ಜಮ್ಮು ಮತ್ತು ಕಾಶ್ಮೀರ ಹಾಗೂ ಹರಿಯಾಣ ರಾಜ್ಯಗಳ ವಿಧಾನಸಭೆ ಚುನಾವಣೆ ಘೋಷಣೆ

  • ಜಮ್ಮು-ಕಾಶ್ಮೀರದಲ್ಲಿ ಸೆಪ್ಟೆಂಬರ್ 18, ಸೆಪ್ಟೆಂಬರ್ 25 ಮತ್ತು ಅಕ್ಟೋಬರ್ 1 ರಂದು ಮತದಾನ

  •  ಹರಿಯಾಣದಲ್ಲಿ ಅಕ್ಟೋಬರ್ 1 ರಂದು ಮತದಾನ

  • ಅಕ್ಟೋಬರ್ 4 ರಂದು ಫಲಿತಾಂಶ

ನವದೆಹಲಿ – ಜಮ್ಮು-ಕಾಶ್ಮೀರದಲ್ಲಿ ಸೆಪ್ಟೆಂಬರ್ 18, 25 ಮತ್ತು ಅಕ್ಟೋಬರ್ 1 ರಂದು ಹೀಗೆ 3 ಹಂತಗಳಲ್ಲಿ ಹಾಗೂ ಹರಿಯಾಣದಲ್ಲಿ ಅಕ್ಟೋಬರ್ 1 ರಂದು ವಿಧಾನಸಭೆ ಚುನಾವಣೆ ನಡೆಯಲಿದೆ. ಅಕ್ಟೋಬರ್ 4 ರಂದು ಮತ ಎಣಿಕೆ ನಡೆಯಲಿದೆ ಎಂದು ಕೇಂದ್ರ ಚುನಾವಣಾ ಆಯೋಗ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಪ್ರಕಟಿಸಿದೆ. ಡಿಸೆಂಬರ್ 11, 2023 ರಂದು, ಸರ್ವೋಚ್ಚ ನ್ಯಾಯಾಲಯ ಜಮ್ಮು-ಕಾಶ್ಮೀರದಲ್ಲಿ ಸೆಪ್ಟೆಂಬರ್ 30, 2024 ರೊಳಗೆ ವಿಧಾನಸಭಾ ಚುನಾವಣೆಗಳನ್ನು ನಡೆಸುವಂತೆ ಚುನಾವಣಾ ಆಯೋಗಕ್ಕೆ ನಿರ್ದೇಶನ ನೀಡಿತ್ತು. ಆದಷ್ಟು ಬೇಗ ಜಮ್ಮು-ಕಾಶ್ಮೀರಕ್ಕೆ ರಾಜ್ಯದ ಸ್ಥಾನಮಾನವನ್ನು ಹಿಂದಿರುಗಿಸಬೇಕು ಎಂದೂ ಹೇಳಿತ್ತು.

2014ರಲ್ಲಿ ಜಮ್ಮು-ಕಾಶ್ಮೀರದಲ್ಲಿ ಚುನಾವಣೆ ನಡೆದಿತ್ತು. 2019 ರಲ್ಲಿ 370 ನೇ ವಿಧಿಯನ್ನು ತೆಗೆದುಹಾಕಿದ ನಂತರ, ಇಲ್ಲಿ ರಾಷ್ಟ್ರಪತಿ ಆಳ್ವಿಕೆಯನ್ನು ಜಾರಿ ಗೊಳಿಸಲಾಗಿತ್ತು. ಕೇಂದ್ರಾಡಳಿತ ಪ್ರದೇಶವಾದ ನಂತರ, ರಾಜ್ಯಪಾಲರ ಆಡಳಿತ ಜಾರಿಯಲ್ಲಿದೆ. ಜಮ್ಮು-ಕಾಶ್ಮೀರದಲ್ಲಿ 90 ವಿಧಾನಸಭಾ ಸ್ಥಾನಗಳಿವೆ. ಇವುಗಳಲ್ಲಿ 47 ಕಾಶ್ಮೀರದಲ್ಲಿದ್ದರೆ, 43 ಜಮ್ಮುವಿನಲ್ಲಿವೆ.