತ್ಕಾರ ಮತ್ತು ಹತ್ಯೆಯ ಪ್ರಕರಣದಿಂದಾಗಿ ದೇಶದಲ್ಲಿ ಈಗಾಗಲೇ ಆಕ್ರೋಶದ ವಾತಾವರಣ ಇರುವಾಗಲೆ ಜೋಧಪುರದಲ್ಲಿನ ಅಪ್ರಾಪ್ತ ಹುಡುಗಿಯ ಮೇಲೆ ಸಾಮೂಹಿಕ ಬಲಾತ್ಕಾರದ ಘಟನೆ ಬೆಳಕಿಗೆ ಬಂದಿದೆ.
೧. ಈ ಸಾಮೂಹಿಕ ಬಲಾತ್ಕಾರದಿಂದಾಗಿ ಜೋಧಪುರ ನಗರ ಬೆಚ್ಚಿ ಬಿದ್ದಿದೆ. ವಿರೋಧ ಪಕ್ಷಗಳು ಈಗ ಭಾಜಪಾ ಸರಕಾರದ ಮೇಲೆ ತೀವ್ರ ಟಿಪ್ಪಣಿ ಮಾಡುತ್ತಿದ್ದಾರೆ. ರಾಜಸ್ಥಾನದಲ್ಲಿ ಜಂಗಲ್ ರಾಜ್ ಇದೆ ಎಂದು ಕಾಂಗ್ರೆಸ್ ಟೀಕಿಸಿದೆ.
೨. ಪೊಲೀಸರು ನೀಡಿರುವ ಮಾಹಿತಿಯ ಪ್ರಕಾರ ಆಗಸ್ಟ್ ೨೫ ರಂದು ಸಂತ್ರಸ್ತ ಹುಡುಗಿಯ ತಾಯಿಯ ಜೊತೆಗೆ ಜಗಳ ನಡೆದಿತ್ತು. ಅದರ ನಂತರ ಆಕೆ ಆಸ್ಪತ್ರೆಯ ಉಪಾಹಾರ ಗೃಹಕ್ಕೆ ಹೋಗಿದ್ದಳು. ಉಪಾಹಾರ ಗೃಹದಲ್ಲಿ ಒಂಟಿಯಾಗಿ ಆಕೆ ಕುಳಿತಿರುವದನ್ನು ನೋಡಿ ಇಬ್ಬರೂ ಆರೋಪಿಗಳು ಆಕೆಯ ವಿಶ್ವಾಸ ಗಳಿಸಿ ಆಕೆಯನ್ನು ಆಸ್ಪತ್ರೆಯ ಹಿಂಬದಿ ಇರುವ ಡಂಪಿಂಗ್ ವಾರ್ಡ್ ಗೆ ಕರೆದುಕೊಂಡು ಹೋಗಿ ಸಾಮೂಹಿಕ ಬಲಾತ್ಕಾರ ಮಾಡಿದರು ಮತ್ತು ಇಬ್ಬರೂ ಅಲ್ಲಿಂದ ಪರಾರಿಯಾದರು. ಸಂಜೆಯ ತನಕ ಹುಡುಗಿ ಮನೆಗೆ ಹಿಂದಿರುಗದ ಕಾರಣ ಪೋಷಕರು ಪೊಲೀಸರಿಗೆ ದೂರು ನೀಡಿದರು.
೩. ಪ್ರತಾಪನಗರದ ಸಹಾಯಕ ಪೊಲೀಸ್ ಅಧಿಕಾರಿ ಅನಿಲ್ ಕುಮಾರ್ ಅವರು ಮಾಧ್ಯಮಗಳಿಗೆ ಈ ಬಗ್ಗೆ ಮಾಹಿತಿ ನೀಡಿದ್ದು, ಹುಡುಗಿಯ ಪೋಷಕರು ದೂರು ನೀಡಿದ ನಂತರ ಪೊಲೀಸರು ತನಿಖೆ ಆರಂಭಿಸಿದಾಗ ಆಕೆಯ ಮೇಲೆ ಬಲಾತ್ಕಾರವಾಗಿರುವುದು ತಿಳಿದು ಬಂದಿದೆ. ಘಟನಾ ಸ್ಥಳದಿಂದ ವೈದ್ಯಕೀಯ ತಂಡ ಸಾಕ್ಷಿಗಳನ್ನು ಸಂಗ್ರಹಿಸಿದೆ. ಈ ಪ್ರಕರಣದಲ್ಲಿ ಪೊಲೀಸರು ತನಿಖೆ ಮುಂದುವರೆಸಿದ್ದಾರೆ ಎಂದು ತಿಳಿಸಿದರು.