ಮಂಗಳೂರು – ರಾಜ್ಯದಲ್ಲಿ ಭಾರಿ ಸಂಚಲನ ಮೂಡಿಸಿದ್ದ ಮಂಗಳೂರು ಹೋಂ ಸ್ಟೇ ದಾಳಿ ಪ್ರಕರಣದ ಎಲ್ಲಾ ಆರೋಪಿಗಳು ಖುಲಾಸೆಗೊಂಡಿದ್ದಾರೆ. ಮಂಗಳೂರಿನ ಆರನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ೧೨ ವರ್ಷಗಳ ಬಳಿಕ ಈ ಮಹತ್ವದ ತೀರ್ಪು ನೀಡಿದೆ. ಪ್ರಕರಣದ ಬಗ್ಗೆ ಸಾಕ್ಷ್ಯಾಧಾರಗಳ ಕೊರತೆಯಿಂದ ಆರೋಪಿಗಳ ಖುಲಾಸೆಯಾಗಿದೆ ಎಂದು ಆರನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಕಾಂತರಾಜು ತೀರ್ಪು ನೀಡಿದ್ದಾರೆ.
೨೦೧೨ರ ಜುಲೈ ೨೮ರಂದು ಹಿಂದೂ ಜಾಗರಣಾ ವೇದಿಕೆಯ ಕಾರ್ಯಕರ್ತರು ಮಂಗಳೂರಿನ ಪಡೀಲ್ ನ ಮಾರ್ನಿಂಗ್ ಮಿಸ್ಟ್ ಹೋಂಸ್ಟೇ ಮೇಲೆ ದಾಳಿ ನಡೆಸಿದ್ದರು. ಬರ್ತ್ ಡೇ ಪಾರ್ಟಿಯಲ್ಲಿ ನಿರತರಾಗಿದ್ದ ಯುವಕ-ಯುವತಿಯರ ಮೇಲೂ ತಂಡ ದಾಳಿ ಮಾಡಿತ್ತು ಎಂದು ಮಂಗಳೂರು ಗ್ರಾಮಾಂತರ ಪೊಲೀಸರು ೪೪ ಆರೋಪಿಗಳ ವಿರುದ್ದ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿತ್ತು. ಈ ೪೪ ಆರೋಪಿಗಳಲ್ಲಿ ಮೂವರು ಸಾವನ್ನಪ್ಪಿದ್ದರು. ೪೦ ಆರೋಪಿಗಳನ್ನ ದೋಷ ಮುಕ್ತಗೊಳಿಸಿ ಕೋರ್ಟ್ ತೀರ್ಪು ನೀಡಿದೆ. ನ್ಯಾಯವಾದಿ ಶಂಭುಶರ್ಮಾ, ಕಿಶೋರ್ ಕುಮಾರ್ ಅವರ ತಂಡ ಆರೋಪಿಗಳ ಪರ ವಾದ ಮಂಡಿಸಿತ್ತು. ೧೨ ವರ್ಷಗಳ ಬಳಿಕ ಮಂಗಳೂರು ಕೋರ್ಟ್ ನಿಂದ ಅಂತಿಮ ತೀರ್ಪು ಪ್ರಕಟವಾಯಿತು.