Food Poison Raichur School : ವಿದ್ಯಾರ್ಥಿಗಳ ಮಧ್ಯಾಹ್ನದ ಊಟದಲ್ಲಿ ವಿಷ ಬೆರೆಸಿದ ಕಿರಾತಕರು !

  • ರಾಯಚೂರು ವಸತಿ ಶಾಲೆಯಲ್ಲಿನ ಘಟನೆ

  • ಆಹಾರ ಬಡಿಸುವ ಮುನ್ನ ಪರಿಶೀಲಿಸಿದ ಮಹಿಳಾ ಅಡುಗೆ ಮಹಿಳೆಗೆ ವಿಷಬಾದೆ !

ರಾಯಚೂರು – ದೇವದುರ್ಗ ತಾಲೂಕಿನ ಅಲ್ಕೋಡ್ ಕಸ್ತೂರಬಾ ವಸತಿ ಶಾಲೆಯಲ್ಲಿ ಮಧ್ಯಾಹ್ನದ ಊಟದಲ್ಲಿ ಸಾಂಬಾರ್ ಸೇವಿಸಿದ ಮಹಿಳಾ ಸಹಾಯಕಿ ತೀವ್ರವಾಗಿ ಅಸ್ವಸ್ಥಗೊಂಡ ಘಟನೆ ನಡೆದಿದೆ. ಸಾರಿನಲ್ಲಿ ವಿಷ ಬೆರೆಸಲಾಗಿತ್ತು ಎನ್ನಲಾಗಿದೆ. ಅದೃಷ್ಟವಶಾತ್ ಯಾವ ವಿದ್ಯಾರ್ಥಿಯೂ ಊಟ ಮಾಡಿರಲಿಲ್ಲ.

ಅಡುಗೆ ಮಾಡಿದ ನಂತರ, ಊಟಕ್ಕಾಗಿ ಸಿದ್ಧತೆ ನಡೆಯುತ್ತಿತ್ತು. ಈ ವೇಳೆ ಅಡುಗೆ ಸಹಾಯಕಿ ವಿಜಯಲಕ್ಷ್ಮಿ ಇವರಿಗೆ ಸಾರಿನ ಬಣ್ಣ ಬದಲಾಗಿರುವುದು ಗಮನಕ್ಕೆ ಬಂದಿದೆ. ಹೀಗಾಗಿ ಮಕ್ಕಳಿಗೆ ಊಟ ಬಡಿಸುವ ಮುನ್ನ ತಾವೇ ಸಾರನ್ನು ಸೇವಿಸಿದರು. ಊಟದ ನಂತರ ಅವರ ಸ್ಥಿತಿ ಹದಗೆಟ್ಟಿತು. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಈ ವಿಚಾರ ತಿಳಿದ ಮಕ್ಕಳ ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ವಿದ್ಯಾರ್ಥಿಗಳು ಎಂದಿನಂತೆ ಊಟ ಮಾಡಿದ್ದರೆ ಏನಾಗುತ್ತಿತ್ತು ಎಂದು ಪೋಷಕರು ಪ್ರಶ್ನೆ ಎತ್ತಿದರು. ಈ ಘಟನೆಯ ಕುರಿತು ಮಾಹಿತಿ ಪಡೆದ ಶಿಕ್ಷಣ ಇಲಾಖೆ ಅಧಿಕಾರಿಗಳು ಕೂಡಲೇ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಊಟದ ಅನ್ನ ಮತ್ತು ಸಾರಿನ ಮಾದರಿಗಳನ್ನು ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಘಟನೆ ಕುರಿತು ಜಾಲಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ವಿಷ ಬೆರೆಸುವ ಅಪರಾಧಿಗಳು ಯಾರು ?

ವೈಯಕ್ತಿಕ ಕಾರಣಗಳಿಂದಾಗಿ ಕಳೆದೊಂದು ವರ್ಷದಿಂದ ಅಡುಗೆಯವರು, ವಾರ್ಡನ್ ಹಾಗೂ ಶಿಕ್ಷಕರ ನಡುವೆ ಕಿತ್ತಾಟ ನಡೆಯುತ್ತಿತ್ತು. ಹಾಸ್ಟೆಲ್ ಸಿಬ್ಬಂದಿಯ ನಡುವೆ ನಡೆಯುತ್ತಿರುವ ಆಂತರಿಕ ಕಲಹದಿಂದ ಬಡ ವಿದ್ಯಾರ್ಥಿನಿಯರು ತೊಂದರೆ ಅನುಭವಿಸುತ್ತಿದ್ದಾರೆ. ಹಾಲಿ ಮುಖ್ಯೋಪಾಧ್ಯಾಯರು ರಜೆ ಮೇಲೆ ತೆರಳಿದ ದಿನವೇ ಸಾರಿನಲ್ಲಿ ವಿಷ ಬೆರೆಸಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

ಸಂಪಾದಕೀಯ ನಿಲುವು

ಇದಕ್ಕೆ ಕಾರಣರಾದವರನ್ನು ಪತ್ತೆ ಹಚ್ಚಿ ಅವರಿಗೆ ಜೀವಾವಧಿ ಶಿಕ್ಷೆ ವಿಧಿಸಿ !